ಬುಧವಾರ, ಅಕ್ಟೋಬರ್ 23, 2019
23 °C
ಮೊಬೈಲ್‌, ಸಿಮ್‌ ಬಿಸಾಡಿದ ಅಧಿಕಾರಿ!

ಟೆಲಿಫೋನ್‌ ಕರೆಗಳ ಕದ್ದಾಲಿಕೆ ಪ್ರಕರಣ: ಸಾಕ್ಷ್ಯಾಧಾರ ನಾಶಪಡಿಸಿದ ಎಸಿಪಿ!

Published:
Updated:

ಬೆಂಗಳೂರು: ರಾಜ್ಯದ ಪ್ರಭಾವಿ ರಾಜಕಾರಣಿಗಳು, ಸ್ವಾಮೀಜಿಗಳು ಹಾಗೂ ಅಧಿಕಾರಿಗಳ ದೂರವಾಣಿ ಕರೆಗಳ ಕದ್ದಾಲಿಕೆ ಪ್ರಕರಣದ ಸಾಕ್ಷ್ಯಾಧಾರಗಳನ್ನು ನಾಶಪಡಿಸಲು ಯತ್ನಿಸಿರುವ ಪ್ರಕರಣ ಬಯಲಿಗೆ ಬಂದಿದೆ.

ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಎಸಿಪಿ ಸಾಕ್ಷ್ಯಾಧಾರ ನಾಶ ಪಡಿಸಿರುವ ಆರೋಪ ಎದುರಿಸುತ್ತಿದ್ದು, ಅವರನ್ನು ಸಿಬಿಐ ವಿಚಾರಣೆ ನಡೆಸಿರುವ ಬೆನ್ನಲ್ಲೇ ವರ್ಗಾವಣೆ ಮಾಡಲಾಗಿದೆ. ಪ್ರಕರಣದ ಪ್ರಮುಖ ಆರೋಪಿ, ಹಿರಿಯ ಐಪಿಎಸ್‌ ಅಧಿಕಾರಿಯೊಬ್ಬರ ಸೂಚನೆಯ ಮೇಲೆ ಅವರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಈ ಹಿರಿಯ ಅಧಿಕಾರಿ ಹೇಳಿದ್ದ ರಿಂದಲೇ ಎಸಿಪಿ ಎರಡು ಮೊಬೈಲ್‌ ಮತ್ತು ಎರಡು ಸಿಮ್‌ ಖರೀದಿಸಿದ್ದರು. ಈ ಸಂಖ್ಯೆಗಳಿಗೆ ಬೇಕಾದ ಸಂಖ್ಯೆಗಳ ಸಂಪರ್ಕ ಪಡೆದು ಸಂಭಾಷಣೆ ಕದ್ದಾಲಿಸುತ್ತಿದ್ದರು. ಪ್ರಕರಣ ಕುರಿತು ಸಿಬಿಐ ತನಿಖೆ ಆರಂಭವಾಗುತ್ತಿದ್ದಂತೆ ಅವರು ಫೋನ್‌ ಹಾಗೂ ಸಿಮ್‌ಗಳನ್ನು ಬಿಸಾಡಿದ್ದರು ಎಂದು ಗೊತ್ತಾಗಿದೆ.

ಯಾವುದೇ ದೂರವಾಣಿ ಕರೆಗಳನ್ನು ಕದ್ದಾಲಿಸಲು ಸಂಬಂಧಪಟ್ಟ ಇನ್‌ಸ್ಪೆಕ್ಟರ್‌ ಮಟ್ಟದಿಂದ ಫೈಲ್‌ ಸಿದ್ಧವಾಗಬೇಕು. ಬಳಿಕ ಎಸಿಪಿ ಮತ್ತಿತರ ಹಿರಿಯ ಅಧಿಕಾರಿಗಳ ಸಹಮತದೊಂದಿಗೆ ಗೃಹ ಇಲಾಖೆ ಉನ್ನತ ಅಧಿಕಾರಿಗೆ ಹೋಗುತ್ತದೆ. ಅವರ ಒಪ್ಪಿಗೆಯ ಬಳಿಕ ಫೋನ್‌ ಸೇವೆ ಒದಗಿಸುವ ಕಂಪನಿಗೆ ಪತ್ರ ರವಾನೆಯಾಗುತ್ತದೆ.

ಆನಂತರ, ದೂರವಾಣಿ ಒದಗಿಸುವ ಕಂಪನಿ ಪತ್ರದಲ್ಲಿ ಹೇಳಿರುವ ಸಂಖ್ಯೆಗೆ ಸಂಬಂಧಪಟ್ಟವರ  ಸಂಖ್ಯೆಗಳ ಸಂಪರ್ಕ ಕಲ್ಪಿಸುತ್ತದೆ. ನಿರ್ದಿಷ್ಟ ಅಧಿಕಾರಿಗಳು ದೂರವಾಣಿ ಸಂಭಾಷಣೆಗಳನ್ನು ಕದ್ದು ಆಲಿಸುವುದು ವಾಡಿಕೆ.

ಇಲ್ಲಿನ ಆಡುಗೋಡಿಯಲ್ಲಿರುವ ಸಿಸಿಬಿ ತಾಂತ್ರಿಕ ವಿಭಾಗದಲ್ಲಿ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಲಾಗುತ್ತದೆ. ಕುಖ್ಯಾತ ಕ್ರಿಮಿನಲ್‌ಗಳು, ಸಮಾಜ ಘಾತುಕರು, ಶಂಕಿತ ಭಯೋತ್ಪಾದಕರು, ನಕ್ಸಲರು ಹಾಗೂ ಹೋರಾಟಗಾರರ ದೂರವಾಣಿಗಳನ್ನು ಸಾಮಾನ್ಯವಾಗಿ ಕದ್ದಾಲಿಸಲಾಗುತ್ತದೆ. ಈ ಉದ್ದೇಶಕ್ಕಾಗಿ ವಿವಿಧ ಮೊಬೈಲ್‌ ಸೇವಾ ಕಂಪನಿಗಳ ಸಂಖ್ಯೆಗಳನ್ನು ಬಳಸಲಾಗುತ್ತದೆ.

ಆದರೆ, ಎಸಿಪಿ ಮನೆಯಲ್ಲೇ ಕುಳಿತು ತಮ್ಮ ಎರಡು ಮೊಬೈಲ್‌ಗಳಲ್ಲಿ ದೂರವಾಣಿ ಕರೆಗಳನ್ನು ಕದ್ದಾಲಿಸುತ್ತಿದ್ದರು. ಗೃಹ ಇಲಾಖೆ ಒಪ್ಪಿಗೆಗಾಗಿ ಕಳುಹಿಸಿದ್ದ ಪತ್ರದಲ್ಲಿ ಕದ್ದಾಲಿಕೆಗೆ ಬಳಸಿದ್ದ ಎರಡು ಮೊಬೈಲ್‌ ಸಂಖ್ಯೆ ಗಳನ್ನು ಉಲ್ಲೇಖಿಸಲಾಗಿತ್ತು. ಈ ಸಂಖ್ಯೆ ಯಾವುದೆಂದು ತನಿಖಾಧಿ ಕಾರಿಗಳು ಹುಡುಕಾಡಿದಾಗ ಸತ್ಯಸಂಗತಿ ಬಯಲಾಯಿತು.ಮೊಬೈಲ್‌ ಹಾಗೂ ಸಿಮ್‌ಗಳನ್ನು ಬಿಸಾಡಿದ್ದಾಗಿ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿರುವ ಎಸಿಪಿ, ತನಿಖೆಯ ದಿಕ್ಕು ತಪ್ಪಿಸಲು ಈ ರೀತಿ ಮಾಡಿದ್ದಾಗಿ ಹೇಳಿದ್ದಾರೆ ಎನ್ನಲಾಗಿದೆ.

33 ಮಂದಿ ಪಿಐಗಳಿಗೆ ನೋಟಿಸ್‌

ದೂರವಾಣಿ ಕರೆಗಳ ಕದ್ದಾಲಿಕೆ ಪ್ರಕರಣದಲ್ಲಿ ಬುಧವಾರ ವಿಚಾರಣೆಗೆ ಹಾಜರಾಗುವಂತೆ 33 ಇನ್‌ಸ್ಪೆಕ್ಟರ್‌ಗಳಿಗೆ ಸಿಬಿಐ ನೋಟಿಸ್‌ ನೀಡಿದೆ.

ಈ ಅಧಿಕಾರಿಗಳು ವಿವಿಧ ಪ್ರಕರಣಗಳಲ್ಲಿ ಹಲವಾರು ದೂರವಾಣಿ ಕರೆಗಳನ್ನು ಕದ್ದಾಲಿಸಿದ ಆರೋಪ ಎದುರಿಸುತ್ತಿದ್ದಾರೆ. ಇವರ ವಿಚಾರಣೆ ಮುಗಿದ ಬಳಿಕ ಎಸಿಪಿಗಳನ್ನು ಪ್ರಶ್ನಿಸುವ ಸಾಧ್ಯತೆಯಿದೆ.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)