ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸಿರಿರುವವರೆಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಮೋಸ ಮಾಡುವುದಿಲ್ಲ: ಎಚ್‌ಡಿಕೆ

ಜೆಡಿಎಸ್ ಅಭ್ಯರ್ಥಿ ಎನ್.ರಾಧಾಕೃಷ್ಣ ಅವರ ಪರ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮತ ಯಾಚನೆ
Last Updated 3 ಡಿಸೆಂಬರ್ 2019, 9:25 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ನಮ್ಮ ಕೊನೆಯ ಉಸಿರು ಇರುವವರೆಗೂ ಈ ಜಿಲ್ಲೆಯ ಜನಕ್ಕೆ ಮೋಸ ಮಾಡುವುದಿಲ್ಲ. ಈ ಚುನಾವಣೆಯಲ್ಲಿ ನೀವು ನನ್ನನ್ನು ಉಳಿಸಿ, ಮುಂದೆ ನಾನು ನಿಮ್ಮನ್ನು ಉಳಿಸಿಕೊಳ್ಳುತ್ತೇನೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಮತದಾರರಿಗೆ ಮನವಿ ಮಾಡಿದರು.

ನಗರದಲ್ಲಿ ಸೋಮವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಜೆಡಿಎಸ್ ಅಭ್ಯರ್ಥಿ ಎನ್.ರಾಧಾಕೃಷ್ಣ ಅವರ ಪರ ಮತ ಯಾಚನೆ ಮಾಡಿ ಮಾತನಾಡಿದ ಅವರು, ‘ಚಿಕ್ಕಬಳ್ಳಾಪುರವನ್ನು ಜಿಲ್ಲೆಯನ್ನಾಗಿ ಮಾಡಿದವನು ನಾನು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ 53 ತಾಲ್ಲೂಕು ಕೇಂದ್ರಗಳು ಘೊಷಣೆಯಾಗಿವೆ. ಆದರೆ ಈವರೆಗೆ ಅವುಗಳಿಗೆ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಗೆ ಅಂದೇ ವೈದ್ಯಕೀಯ ಕಾಲೇಜು ಮಂಜೂರಾಗಿತ್ತು. ಆದರೆ, ಕಾಲೇಜು ತರುವಲ್ಲಿ ಸುಧಾಕರ್ ಮಾತ್ರ ಪ್ರಯತ್ನಿಸಲಿಲ್ಲ’ ಎಂದು ಆರೋಪಿಸಿದರು.

‘ಸಮ್ಮಿಶ್ರ ಸರಕಾರದಲ್ಲಿ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು ನಮ್ಮ ದೌರ್ಬಗ್ಯ ಎಂದು ಕಿಡಿಕಾರುತ್ತ, ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ ಆಗಬೇಕಿತ್ತು ಎಂದಿದ್ದರು. ಇವತ್ತು ಅದೇ ಸುಧಾಕರ್ ಸಿದ್ದರಾಮಯ್ಯ ಅವರ ಬೆನ್ನಿಗೆ ಚೂರಿ ಹಾಕಿ, ಯಡಿಯೂರಪ್ಪ ಅವರನ್ನು ಹಿಡಿದಿದ್ದಾರೆ. ಮೈತ್ರಿ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿ ಕುರ್ಚಿಗೆ ಅಂಟಿಕೊಂಡು ಕುಳಿತಿರಲಿಲ್ಲ. ನಾನು ಅಮೆರಿಕಾದಲ್ಲಿ ಕಾಲ ಭೈರವೇಶ್ವರ ದೇಗುಲದ ಗುದ್ದಲಿ ಪೂಜೆಗೆ ಹೋದ ಸಂದರ್ಭದಲ್ಲಿ ಬಿಜೆಪಿಯವರು ಅನರ್ಹರನ್ನು ಖರೀದಿಸಿ ಸರ್ಕಾರ ಬೀಳಿಸಿದರು’ ಎಂದು ಹೇಳಿದರು.

‘ಇಲ್ಲಿನ ಅನರ್ಹ ಶಾಸಕ ನಾನು ಮುಖ್ಯ ಮಂತ್ರಿಯಾಗಿದ್ದು ಸಹಿಸಲಿಲ್ಲ. ಇಲ್ಲಿನ ದುಷ್ಟ ರಾಜಕಾರಣವನ್ನು ತೆಗೆಯಬೇಕು ಎಂದು ಇಲ್ಲಿನ ಹಲವಾರು ನಾಯಕರು ಕಳೆದ ಒಂದು ತಿಂಗಳಿಂದ ಹಗಲು ರಾತ್ರಿ ದುಡಿಯುತ್ತಿದ್ದಾರೆ. ಈ ದುಡಿಮೆಗೆ ಉಪ ಚುನಾವಣೆಯಲ್ಲಿ ಪ್ರತಿಫಲ ದೊರೆಯುತ್ತದೆ. ಜೆಡಿಎಸ್ ರೈತರ ಪಕ್ಷ. ಈ ದೇಶದಲ್ಲಿ ರೈತರು ಇರುವವರೆಗೂ ಜೆಡಿಎಸ್ ಪಕ್ಷ ಮುಗಿಸಲು, ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಗುಡುಗಿದರು.

‘ಚಿಕ್ಕಬಳ್ಳಾಪುರ ಜಿಲ್ಲೆ ಮಾಡುವ ಜತೆಗೆ ಜಿಲ್ಲಾ ಕೇಂದ್ರಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದೇನೆ. ಕೇವಲ 14 ತಿಂಗಳ ಮೈತ್ರಿ ಸರ್ಕಾರದಲ್ಲಿ ₹25 ಸಾವಿರ ಕೋಟಿಯಷ್ಟು ರೈತರ ಸಾಲ ಮನ್ನಾ ಮಾಡಿರುವೆ. ನಾನು ಮಾಡಿರುವ ತಪ್ಪೇನು?. ನಾನು ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದಿದ್ದೇನೆ. ಬಡವರ ಏಳಿಗೆಗಾಗಿ ರಾಜಕೀಯದಲ್ಲಿ ಉಳಿದಿದ್ದೇನೆ. ರೈತರ ಭೂಮಿಯಲ್ಲಿ ಬಂಗಾರ ಬೆಳೆಯುವ ದೂರದೃಷ್ಟಿ ಹೊಂದಿದ್ದೇನೆ. ಹಣಕ್ಕಾಗಿ ಮತವನ್ನು ಮಾರಿಕೊಳ್ಳಬೇಡಿ. ನನ್ನ ಮೇಲೆ ವಿಶ್ವಾಸವಿಟ್ಟು ಜೆಡಿಎಸ್ ಅಭ್ಯರ್ಥಿ ರಾಧಾಕೃಷ್ಣ ಅವರನ್ನು ಗೆಲ್ಲಿಸಿ. ನನ್ನ ಜೀವನದ ಕೊನೆ ಉಸಿರು ಇರುವವರೆಗೂ ಈ ಜಿಲ್ಲೆಗೆ ಅನ್ಯಾಯ ಮಾಡಲ್ಲ’ ಎಂದು ಭರವಸೆ ನೀಡಿದರು.

ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ‘ರಾಜ್ಯದಲ್ಲಿ ಉಪ ಚುನಾವಣೆ ಅನೀರಿಕ್ಷಿತವಾಗಿ ಬಂದಿದೆ. ಅನರ್ಹರ ಮುಂಬೈ ನಾಟಕ ಜನರೆಲ್ಲ ನೋಡಿದ್ದಾರೆ. ಕುಮಾರಸ್ವಾಮಿ ಅವರಿಗೆ ಚಿಕ್ಕಬಳ್ಳಾಪುರ- ಮತ್ತು ರಾಮನಗರ ಎರಡು ಕಣ್ಣುಗಳಿದಂತೆ. ಈ ಕ್ಷೇತ್ರದ ಅಭಿವೃದ್ಧಿಗೆ ಜೆಡಿಎಸ್ ಅಭ್ಯರ್ಥಿ ರಾಧಾಕೃಷ್ಣ ಅವರನ್ನು ಗೆಲ್ಲಿಸಿಕೊಡಿ. ಈಗಾಗಲೇ ರಾಜ್ಯದಲ್ಲಿ ಮತದಾರರು ಅನರ್ಹರನ್ನು ಸೋಲಿಸಲು ಜನತೆ ದೃಢ ನಿರ್ಧಾರ ಕೈಗೊಂಡಿದ್ದಾರೆ. ಇಲ್ಲಿಯೂ ಅನರ್ಹ ಶಾಸಕರಿಗೆ ತಕ್ಕ ಪಾಠ ಕಲಿಸಿ’ ಎಂದು ಮನವಿ ಮಾಡಿದರು.

ವಿಧಾನಸಭೆ ಉಪಾಧ್ಯಕ್ಷ ಎಂ.ಕೃಷ್ಣಾರೆಡ್ಡಿ, ಶಾಸಕ ನಿಸರ್ಗ ನಾರಾಯಣಸ್ವಾಮಿ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜೆಡಿಎಸ್ ಅಭ್ಯರ್ಥಿ ಎನ್.ರಾಧಾಕೃಷ್ಣ, ಮುಖಂಡರಾದ ನರಸಿಂಹಮೂರ್ತಿ, ಕೆ.ಎಂ.ಮುನೇಗೌಡ, ನಾರಾಯಣಗೌಡ, ಕೆ.ಟಿ.ನಾರಾಯಣಸ್ವಾಮಿ, ಕೆ.ಸಿ.ರಾಜಾಕಾಂತ್ ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT