ಸೋಮವಾರ, ಏಪ್ರಿಲ್ 6, 2020
19 °C

‘ಕಾರ್ಮಿಕ ನಿಧಿ ಮೇಲೆ ಕಳ್ಳಗಣ್ಣು’ ಒಳನೋಟ ವರದಿಗೆ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಕಾರ್ಮಿಕ ನಿಧಿ ಮೇಲೆ ಕಳ್ಳಗಣ್ಣು’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಫೆ.23) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದಾರೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

ಕರ್ತವ್ಯ ಮರೆತ ಸರ್ಕಾರ

ಜನರಿಗೆ ಮೂಲ ಸೌಕರ್ಯ ಒದಗಿಸಲು ಸರ್ಕಾರ ತೆರಿಗೆ ಸಂಗ್ರಹಿಸುತ್ತದೆ. ಕಾರ್ಮಿಕರ ಹಣವನ್ನು ಅವರಿಗಾಗಿ ಖರ್ಚು ಮಾಡುವುದು ಸರ್ಕಾರದ ಜವಾಬ್ದಾರಿ. ಕಾರ್ಮಿಕರ ಕಲ್ಯಾಣದೆಡೆಗೆ ಸರ್ಕಾರ ಹೆಜ್ಜೆ ಹಾಕಲಿ.

ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ

ಸರಳೀಕೃತವಾಗಲಿ

ಕಟ್ಟಡ ಕಾರ್ಮಿಕರಿಗೆ ಕನಿಷ್ಠ ಸೌಲಭ್ಯಗಳೂ ಸಿಗುತ್ತಿಲ್ಲ. ಮಂಡಳಿಯಲ್ಲಿರುವ ಆನ್‌ಲೈನ್ ಸೇವೆಯಲ್ಲಿ ಹಲವು ಗೊಂದಲಗಳಿವೆ. ಕಾರ್ಮಿಕರ ಅಭಿವೃದ್ಧಿ ಹೊಣೆ ಹೊತ್ತ ಕಟ್ಟಡ ಕಾರ್ಮಿಕ ಮಂಡಳಿ ಕುಂಭಕರ್ಣನಂತೆ ನಿದ್ರಿಸುತ್ತಿದೆ. ಹಣ ಲೂಟಿ ಮಾಡುವುದನ್ನು ಬಿಟ್ಟು, ಮಂಡಳಿಯ ಸೇವೆಗಳನ್ನು ಸರಳೀಕೃತ ಗೊಳಿಸಿ.⇒ಆಶಾ, ಕೋಲಾರ

ಪತ್ರಗಳಲ್ಲೇ ಉಳಿದಿವೆ

ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಪರಿಚಯಿಸಿರುವ ಸಾಕಷ್ಟು ಸೌಕರ್ಯಗಳು ಕೇವಲ ಪತ್ರಗಳಲ್ಲಿ ಅಡಕವಾಗಿವೆ. ಕಾರ್ಮಿಕರು ಶಿಕ್ಷಣ ವಂಚಿತರಾದ ಕಾರಣ ಅವರಿಗೆ ಯಾವ ಸೌಲಭ್ಯಗಳಿವೆ ಎಂಬ ಮಾಹಿತಿಯೂ ಇಲ್ಲವಾಗಿದೆ.

ಜಗದೀಶ್, ಬಾಗಲಕೋಟೆ

ನಿಧಿ ಮೇಲೆ ಸರ್ಕಾರದ ಕಣ್ಣು

ಕಟ್ಟಡ ಕಾರ್ಮಿಕರ ಅನಕ್ಷರತೆಯನ್ನೇ ಬಂಡವಾಳ ಮಾಡಿಕೊಂಡ ಸರ್ಕಾರ ಹಾಗೂ ಅಧಿಕಾರಿಗಳ ಕಣ್ಣು ಕಾರ್ಮಿಕರ ನಿಧಿಯ ಮೇಲೆ ಬಿದ್ದಿರುವುದು ಅಪಾಯಕಾರಿ ಬೆಳವಣಿಗೆ. ಕಾರ್ಮಿಕರಿಗೆ ರಕ್ಷಣೆ ನೀಡಬೇಕಾದವರೇ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ.

ಗುರುರಾಜ ದೇಸಾಯಿ, ತಲ್ಲೂರು

‘ಕಾರ್ಮಿಕರ ನಿಧಿ’ಗೆ ಕೈ ಹಾಕದಿರಿ

ಸರ್ಕಾರದ ಅಭಿವೃದ್ಧಿಗೆ ಕಾರ್ಮಿಕರ ನಿಧಿ ಹಣವೇ ಬೇಕೆ? ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೊಳೆಯುತ್ತಿರುವ ಹಣ ಬಳಕೆ ಮಾಡಿಕೊಳ್ಳಲಿ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಬಡ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಮೀಸಲಿರುವ ಕಾರ್ಮಿಕ ನಿಧಿಗೆ ಸರ್ಕಾರ ಕೈ ಹಾಕುವುದು ಸಮರ್ಥವಲ್ಲ.

ಇಂದಿರಾ ಶ್ರೀಧರ್, ದಾವಣಗೆರೆ

ನಿಯಮ ಗಾಳಿಗೆ

ಕಾರ್ಮಿಕರ ನಿಧಿಯನ್ನು ಅಸಂಘಟಿತ ಕಾರ್ಮಿಕರ ಕಲ್ಯಾಣ ಯೋಜನೆಗಳಿಗೆ ಮಾತ್ರ ಬಳಸಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆದರೆ, ತುರ್ತು ಸಂದರ್ಭಗಳಲ್ಲಿ ಅನ್ಯ ಉದ್ದೇಶಗಳ ನೆಪ ಹೇಳಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ನಿಧಿ ಹಣ ಬಳಸಿ, ನಿಯಮಗಳನ್ನು ಗಾಳಿಗೆ ತೂರಿವೆ.

ಹುಲುಗಪ್ಪ, ಹಾವೇರಿ

ಕಾರ್ಮಿಕರಿಗೆ ಆದ್ಯತೆ ನೀಡಿ

ದೇಶದ ಅಭಿವೃದ್ಧಿ... ಎಂದು ಕೂಗುವ ಮುನ್ನ ಅದರ ಹಿಂದಿನ ಕಾರ್ಮಿಕರನ್ನು ಒಮ್ಮೆ ನೆನೆಯಬೇಕು. ಅವರಿಂದಲೇ ದೇಶದ ಅಭಿವೃದ್ಧಿ ಬಂಡಿ ಸಾಗುತ್ತಿದೆ. ಬಂಡಿಯ ಹಾದಿ ಸುಗಮಗೊಳಿಸಬೇಕಾದವರೇ ದಾರಿ ತಪ್ಪಿಸುತ್ತಿದ್ದಾರೆ.

ಭೂಷಣ್, ಮೈಸೂರು

ಕಾರ್ಮಿಕರೇ ಲಾಭದ ದಾರಿ

ಅಸಂಘಟಿತ ವಲಯದ ಕಾರ್ಮಿಕರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು. ಅವರ ಮುಗ್ಧತೆ ಬೇರೆಯವರಿಗೆ ಲಾಭದ ದಾರಿಯಾಗಿದೆ. ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲು ಹಣ ಬಳಕೆಯಾಗಲಿ. ಕಾರ್ಮಿಕರಿಗೆ ಸೌಲಭ್ಯ ಹೆಚ್ಚಿದಂತೆ ದೇಶ ಅಭಿವೃದ್ಧಿಯಾಗಲಿದೆ.

ಪ್ರಭಾವತಿ, ಚಿತ್ರದುರ್ಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)