ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಲ್ಲಿ ಬೇಕು ತಂತ್ರಜ್ಞಾನ

Last Updated 5 ಜೂನ್ 2020, 3:41 IST
ಅಕ್ಷರ ಗಾತ್ರ

ಕೊರೊನಾ ಸೋಂಕು ಸೃಷ್ಟಿಸಿದ ಬಿಕ್ಕಟ್ಟಿನ ಪರಿಣಾಮ, ದೇಶದ ಶಾಲೆಗಳು, ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು ಆಫ್‌ಲೈನ್‌ನಿಂದ ಆನ್‌ಲೈನ್‌ ಬೋಧನಾ ಪ್ರಕ್ರಿಯೆಯ ಕಡೆಗೆ ಹೊರಳಿವೆ. ಹೆಚ್ಚಿನ ಅನುಭವ ಇಲ್ಲದವರು, ಆನ್‌ಲೈನ್‌ ವ್ಯವಸ್ಥೆಗೆ ಇದುವರೆಗೆ ತೆರೆದುಕೊಳ್ಳದೇ ಇದ್ದವರು ಸಹ ಈ ಹೊಸ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವು ಸವಾಲುಗಳ ನಡುವೆಯೂ ವಿದ್ಯಾರ್ಥಿಗಳು ಆಸಕ್ತಿಯಿಂದ ಇ–ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಹಾಗೆಯೇ ದೊಡ್ಡ ಸಂಖ್ಯೆಯ ಕ್ರಿಯಾಶೀಲ ಶಿಕ್ಷಕರು ಸಹ ಸ್ವತಂತ್ರವಾಗಿ ಆನ್‌ಲೈನ್‌ ಬೋಧನೆಯಲ್ಲಿ ಭಿನ್ನ ಪ್ರಯೋಗ, ಪ್ರಯತ್ನಗಳಲ್ಲಿ ತೊಡಗಿದ್ದಾರೆ.

ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ 15ಕ್ಕೂ ಅಧಿಕ ಇ–ಪ್ಲಾಟ್‌ಫಾರ್ಮ್‌ಗಳಿವೆ. ದೀಕ್ಷಾ, ನಿಷ್ಠ, ಸ್ವಯಂ, ಸ್ವಯಂಪ್ರಭಾ, ಪಿಜಿ ಪಾಠಶಾಲಾ, ಶೋಧಗಂಗಾ, ಇ–ಶೋಧಸಿಂಧು, ಇ–ಯಂತ್ರ, ವರ್ಚ್ಯುವಲ್‌ ಲ್ಯಾಬ್ಸ್‌, ಸಮರ್ಥ, ವಿದ್ವಾನ್‌, ಶೋಧ ಸುಧಿ ಅವುಗಳಲ್ಲಿ ಮುಖ್ಯವಾದವು. ಇಲ್ಲಿಯವರೆಗೆ ನಿಧಾನಗತಿಯಲ್ಲಿ ನಡೆಯುತ್ತಿದ್ದ ಶಿಕ್ಷಣದ ಆನ್‌ಲೈನ್‌ ಪ್ರಕ್ರಿಯೆ ಈಗ ವೇಗ ಪಡೆದುಕೊಂಡಿರುವುದಕ್ಕೆ ಇದು ಸಾಕ್ಷಿಯಾಗಿದೆ. ಶೈಕ್ಷಣಿಕ ವ್ಯವಸ್ಥೆ ಮತ್ತು ಸಮುದಾಯದಲ್ಲಿ ಬದಲಾವಣೆಯ ಇಚ್ಛಾಶಕ್ತಿ ಹಾಗೂ ಮುಕ್ತಭಾವ ಎದ್ದು ಕಾಣುತ್ತಿರುವ ಅಂಶವಾಗಿದೆ.

ಶಿಕ್ಷಣದ ಎಲ್ಲ ಸಮಸ್ಯೆಗಳಿಗೆ ಆನ್‌ಲೈನ್‌ ಕಲಿಕೆಯೇ ‘ರಾಮಬಾಣ’ ಹಾಗೂ ‘ಪರಿಹಾರ’ ಎನ್ನುವುದು ಹಲವರ ವಾದವಾಗಿರಬಹುದು. ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳಿಗಾಗಿ ಕೆಲವರು ಈ ಪ್ರಕ್ರಿಯೆಯನ್ನು ವಿರೋಧಿಸಲೂಬಹುದು. ವಿಷಯವನ್ನು ಸರಿಯಾಗಿ
ಗ್ರಹಿಸದಿರುವುದೇ ಇಲ್ಲಿನ ಮುಖ್ಯ ಸಮಸ್ಯೆ. ವಾಸ್ತವವಾಗಿ ಇಲ್ಲಿ ಪ್ರಶ್ನೆಯಾಗಿರುವುದು ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಬಳಕೆ ಮಾಡುವ ವಿಷಯವೇ ಹೊರತು, ಆನ್‌ಲೈನ್‌ ಕಲಿಕೆಯದ್ದಲ್ಲ. ಎರಡರ ಮಧ್ಯೆ ಅಜಗಜಾಂತರವಿದೆ.

ಶಿಕ್ಷಣದಲ್ಲಿ ತಂತ್ರಜ್ಞಾನ ಎನ್ನುವುದು ಆನ್‌ಲೈನ್‌ ಕಲಿಕೆಗಿಂತ ಹೆಚ್ಚು ವಿಸ್ತಾರ ಹಾಗೂ ಮಹತ್ವದ ಸಂಗತಿಯಾಗಿದೆ. ಶಿಕ್ಷಕರನ್ನು ಹೊಸ ವ್ಯವಸ್ಥೆಗೆ ಸನ್ನದ್ಧಗೊಳಿಸುವುದು ಹಾಗೂ ಅವರ ಕೌಶಲವನ್ನು ಅಭಿವೃದ್ಧಿಪಡಿಸುವುದು, ಕಲಿಯುವಿಕೆ, ಕಲಿಸುವಿಕೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಬದಲಾವಣೆ ತರುವುದು, ಶೈಕ್ಷಣಿಕ ಸೌಲಭ್ಯಗಳ ಲಭ್ಯತೆ, ಶೈಕ್ಷಣಿಕ ಯೋಜನೆ, ಆಡಳಿತ ಮತ್ತು ವ್ಯವಸ್ಥಾಪನೆ – ಎಲ್ಲವನ್ನೂ ಸಮಗ್ರವಾಗಿ ಒಳಗೊಂಡಿದೆ ಈ ಅಂಶ. ಆನ್‌ಲೈನ್‌ ಕಲಿಕೆಯ ಸಂಕುಚಿತ ವಿಷಯದ ಕುರಿತು ಚರ್ಚಿಸುವುದಕ್ಕಿಂತ, ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಕೆಯ ವಿಸ್ತರಿತ ವಿಷಯದ ಕುರಿತು ನಾವೀಗ ಚಿಂತಿಸಬೇಕಾಗಿದೆ.

ಕೇಂದ್ರ ಸರ್ಕಾರಕ್ಕೆ 2019ರಲ್ಲಿ ಸಲ್ಲಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿನಲ್ಲಿ ‘ಶಿಕ್ಷಣದಲ್ಲಿ ತಂತ್ರಜ್ಞಾನ’ ಎಂಬ ವಿಭಾಗವನ್ನೇ ಸೇರ್ಪಡೆ ಮಾಡ ಲಾಗಿದೆ. ಶಿಕ್ಷಣದ ಎಲ್ಲ ಹಂತಗಳಲ್ಲಿ ಸೂಕ್ತ ತಂತ್ರಜ್ಞಾನದ ಅಳವಡಿಕೆಗೆ ಅದರಲ್ಲಿ ಒತ್ತು ನೀಡಲಾಗಿದೆ. ಸ್ವತಂತ್ರವಾದ ರಾಷ್ಟ್ರೀಯ ಶಿಕ್ಷಣ ತಂತ್ರಜ್ಞಾನ ವೇದಿಕೆಯನ್ನು ರಚಿಸಬೇಕೆಂದೂ ಶಿಫಾರಸು ಮಾಡಲಾಗಿದೆ. ಶಿಕ್ಷಣದ ವಿವಿಧ ಹಂತಗಳಲ್ಲಿ ತಂತ್ರಜ್ಞಾನವನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬ ವಿಷಯವಾಗಿ ಅಭಿಪ್ರಾಯ ಸಂಗ್ರಹಿಸಿ, ಅದಕ್ಕೆ ತಕ್ಕಂತೆ ಕಾರ್ಯತಂತ್ರ ರೂಪಿಸಲು ಈ ವೇದಿಕೆಯಿಂದ ಸಾಧ್ಯವಾಗಲಿದೆ ಎನ್ನುವುದು ಶಿಫಾರಸಿನ ಹಿಂದಿನ ಉದ್ದೇಶ.

ನೀತಿ ನಿರೂಪಣೆ ಹಾಗೂ ನಿರ್ಧಾರದ ಹಂತದಲ್ಲಿ ಇಂತಹದ್ದೊಂದು ವ್ಯವಸ್ಥೆ ಇಲ್ಲದಿದ್ದರೆ ಸರ್ಕಾರಗಳು, ಸಂಸ್ಥೆಗಳು ಹಾಗೂ ವ್ಯಕ್ತಿಗಳು ಕೈಗೊಳ್ಳುವ ತೀರ್ಮಾನಗಳು ಅಪರಿಪೂರ್ಣ ಹಾಗೂ ತಾತ್ಕಾಲಿಕ ಆಗಿರುತ್ತವೆ. ಹೀಗಾಗಿ ಆನ್‌ಲೈನ್‌ ಕಲಿಕೆಯೂ ಸೇರಿದಂತೆ ಶಿಕ್ಷಣದಲ್ಲಿ ತಂತ್ರಜ್ಞಾನದ ಅಳವಡಿಕೆ ಸಂಬಂಧ ವ್ಯವಸ್ಥೆಯೊಂದನ್ನು ರೂಪಿಸುವುದು ಇಂದಿನ ಅಗತ್ಯವಾಗಿದೆ. ಆಗಮಾತ್ರ ಶಿಕ್ಷಣ ಮತ್ತು ಸಮಾಜ ತಂತ್ರಜ್ಞಾನದ ಲಾಭವನ್ನು ಪೂರ್ಣವಾಗಿ ಪಡೆಯಲು ಸಾಧ್ಯವಾಗಲಿದೆ.

ಲೇಖಕ: ಶಿಕ್ಷಣ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT