ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ ಸ್ನೇಹಿಯಾದ ಪಠ್ಯಪುಸ್ತಕ

ಕಲಿಕೆ ಸರಳಗೊಳಿಸುವ ‘ಕ್ಯೂಆರ್‌ ಕೋಡ್‌’
Last Updated 14 ಜುಲೈ 2019, 20:00 IST
ಅಕ್ಷರ ಗಾತ್ರ

ಚಿತ್ರದುರ್ಗ: ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ಮಕ್ಕಳಿಗೆ ಪರಿಣಾಮಕಾರಿಯಾಗಿ ಕಲಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ‘ಕ್ಯೂಆರ್‌ ಕೋಡ್‌’ ಸಹಿತ ಪಠ್ಯಪುಸ್ತಕ ಮುದ್ರಿಸಲಾಗಿದೆ. ಪಠ್ಯಕ್ಕೆ ಪೂರಕವಾದ ಮಾಹಿತಿ ಬೆರಳ ತುದಿಯಲ್ಲೇ ಸಿಗುತ್ತಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಕಲಿಕಾ ಉತ್ಸಾಹ ಹೆಚ್ಚಿಸಿದೆ.

ಕರ್ನಾಟಕ ಪಠ್ಯಪುಸ್ತಕ ಸೊಸೈಟಿ ಶಾಲೆಗಳಿಗೆ ಪೂರೈಸಿದ ಪುಸ್ತಕಗಳಲ್ಲಿ ‘ಕ್ಯೂಆರ್‌ ಕೋಡ್‌’ ಲಭ್ಯವಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ರೂಪಿಸಿದ ವಿಡಿಯೊಗಳು ಕ್ಷಣಾರ್ಧದಲ್ಲಿ ಸಿಗುತ್ತವೆ. ತಂತ್ರಜ್ಞಾನ ಆಧಾರಿತ ಕಲಿಕೆಗೆ ಇದು ನೆರವಾಗುತ್ತಿದೆ.

6, 7, 9 ಹಾಗೂ ಎಸ್ಸೆಸ್ಸೆಲ್ಸಿಯ ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್‌ ಪಠ್ಯಪುಸ್ತಕಗಳಲ್ಲಿ ಮಾತ್ರ ಈ ಸೌಲಭ್ಯ ಕಲ್ಪಿಸಲಾಗಿದೆ. ಎಲ್ಲ ತರಗತಿಗಳ ಎಲ್ಲ ಪಠ್ಯಕ್ಕೂ ಈ ವ್ಯವಸ್ಥೆ ಕಲ್ಪಿಸಲು ಶಿಕ್ಷಣ ಇಲಾಖೆ ಶ್ರಮಿಸುತ್ತಿದೆ. ಸಂಬಂಧಿಸಿದ ವಿಡಿಯೊ ನಿರ್ಮಾಣಕ್ಕೆ ಶಿಕ್ಷಕರು ಹಾಗೂ ತಜ್ಞರು ಶ್ರಮಿಸುತ್ತಿದ್ದಾರೆ.

ಪಠ್ಯಪುಸ್ತಕದ ಮುಖಪುಟದಲ್ಲಿಯೇ ‘ಕ್ಯೂಆರ್‌ ಕೋಡ್‌’ ಇದೆ. ಪುಟ ತಿರುವಿದ ಬಳಿಕ ಇದರ ಬಳಕೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ. ಪ್ರತಿ ಅಧ್ಯಾಯದಲ್ಲಿ ‘ಕ್ಯೂಆರ್‌ ಕೋಡ್‌’ ಮುದ್ರಿಸಲಾಗಿದೆ. ಅಧ್ಯಾಯಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಇದು ಒದಗಿಸುತ್ತದೆ.

ಈ ವಿಡಿಯೊ ವೀಕ್ಷಿಸಲು ‘ದೀಕ್ಷಾ’ ಎಂಬ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡರೆ ಸಾಕು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಪ್ರವೇಶಿಸುವ ವ್ಯವಸ್ಥೆ ಇಲ್ಲಿದೆ. ತರಗತಿ, ಮಾಧ್ಯಮದ ವಿವರವನ್ನು ಒದಗಿಸುವುದು ಕಡ್ಡಾಯ. ಸ್ಕ್ಯಾನರ್‌ ತೆರೆದು ‘ಕ್ಯೂಆರ್‌ ಕೋಡ್‌’ ಮೇಲೆ ಹಿಡಿಯಬೇಕು. ಸಂಬಂಧಿಸಿದ ಎಲ್ಲ ವಿಡಿಯೊಗಳು ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಸಿಗುತ್ತವೆ.

ಬೋಧನೆಗೆ ಸಿದ್ಧತೆ ಮಾಡಿಕೊಳ್ಳಲು ಶಿಕ್ಷಕರಿಗೆ ಅನುಕೂಲವಾಗುವ ವಿಡಿಯೊ ತುಣುಕುಗಳು ಕೂಡ ಇಲ್ಲಿವೆ. 12ರಿಂದ 30 ನಿಮಿಷ ಅವಧಿಯ ವಿಡಿಯೊಗಳು ಇವು. ಮಕ್ಕಳ ಕಲಿಕಾ ಮಟ್ಟ ಪರೀಕ್ಷಿಸಲು ಪ್ರಶ್ನೋತ್ತರ ಮಾದರಿಯನ್ನೂ ನೀಡಲಾಗಿದೆ.

‘ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ನಿರ್ದೇಶನದ ಮೇರೆಗೆ 2018–19ರಲ್ಲಿ 5ನೇ ತರಗತಿಯ ಪಠ್ಯದಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿತ್ತು. ಪೂರ್ವ ಸಿದ್ಧತೆಯೊಂದಿಗೆ ನಾಲ್ಕು ತರಗತಿಗಳ ಪಠ್ಯಕ್ಕೆ ಇದನ್ನು ಅಳವಡಿಸಲಾಗಿದೆ. ಈ ಬಗ್ಗೆ ಎಲ್ಲ ಶಿಕ್ಷಕರಿಗೂ ಮಾಹಿತಿ ಇಲ್ಲ. ಹೀಗಾಗಿ, ತರಬೇತಿ ನೀಡಲಾಗುತ್ತಿದೆ. ಇದನ್ನು ಪೋಷಕರೂ ಅರಿತರೆ ಒಳ್ಳೆಯದು’ ಎನ್ನುತ್ತಾರೆ ಡಯಟ್‌ ಉಪನ್ಯಾಸಕಿ ಸೌಮ್ಯಾ ಕುಮಾರಿ.

**

ಪಠ್ಯಕ್ಕೆ ಪೂರಕವಾದ ಮಾಹಿತಿಯನ್ನು ಜಾಲತಾಣದಲ್ಲಿ ಹುಡುಕಲು ಕಷ್ಟಪಡಬೇಕಿತ್ತು. ಕ್ಯೂಆರ್‌ ಕೋಡ್‌ ವ್ಯವಸ್ಥೆಯಿಂದ ಇದು ಸರಳೀಕೃತಗೊಂಡಿದೆ. ಮಕ್ಕಳು ಹೆಚ್ಚು ಸಂತಸಗೊಂಡಿದ್ದಾರೆ
–ಬಿ.ಆರ್‌.ಸುಜಾತಾ, ಶಿಕ್ಷಕಿ,ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಐಮಂಗಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT