ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತವಾಗಿ ತಾಂತ್ರಿಕ ಶಿಕ್ಷಣ ನೀಡಿ: ರಾಜ್ಯಪಾಲ ವಜುಭಾಯಿ ವಾಲಾ

Last Updated 23 ನವೆಂಬರ್ 2018, 19:47 IST
ಅಕ್ಷರ ಗಾತ್ರ

ಬೆಂಗಳೂರು: ‘ತಾಂತ್ರಿಕ ಶಿಕ್ಷಣವನ್ನುಮುಂದಿನ 10 ವರ್ಷಗಳ ಕಾಲ ಉಚಿತವಾಗಿ ನೀಡಬೇಕು’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು), ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ಮತ್ತು ಸ್ಪ್ರಿಂಜರ್‌ ನೇಚರ್‌ ಸಂಸ್ಥೆಯ ವತಿಯಿಂದ ನಗರದಲ್ಲಿ ಆಯೋಜಿಸಿರುವ ‘ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿಗಳ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ಈಗ ತಾಂತ್ರಿಕ ಶಿಕ್ಷಣದ ದುಬಾರಿಯಾಗಿದೆ. ಆದ್ದರಿಂದ ಎಲ್ಲ ವರ್ಗದ ವಿದ್ಯಾರ್ಥಿಗಳು ಅದನ್ನು ಪಡೆಯಲು ಆಗುತ್ತಿಲ್ಲ. ಆದ್ದರಿಂದ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಮೊದಲಿಗೆ ಉಚಿತ ಶಿಕ್ಷಣ ಅನುಷ್ಠಾನಕ್ಕೆ ತಂದು ಇಡೀ ದೇಶಕ್ಕೆ ಮಾದರಿಯಾಗಬೇಕು’ ಎಂದು ವೇದಿಕೆಯಲ್ಲಿದ್ದ ಉನ್ನತ ಶಿಕ್ಷಣ ಸಚಿವರತ್ತ ನೋಡುತ್ತ ಹೇಳಿದರು.

‘ವಿದ್ಯಾರ್ಥಿಗಳ ಸಂಶೋಧನೆಗಾಗಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಶನಿವಾರ ಮತ್ತು ಭಾನುವಾರವೂ ಪ್ರಯೋಗಾಲಯ ಹಾಗೂ ಗ್ರಂಥಾಲಯಗಳನ್ನು ತೆರೆದಿರಬೇಕು. ಅಲ್ಲಿ ಪ್ರಾಧ್ಯಾಪಕರೊಬ್ಬರನ್ನು ಕಡ್ಡಾಯವಾಗಿ ನಿಯೋಜಿಸಬೇಕು’ ಕುಲಪತಿಗಳಿಗೆ ಕಿವಿಮಾತು ಹೇಳಿದರು.

‘ಚೀನಾದವರುಗ್ಯಾಜೆಟ್‌ಗಳನ್ನು ತರಿಸಿಕೊಳ್ಳುವುದಿಲ್ಲ. ತಂತ್ರಜ್ಞಾನವನ್ನು ಮಾತ್ರ ಆಮದು ಮಾಡಿಕೊಳ್ಳುತ್ತಾರೆ. ಅದರಿಂದಲೇ ಆ್ಯಪಲ್‌ ಫೋನ್‌ಗಳನ್ನು ಮೀರಿಸುವ, ಮೊಬೈಲ್‌ಗಳನ್ನು ತಯಾರಿಸಿ ರಫ್ತು ಮಾಡುತ್ತಾರೆ. ನಾವು ಆ ಮಾರ್ಗ ಅನುಸರಿಸಬೇಕು. ನಮ್ಮ ದೇಶದಲ್ಲಿ ತಯಾರಾದ ವಸ್ತುಗಳನ್ನು ಮಾತ್ರ ನಾವು ಬಳಸಬೇಕು. ಅದರಿಂದ ದೇಶ ಅಭಿವೃದ್ಧಿ ಹೊಂದುತ್ತದೆ. ಆಗ ರಫೆಲ್‌ ಯುದ್ಧವಿಮಾನಗಳನ್ನು ತರಿಸಿಕೊಳ್ಳುವ ಪ್ರಮೆಯವೇ ಬರುವುದಿಲ್ಲ’ ಎಂದಾಗ ನಗುವ ಸರದಿ ಸಭಿಕರದ್ದಾಗಿತ್ತು.

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ,‘ವಿಶ್ವವಿದ್ಯಾಲಯಗಳಲ್ಲಿಕೌಶಲ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ನಾವಿಂದು ಹೇಳಿಕೊಂಡು ತಿರುಗುತ್ತಿದ್ದೇವೆ. ಎಲ್ಲಿದೆ ಅಭಿವೃದ್ಧಿ? ಹಾಗಿದ್ದರೆ, ತಾಂತ್ರಿಕ ಪದವೀಧರರೇಕೆ ನಿರುದ್ಯೋಗಿಗಳಾಗುತ್ತಿದ್ದಾರೆ? ಸರ್ಕಾರ ವಿವಿಗಳಿಗೆ ಬೇಕಾದಷ್ಟು ಅನುದಾನ ನೀಡುತ್ತಿದೆ. ಅದು ಸರಿಯಾಗಿ ಬಳಕೆಯಾಗಿದ್ದರೆ, ಈ ಸಮಸ್ಯೆ ಉಳಿಯುತ್ತಿರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಾವಿರಾರು ರೂಪಾಯಿಗಳನ್ನು ಸಂಬಳವಾಗಿ ಪಡೆಯುವ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಗುಣಾತ್ಮಕ, ಮೌಲ್ಯಾಧಾರಿತ ಮತ್ತು ಉದ್ಯೋಗ ಆಧಾರಿತ ಶಿಕ್ಷಣ ನೀಡಲು ಪ್ರಾಮಾಣಿಕವಾಗಿ ಶ್ರಮಿಸಬೇಕು’ ಎಂದು ಅವರು ಕಿವಿಮಾತು ಹೇಳಿದರು.

‘ನಾಲ್ಕು ವರ್ಷದ ಬಳಿಕ ಓಪನ್‌ ಬುಕ್‌ ಎಕ್ಸಾಂ’

ಎಐಸಿಟಿಇ ಅಧ್ಯಕ್ಷ ಅನಿಲ್ ಸಹಸ್ರಬುದ್ಧೆ ಮಾತನಾಡುತ್ತ, ‘ಎಐಸಿಟಿಇ ರೂಪಿಸಿದ ಪಠ್ಯಗಳನ್ನು, ಹೊರಡಿಸಿದ ಆದೇಶಗಳನ್ನು ವಿವಿಗಳು, ಕಾಲೇಜುಗಳು ಯತಾವತ್ತಾಗ ಪಾಲಿಸಬೇಕು ಎಂಬ ಶಾಸನವಿಲ್ಲ. ಓಪನ್‌ ಬುಕ್ ಎಕ್ಸಾಂನಂತಹ ಪದ್ಧತಿ ಸೂಕ್ತ ಎನಿಸಿದರೆ, ಸ್ವಾಯತ್ತ ಶಿಕ್ಷಣ ಸಂಸ್ಥೆಗಳು ಅದನ್ನು ಅಳವಡಿಸಿಕೊಳ್ಳಬಹುದು’ ಎಂದರು.

‘ಈ ವರ್ಷದಿಂದ ಸುಧಾರಿತ ಪಠ್ಯಕ್ರಮ ಅಳವಡಿಸಿಕೊಂಡಿದ್ದೇವೆ. ಅದನ್ನು ಬದಲಾಯಿಸಲು ನಾಲ್ಕು ವರ್ಷ ಕಾಲಾವಕಾಶವಿದೆ. ಹಾಗಾಗಿ ಸದ್ಯಕ್ಕೆ ಓಪನ್‌ ಬುಕ್ ಎಕ್ಸಾಂ ಪರಿಚಯಿಸುವುದಿಲ್ಲ. ಹಾಗೊಂದು ವೇಳೆ ತಂದರು, ಕೆಲವೇ ವಿಷಯಗಳಿಗೆ ಸೀಮಿತಗೊಳಿಸುತ್ತೇವೆ’ ಎಂದು ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಸ್ಪಷ್ಟಪಡಿಸಿದರು.

ವರ್ಚುವಲ್‌ ಲೈಬ್ರರಿಗೆ ಚಾಲನೆ

ಸ್ಪ್ರಿಂಜರ್‌ ನೇಚರ್‌ ಸಂಸ್ಥೆಯ ಸಹಯೋಗದಲ್ಲಿ ರೂಪಿಸಿರುವ ವಿಟಿಯು ವರ್ಚುವಲ್‌ ಲೈಬ್ರರಿಗೆ ಸಮಾವೇಶದಲ್ಲಿ ಚಾಲನೆ ನೀಡಲಾಯಿತು. ವಿವಿಯೊಂದು ರೂಪಿಸಿದ ದೇಶದ ಮೊದಲ ಡಿಜಿಟಲ್‌ ಲೈಬ್ರರಿ ಇದಾಗಿದೆ.

‘ಈ ಡಿಜಿಟಲ್‌ ಗ್ರಂಥಾಲಯದ ಲಿಂಕ್‌ ಅನ್ನು ವಿಟಿಯು ಜಾಲತಾಣದಲ್ಲಿ ಕೆಲವೇ ದಿನಗಳಲ್ಲಿ ನೀಡುತ್ತೇವೆ. ವಿಟಿಯು ವ್ಯಾಪ್ತಿಯ ವಿದ್ಯಾರ್ಥಿಗಳು ಮಾತ್ರ ಇದನ್ನು ಬಳಸಬಹುದು. ಪ್ರತಿವಿದ್ಯಾರ್ಥಿಗೆ ಲಾಗಿನ್‌ ಐ.ಡಿ ಮತ್ತು ಪಾಸ್‌ವರ್ಡ್‌ ಇರುತ್ತದೆ. ಅದನ್ನು ಬಳಸಿ, ಲೈಬ್ರರಿಯಲ್ಲಿನ 16,000 ಪುಸ್ತಕಗಳಲ್ಲಿನ ವಿಷಯ ತಿಳಿಯಬಹುದು’ ಎಂದು ಡಾ.ಕರಿಸಿದ್ದಪ್ಪ ಮಾಹಿತಿ ನೀಡಿದರು.

‘ನಿರ್ದಿಷ್ಟ ಪುಟದ ಪ್ಯಾರಾವನ್ನು ನೋಟ್ಸ್‌ ಆಗಿ ಗುರುತು ಮಾಡಿಕೊಳ್ಳಲು ಆಯ್ಕೆ ಇದರಲ್ಲಿದೆ. ಇದನ್ನು ಮೊಬೈಲ್‌ಗಳಲ್ಲೂ ಬಳಸುವಂತಾಗಲು ತಂತ್ರಾಂಶ ಅಭಿವೃದ್ಧಿಪಡಿಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT