ಏರುತಲೇ ಇದೆ ಬಿಸಿಲ ತಾಪ

ಗುರುವಾರ , ಮಾರ್ಚ್ 21, 2019
32 °C

ಏರುತಲೇ ಇದೆ ಬಿಸಿಲ ತಾಪ

Published:
Updated:

ಶಿವರಾತ್ರಿ ಮುಗಿಯುತ್ತಿದ್ದಂತೆ ಉದ್ಯಾನನಗರಿ ಬೆಂಗಳೂರಿನಲ್ಲಿ ಬಿಸಿಲಿನ ಝಳ ಹೆಚ್ಚುತ್ತಿದೆ. ವಾರದಿಂದ ಬಿಸಿಲಿನ ತಾಪದಲ್ಲಿ ಏರಿಕೆ ದಾಖಲಾಗುತ್ತಿದೆ. ಗುರುವಾರ ಮತ್ತು ಶುಕ್ರವಾರ ನಗರದಲ್ಲಿ ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ ತಲುಪಿರುವುದನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ದಾಖಲಿಸಿದೆ

ಶುಭ್ರ ವಾತಾವರಣ, ಒಣ ಹವೆಯಿಂದಾಗಿ ನಗರದಲ್ಲಿ ಬಿಸಿಲು ಹೆಚ್ಚುತ್ತಿದ್ದು, ಒಂದೆರಡು ದಿನಗಳಲ್ಲಿ 38 ಡಿ.ಸೆ, ವಾರದಲ್ಲಿ 39 ಡಿ.ಸೆ ತಲುಪುವ ಸಾಧ್ಯತೆ ಇದೆ.

‘ಐಎಂಡಿ ಪ್ರಕಾರ 1996ರ ಮಾರ್ಚ್‌ 29ರಂದು ತಾಪಮಾನ 37.3 ಡಿ.ಸೆ ತಲುಪಿದ್ದು, ಇಲ್ಲಿಯವರೆಗಿನ ದಾಖಲೆಯಾಗಿತ್ತು. 2017ರಲ್ಲಿ 37.2 ಡಿಗ್ರಿ ದಾಖಲಾಗಿತ್ತು. ಈ ವರ್ಷ ಮಾರ್ಚ್‌ ಮೊದಲ ವಾರದಲ್ಲಿನ ತಾಪಮಾನ ಏರಿಕೆಯನ್ನು ಗಮನಿಸಿದರೆ ಒಂದೆರಡು ದಿನಗಳಲ್ಲಿ 1996ರ ದಾಖಲೆಯನ್ನು ಹಿಂದಿಕ್ಕುವ ಸಾಧ್ಯತೆ ಇದೆ’ ಎನ್ನುತ್ತಾರೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಸಿ) ನಿರ್ದೇಶಕ ಡಾ. ಜಿ.ಎಸ್‌.ಶ್ರೀನಿವಾಸ ರೆಡ್ಡಿ.

‘ವಾಡಿಕೆಗಿಂತ ಈ ಬಾರಿ ಬಿಸಿಲು ಹೆಚ್ಚಾಗುತ್ತಿದೆ. ರಾಜ್ಯದ ಉತ್ತರ ಒಳನಾಡಿಗೆ ಸಮನಾಗಿ ಅಥವಾ ಅದಕ್ಕೂ ಹೆಚ್ಚಿನ ತಾಪಮಾನವನ್ನು ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳು ಎದುರಿಸಬೇಕಾಗಬಹುದು. ಒಟ್ಟಾರೆ ಈ ವರ್ಷ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಅಂದಾಜು 1ರಿಂದ 5 ಡಿಗ್ರಿಯಷ್ಟು ತಾಪಮಾನದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ಈ ಭಾಗದ ಜಿಲ್ಲೆಗಳಲ್ಲೂ ತಾಪಮಾನ 38–40 ಡಿ.ಸೆ ದಾಟಬಹುದು’ ಎಂದು ಅವರು ಮಾಹಿತಿ ನೀಡಿದ್ದಾರೆ.‌

ಗಾಬರಿ ಬೇಡ: ಬಿಸಿಲು ಹೆಚ್ಚಾಗುತ್ತಿದೆ ಎಂದು ಜನರು ಗಾಬರಿಗೊಳಗಾಗಬಾರದು. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಬಿಸಿಲಿನ ತಾಪವನ್ನು ಎದುರಿಸುವುದನ್ನು ರೂಢಿಸಿಕೊಳ್ಳಬೇಕು. ಸಾಮಾನ್ಯವಾಗಿ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಬಿಸಿಲು ಪ್ರಖರವಾಗಿರುತ್ತದೆ. ಈ ಅವಧಿಯಲ್ಲಿ ಮಕ್ಕಳು ಮತ್ತು ಹಿರಿಯ ನಾಗರಿಕರು ನೆರಳಿನಲ್ಲಿರುವುದು ಒಳಿತು. ಅದೇ ರೀತಿ ಈ ಅವಧಿಯಲ್ಲಿ ಹೊರಗಡೆ ಬಿಸಿಲಿನಲ್ಲಿ ಕೆಲಸ ಮಾಡುವುದನ್ನು ಕಡಿಮೆ ಮಾಡಬೇಕು. ಹೊರಗೆ ಹೋಗಲೇ ಬೇಕಾದ ಅನಿವಾರ್ಯತೆ ಇದ್ದರೆ ಛತ್ರಿಯನ್ನು ಬಳಸಿ, ಸದಾ ಜೊತೆಯಲ್ಲಿ ನೀರನ್ನು ಇಟ್ಟುಕೊಂಡಿರಬೇಕು ಎಂಬುದು ಅವರು ನೀಡುವ ಸಲಹೆ.

ಬೆಂಗಳೂರಿನ ದಕ್ಷಿಣದಲ್ಲಿ ಹೆಚ್ಚು: ನಗರದ ವಿವಿಧ ಭಾಗಗಳಲ್ಲಿ ಕೆಎಸ್‌ಎನ್‌ಡಿಸಿ ಮಾಪನ ಕೇಂದ್ರಗಳೂ ಇವೆ. ಇಲ್ಲಿನ ಮಾಪನ ಕೇಂದ್ರಗಳ ಪ್ರಕಾರ ಈಗಾಗಲೇ ಬೆಂಗಳೂರಿನ ದಕ್ಷಿಣ ಭಾಗದ ಪ್ರದೇಶಗಳಲ್ಲಿ ಈಗಾಗಲೇ ಮಾರ್ಚ್‌ ಮೊದಲ ವಾರದಲ್ಲಿ ತಾಪಮಾನ 38, 38.1 ಹಾಗೂ 38.2 ಡಿ.ಸೆ ತಲುಪಿದೆ. ಬೆಂಗಳೂರು ದಕ್ಷಿಣ ಭಾಗದ ಪ್ರದೇಶದಲ್ಲಿ 36.7ರಿಂದ 37 ಡಿ.ಸೆ ತಾಪಮಾನ ಇದೆ ಎಂದು ಮಾಹಿತಿ ನೀಡುತ್ತಾರೆ ಕೆಎಸ್‌ಎನ್‌ಡಿಸಿ ಜೂನಿಯರ್‌ ಸೈಂಟಿಫಿಕ್‌ ಆಫೀಸರ್‌ ಎಸ್‌.ಎಸ್‌.ಎಂ. ಗವಾಸ್ಕರ್‌.

ದತ್ತಾಂಶಗಳನ್ನು ವಿಶ್ಲೇಷಿಸಿ ಹೇಳುವುದಾದರೆ, ನಗರದಲ್ಲಿ 10 ವರ್ಷಗಳಲ್ಲಿ ವಾಡಿಕೆಗಿಂತ ತಾಪಮಾನ 2ರಿಂದ 3 ಡಿ.ಸೆ ಹೆಚ್ಚಳವು ಮಾರ್ಚ್‌ ತಿಂಗಳಲ್ಲಿ ದಾಖಲಾಗುತ್ತಾ ಸಾಗಿದೆ. ಅದೂ ಸಾಮಾನ್ಯವಾಗಿ ಮಾರ್ಚ್‌ನ 3 ಅಥವಾ 4ನೇ ವಾರದಲ್ಲಿ ದಾಖಲಾಗುತ್ತಿತ್ತು. ಆದರೆ ಈ ವರ್ಷ ಮಾರ್ಚ್‌ ಮೊದಲ ವಾರದಲ್ಲಿ 37ರಿಂದ 38 ಡಿ.ಸೆ ದಾಖಲಾಗಿದೆ ಎನ್ನುತ್ತಾರೆ ಅವರು.

ಇನ್ನೊಂದು ಗಮನಿಸಬೇಕಾದ ವಿಷಯ ಎಂದರೆ ಹಗಲಿನ ತಾಪಮಾನ ಹೆಚ್ಚಳದ ಜತೆಗೆ ರಾತ್ರಿಯ ತಾಪಮಾನದಲ್ಲೂ ಹೆಚ್ಚಳವಾಗುತ್ತಿದೆ. ಅದೂ ವಾಡಿಕೆಗಿಂತ 2ರಿಂದ 4 ಡಿ.ಸೆ ಹೆಚ್ಚಳವಾಗಿದೆ. ಸಾಮಾನ್ಯವಾಗಿ ರಾತ್ರಿ ವೇಳೆ 18 ಡಿ.ಸೆ ಆಸು ಪಾಸಿನಲ್ಲಿ ಇರಬೇಕಿತ್ತು. ಆದರೆ ಅದೀಗ 21ರಿಂದ 22 ಡಿ.ಸೆ ದಾಖಲಾಗುತ್ತಿದೆ ಎಂದು ಅವರು ವಿವರಿಸಿದರು. 

ಆ ಬೆಂಗಳೂರು, ಸಂಜೆ ಮಳೆ..
ಬೇಸಿಗೆಯಲ್ಲಿ ಕಾರ್ಬನ್‌ ಡೈಆಕ್ಸೈಡ್‌ ಮತ್ತು ವಿಕಿರಣ ವೃದ್ಧಿಯಿಂದ ಆವಿಯಾದ ನೀರು ಘನೀಕರಿಸುವ ಸಾಧ್ಯತೆ ಹೆಚ್ಚುತ್ತದೆ. ಇದರಿಂದ ಮೋಡಗಳ ಕಟ್ಟಿಕೊಳ್ಳುವಿಕೆಗೆ ಅವಕಾಶವಾಗಿ ಮಳೆಯ ಸಂಭವ ಹೆಚ್ಚಿರುತ್ತದೆ. ರಾತ್ರಿ ವೇಳೆ ಗಾಳಿ ತಂಪಾಗಿ ಬೀಸಿದರೆ ತಂಪು ಗಾಳಿ ಕಡಿಮೆ ತೇವಾಂಶವನ್ನು ಹಿಡಿದಿಡುತ್ತದೆ ಇದರ ಪರಿಣಾಮವಾಗಿ ಮಳೆಯಾಗುತ್ತದೆ. ಬೆಂಗಳೂರಿನಲ್ಲಿ ಸಂಜೆ ವೇಳೆಯಲ್ಲಿಯೇ ಮಳೆಯಾಗುವುದಕ್ಕೆ ಇದು ಕಾರಣ. ಈ ಹಿಂದೆ ಅತ್ಯಂತ ತಾಪಮಾನದ ತಿಂಗಳು ಎಂದರೆ ಏಪ್ರಿಲ್‌. ಗರಿಷ್ಠ 30 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿರುತ್ತಿತ್ತು. ಮಾರ್ಚ್‌ನಿಂದ ಮೇ ಬೇಸಿಗೆ. ತಾಪಮಾನ ಹೆಚ್ಚಿದ್ದರೂ ಆಹ್ಲಾದಕರ ವಾತಾವರಣವೇ ಇರುತ್ತಿತ್ತು.
ಆದರೆ, ಕಳೆದ 2016ರ ಏಪ್ರಿಲ್‌ 24ರಂದು ಗರಿಷ್ಠ 39.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಈ ಸಲ ಆಗಲೇ 37 ಡಿ.ಸೆ ದಾಖಲಾಗಿದೆ!

*
ಬಿಸಿಲು ಹೆಚ್ಚಾಗುತ್ತಿದೆ ಎಂದು ಗಾಬರಿಯಾಗಬಾರದು. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಬಿಸಿಲಿನ ತಾಪ ಎದುರಿಸುವುದನ್ನು ರೂಢಿಸಿಕೊಳ್ಳಬೇಕು. ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಬಿಸಿಲು ಪ್ರಖರವಾಗಿರುತ್ತದೆ. ಈ ಅವಧಿಯಲ್ಲಿ ಮಕ್ಕಳು ಮತ್ತು ಹಿರಿಯ ನಾಗರಿಕರು ನೆರಳು ಆಶ್ರಯಿಸುವುದು ಒಳಿತು.
-ಡಾ. ಜಿ.ಎಸ್‌.ಶ್ರೀನಿವಾಸ ರೆಡ್ಡಿ, ಕೆಎಸ್‌ಎನ್‌ಡಿಸಿ ನಿರ್ದೇಶಕ

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !