ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ಬಿಸಿಲು ತಣಿಸಲು ವ್ಯಾಪಾರಿಗಳು ಸಜ್ಜು

Last Updated 5 ಫೆಬ್ರುವರಿ 2018, 6:55 IST
ಅಕ್ಷರ ಗಾತ್ರ

ರಾಯಚೂರು: ದೇಹಕ್ಕೆ ತಂಪು ಕೊಡುವ ಪಾನೀಯಗಳು ಹಾಗೂ ತಂಪು ಸೂಸುವ ಎಲೆಕ್ಟ್ರಾನಿಕ್‌ ಉಪಕರಣಗಳಿಗೆ ಸಹಜವಾಗಿ ಬೇಸಿಗೆಯಲ್ಲಿ ಬೇಡಿಕೆ ಹೆಚ್ಚಾಗುತ್ತದೆ ಎನ್ನುವ ನಿರೀಕ್ಷೆಯೊಂದಿಗೆ ವ್ಯಾಪಾರಿಗಳು ಈಗಾಗಲೇ ಮಾರಾಟಕ್ಕೆ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ.

ಪ್ರಮುಖವಾಗಿ ಎಳನೀರು ಮಾರಾಟಗಾರರು, ಐಸ್‌ಕ್ರೀಮ್‌ ಮಳಿಗೆದಾರರು, ಶುದ್ಧನೀರು ಮಾರಾಟ ಕಂಪೆನಿಗಳು, ಕಬ್ಬಿನಹಾಲು, ಹಣ್ಣು–ಹಂಪಲು ವ್ಯಾಪಾರಿಗಳು, ಲಸ್ಸಿ ಸೇರಿದಂತೆ ಇತರೆ ತಂಪು ಪಾನೀಯ ಮಾರಾಟಗಾರರು ಬೇಸಿಗೆ ವ್ಯಾಪಾರದ ಲೆಕ್ಕಾಚಾರ ಮಾಡುತ್ತಿದ್ದಾರೆ.

ಎಲೆಕ್ಟ್ರಾನಿಕ್‌ ಉಪಕರಣಗಳ ಮಾರಾಟಗಾರರು ಬೇಸಿಗೆಯ ತಯಾರಿ ಮಾಡಿಕೊಳ್ಳುತ್ತಿರುವುದು ವಿಶೇಷವಾಗಿ ಗಮನ ಸೆಳೆಯುತ್ತಿದೆ. ಹವಾನಿಯಂತ್ರಕಗಳು, ಇನ್ವರ್ಟರ್‌, ರೆಫ್ರಿಜೇಟರ್‌, ಕೂಲರ್‌ಗಳು ಹಾಗೂ ಫ್ಯಾನ್‌ ಸೇರಿದಂತೆ ಹಲವು ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಮಾರಾಟ ಮಾಡುವ ಮಳಿಗೆಗಳ ಎದುರು ಲಾರಿಗಳು ಭರ್ತಿ ಮಾಡಿಕೊಂಡು ವಸ್ತುಗಳನ್ನು ತಂತು ಹಾಕುತ್ತಿವೆ. ಹೊರಗಿನಿಂದ ಎಲೆಕ್ಟ್ರಾನಿಕ್‌ ಉಪಕರಣಗಳ ರಾಶಿಗಳು ನಗರಕ್ಕೆ ಬಂದು ದಾಸ್ತಾನಾಗುವುದು ನಿತ್ಯದ ನೋಟ. ಅಂಗಡಿಗಳಲ್ಲಿ ನಿಂತುಕೊಳ್ಳುವುದಕ್ಕೂ ಜಾಗವಿಲ್ಲದಂತೆ ವ್ಯಾಪಾರಿಗಳು ಉಪಕರಣಗಳ ಸಂಗ್ರಹ ಮಾಡಿಕೊಳ್ಳುತ್ತಿದ್ದಾರೆ.

‘ಕಳೆದ ವರ್ಷ ಫೆಬ್ರುವರಿ ಆರಂಭದಲ್ಲೆ ಬೇಸಿಗೆ ಬಿಸಿಲಿನ ಪ್ರಖರತೆ ಆರಂಭವಾಗಿತ್ತು. ಜೂನ್‌ ಅಂತ್ಯದವರೆಗೂ ಎಲೆಕ್ಟ್ರಾನಿಕ್‌ ವಸ್ತುಗಳಿಗೆ ಭಾರಿ ಬೇಡಿಕೆ ಇತ್ತು. ಮಳಿಗೆದಾರರು ದಾಸ್ತಾನು ಮಾಡಿಕೊಂಡಿದ್ದೆಲ್ಲವೂ ಖಾಲಿಯಾಗಿತ್ತು. ಈ ವರ್ಷವೂ ಅದೇ ನಿರೀಕ್ಷೆಯಲ್ಲಿ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ. ಬಹುಶ ಮಾರ್ಚ್‌ ಆರಂಭದಿಂದ ಬಿಸಿಲು ಹೆಚ್ಚಳವಾಗುವ ನಿರೀಕ್ಷೆ ಇದೆ. ಬಿಸಿಲು ಹೆಚ್ಚಾದರೆ ಮಾತ್ರ ದಾಸ್ತಾನು ಮಾಡಿಕೊಂಡಿದ್ದೆಲ್ಲವೂ ಮಾರಾಟ ಆಗುತ್ತದೆ’ ಎಂದು ಎಲೆಕ್ಟ್ರಾನಿಕ್‌ ಸಾಧನಗಳನ್ನು ದುರಸ್ತಿ ಮಾಡುವ ಮೆಹಬೂಬ್‌ ಹೇಳುವ ಮಾತಿದು.

ಬೇಕರಿಗಳಲ್ಲಿ ಹೆಚ್ಚುವರಿ ತಂಪು ಪಾನೀಯಗಳನ್ನು ಹೊಂದಿಸುವುದಕ್ಕೆ ಹಾಗೂ ಇರುವ ಅಂಗಡಿಯಲ್ಲೆ ಹೆಚ್ಚುವರಿ ಮಜ್ಜಿಗೆ ವ್ಯಾಪಾರ ಆರಂಭಿಸಬೇಕು ಎನ್ನುವ ಲೆಕ್ಕಾಚಾರದಿಂದ ಪತ್ಯೇಕ ಜಾಗವನ್ನು ಒಪ್ಪು ಒರಣ ಮಾಡಿಕೊಳ್ಳುತ್ತಿದ್ದಾರೆ. ಬೇಸಿಗೆ ಬಿಸಿಲು ಹೊಸದಲ್ಲ; ಪ್ರತಿ ವರ್ಷ ಇದ್ದೇ ಇರುತ್ತದೆ ಎನ್ನುವ ಸಹಜ ಮನೋಭಾವ ಸಾರ್ವಜನಿಕರಲ್ಲಿದೆ. ಆದರೆ ಬಿಸಿಲಿನ ಕುರಿತು ವ್ಯಾಪಾರಿಗಳಲ್ಲಿ ಚಂಚಲತೆ ಮನೆ ಮಾಡಿದಂತಿದೆ. ಎಷ್ಟು ತಿಂಗಳು ಬಿಸಿಲು ಇರಬಹುದು? ಸಂಗ್ರಹ ಮಾಡಿಟ್ಟುಕೊಂಡಿರುವುದೆಲ್ಲವೂ ಖಾಲಿ ಆಗುತ್ತದೆಯೇ? ಎನ್ನುವ ಹೊಯ್ದಾಟ ಇದೆ.

ಹವಾಮಾನ ಇಲಾಖೆಯ ಹಿಂದಿನ ಹತ್ತು ವರ್ಷಗಳ ಅಂಕಿ ಅಂಶಗಳ ಪ್ರಕಾರ ರಾಯಚೂರಿನಲ್ಲಿ ಫೆಬ್ರುವರಿ ತಿಂಗಳು ಗರಿಷ್ಠ ಉಷ್ಣತೆ ದಾಖಲಾಗಿರುವುದು 2009 ರಲ್ಲಿ. ಫೆಬ್ರುವರಿ 2009 ರಲ್ಲಿ ಗರಿಷ್ಠ ಉಷ್ಣತೆ 38.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. 2017 ಫೆಬ್ರುವರಿಯಲ್ಲಿ ಉಷ್ಣಾಂಶ ಗರಿಷ್ಠ 37.6 ಡಿಗ್ರಿ ಸೆಲ್ಸಿಯಸ್‌ ತಲುಪಿತ್ತು. ಈ ವರ್ಷ ಕೂಡಾ ಸದ್ಯ ಗರಿಷ್ಠ ಉಷ್ಣತೆ 35 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಕ್ರಮೇಣ ಬಿಸಿಲು ಹೆಚ್ಚಾಗುತ್ತದೆ ಎನ್ನುವ ಅಂದಾಜಿದೆ. ಫೆಬ್ರುವರಿ ತಿಂಗಳು ಸರ್ವಕಾಲಿಕ ಗರಿಷ್ಠ ಉಷ್ಣಾಂಶ 40.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು 1998 ರಲ್ಲಿ.

* * 

ಬೇಸಿಗೆಯಲ್ಲಿ ತಂಪು ಕೊಡುವ ಉಪಕರಣಗಳ ಮಾರಾಟ ಮಾತ್ರ ನಡೆಯುವುದಿಲ್ಲ. ಉಪಕರಣಗಳನ್ನು ದುರಸ್ತಿ ಮಾಡುವವರಿಗೂ ಬೇಸಿಗೆಯಲ್ಲಿ ಕೈ ತುಂಬ ಕೆಲಸ ಸಿಗುತ್ತದೆ. ಮೆಹಬೂಬ್‌, ಎಲೆಕ್ಟ್ರಿಷಿಯನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT