ಬುಧವಾರ, ಜನವರಿ 29, 2020
27 °C

ಅಕ್ಷರ ವಂಚಿತರ, ಶ್ರಮಿಕರ ಕ್ಷಮೆ ಕೇಳಲಿ ತೇಜಸ್ವಿ ಸೂರ್ಯ: ಕಾಂಗ್ರೆಸ್‌, ಜೆಡಿಎಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎದೆ ಸೀಳಿದರೆ ಒಂದು ಅಕ್ಷರ ಇಲ್ಲದವರು, ಪಂಕ್ಚರ್‌ ಅಂಗಡಿ ಹಾಕಿಕೊಂಡವರು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದ ಹೆಸರಲ್ಲಿ ಗಲಭೆಗಳು ನಡೆಯುತ್ತಿದ್ದಾರೆ ಎಂಬ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ವಿರುದ್ಧ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಿಡಿಕಾರಿವೆ. ತೇಜಸ್ವಿ ಸೂರ್ಯ ಕೂಡಲೆ ಅಕ್ಷರ ವಂಚಿತ ವರ್ಗ ಮತ್ತು ಶ್ರಮಿಕ ವರ್ಗದ ಕ್ಷಮೆ ಕೇಳಬೇಕು ಎಂದು  ಆಗ್ರಹಿಸಿವೆ. 

ಈ ಕುರಿತು ಎರಡೂ ಪಕ್ಷಗಳೂ ಟ್ವೀಟ್‌ ಮೂಲಕ ಟೀಕೆಗಳ ಸುರಿಮಳೆಗೈದಿವೆ. 

ದುಡಿಯುವ ,ಶ್ರಮಿಕ ವರ್ಗ, ದಲಿತ, ಹಿಂದುಳಿದ ವರ್ಗಗಳಿಗೆ ಮಾಡಿದ ಅಪಮಾನ: ಕಾಂಗ್ರೆಸ್‌ 

ತೇಜಸ್ವಿ ಸೂರ್ಯ ಎಂಬ ಜಾತಿವಾದಿ, ಶ್ರೇಷ್ಠತೆಯ ವ್ಯಸನಿಯ ಈ ಮಾತು ತೀವ್ರ ಖಂಡನೀಯ. ಪ್ರತಿಭಟಿಸುವ ಹಕ್ಕು, ಬದುಕುವ ಹಕ್ಕು ವರ್ಗಶ್ರೇಷ್ಠರಿಗೆ, ಜಾತಿಶ್ರೇಷ್ಠರಿಗೆ, ವಿದ್ಯೆಶ್ರೇಷ್ಠರಿಗೆ ಮಾತ್ರವಿದೆ ಎಂಬ ಅಸಹ್ಯದ ಮಾತುಗಳಿವು. ದುಡಿಯುವ ,ಶ್ರಮಿಕ ವರ್ಗ, ದಲಿತ, ಹಿಂದುಳಿದ ವರ್ಗಗಳನ್ನು ಅವಮಾನಿಸಲಾಗಿದೆ. ಶತ ಶತಮಾನಗಳಿಂದ ತಳಸಮುದಾಯಗಳನ್ನ ಶೋಷಿಸಿಕೊಂಡು ವಿದ್ಯೆ, ಸಾಮಾಜಿಕ, ಧಾರ್ಮಿಕ ಸಮಾನತೆಯನ್ನ ವಂಚಿಸಿಕೊಂಡು ಬಂದಿರುವ ಪಟ್ಟಭದ್ರ ಹಿತಾಸಕ್ತಿಯ ಮನಸ್ಥಿತಿಯ ತೇಜಸ್ವಿ ಸೂರ್ಯನ ಹೇಳಿಕೆಯಿಂದ ಸಂವಿಧಾನದ ಆಶಯಗಳನ್ನ ಅವಮಾನಿಸಲಾಗಿದೆ, ನಾಡಿನ ಜನತೆಯಲ್ಲಿ ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ. 

ಶ್ರಮಿಕ ವರ್ಗ ಕೈಕಟ್ಟಿ ಕೂತರೆ ದೇಶದ ಪರಿಸ್ಥಿತಿ ಹೇಗಿರುತ್ತದೆ? : ಜೆಡಿಎಸ್‌ 

ಅಕ್ಷರ ಜ್ಞಾನವಿಲ್ಲದವರು ಪ್ರತಿಭಟನೆ ಮಾಡಲು ಅನರ್ಹರು ಎಂದು ಬಿಜೆಪಿಯ ಸಂಸದರಾದ ತೇಜಸ್ವಿ ಸೂರ್ಯ ನೀಡಿರುವ ಹೇಳಿಕೆಯನ್ನು ಜೆಡಿಎಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಶತಮಾನಗಳಿಂದ ತಳ ಸಮುದಾಯಗಳು ವಿದ್ಯೆಯಿಂದ ವಂಚಿತವಾಗಿದ್ದು ಈ ಅನಕ್ಷರಸ್ಥ ಸಮುದಾಯಗಳು ಪ್ರತಿಭಟನೆ ಮಾಡಲೇಬಾರದು ಎಂದಿರುವ ತೇಜಸ್ವಿ ಸೂರ್ಯ ಕೂಡಲೇ ಕ್ಷಮೆಯಾಚಿಸಬೇಕು. ಪಂಕ್ಚರ್ ಹಾಕುವವರ ಎದೆ ಸೀಳಿದರೆ‌ ನಾಲ್ಕು ಅಕ್ಷರ ಇರಲ್ಲ,ಇಂತಹ ಸಣ್ಣ ಪುಟ್ಟ ಕೆಲಸ ಮಾಡುವವರು ಬಂದು ಪ್ರತಿಭಟಿಸುತ್ತಾರೆ ಎಂದು ತಳವರ್ಗಗಳ ಬಗ್ಗೆ ಅಸಹನೆಯಿಂದ ಮಾತನಾಡಿರುವ ತೇಜಸ್ವಿ ಸೂರ್ಯಗೆ ಜ್ಞಾನದ ಅಹಂ ತಲೆಗೇರಿದೆ.ಅನಕ್ಷರಸ್ಥ ಶ್ರಮಿಕ ವರ್ಗ ಕೈಕಟ್ಟಿ ಕೂತರೆ ದೇಶದ ಪರಿಸ್ಥಿತಿ ಹೇಗಿರುತ್ತದೆ ಅನ್ನೋದು ಈ ಅಕ್ಷರಸ್ಥ ಸೂರ್ಯಗೆ ತಿಳಿದಿಲ್ಲವಾ? ಎಂದು ಜೆಡಿಎಸ್‌ ಪ್ರಶ್ನೆ ಮಾಡಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು