ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆ ಮಹದೇಶ್ವರ ವನ್ಯಧಾಮ: ಶೀಘ್ರವೇ ಹುಲಿ ಸಂರಕ್ಷಿತ ಪ್ರದೇಶ

ಎನ್‌ಟಿಸಿಎ ಕೇಳಿದ ಸ್ಪಷ್ಟನೆಗೆ ಪ್ರತಿಕ್ರಿಯಿಸಿರುವ ಅರಣ್ಯ ಇಲಾಖೆ
Last Updated 24 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಚಾಮರಾಜನಗರ: 18ರಿಂದ 20 ಹುಲಿಗಳಿಗೆ ಆಶ್ರಯ ನೀಡಿರುವ ಮಲೆಮಹದೇಶ್ವರ ವನ್ಯಧಾಮವನ್ನು ‘ಹುಲಿ ಸಂರಕ್ಷಿತ ಪ್ರದೇಶ’ ಎಂದು ಘೋಷಿಸುವ ಕಾಲ ಸನ್ನಿಹಿತವಾಗಿದೆ.

ಕಳೆದ ವರ್ಷ ಕಳುಹಿಸಲಾಗಿದ್ದ ಪ್ರಸ್ತಾವಕ್ಕೆ ಸಂಬಂಧಿಸಿದಂತೆರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಕೇಳಿದ್ದ ಕೆಲವು ಸ್ಪಷ್ಟನೆಗಳಿಗೆ ಉತ್ತರಿಸಿ ಅರಣ್ಯ ಇಲಾಖೆ ಹೊಸ ಪ್ರಸ್ತಾವ ಕಳುಹಿಸಿದ್ದು,ಪ್ರಾಧಿಕಾರಕ್ಕೆ ಒಪ್ಪಿಗೆಯಾಗಿದೆ. ಪ್ರಾಧಿಕಾರ ಸಮ್ಮತಿ ನೀಡಿದ ತಕ್ಷಣ ರಾಜ್ಯ ಸರ್ಕಾರ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿ ಅಧಿಸೂಚನೆ ಹೊರಡಿಸಲಿದೆ ಎಂದು ಇಲಾಖೆಯ ಉನ್ನತ ಅಧಿಕಾರಿ
ಗಳು ತಿಳಿಸಿದ್ದಾರೆ.

ಮಹದೇಶ್ವರ ಬೆಟ್ಟ, ಹನೂರು ಹಾಗೂ ಯಡೆಯಾರಳ್ಳಿ ಮೀಸಲು ರಕ್ಷಿತಾರಣ್ಯವನ್ನು ಒಟ್ಟುಗೂಡಿಸಿ 906 ಚದರ ಕಿ.ಮೀ. ವಿಸ್ತೀರ್ಣದ ಅರಣ್ಯವನ್ನು ಮಲೆಮಹದೇಶ್ವರ ವನ್ಯಧಾಮ ಎಂದು 2013ರಲ್ಲಿ ಘೋಷಿಸಲಾಯಿತು. ಇಲ್ಲಿ ಆಗ 6 ಹುಲಿಗಳಿದ್ದವು. 2018ರ ಜನವರಿಯಲ್ಲಿ ನಡೆದಿದ್ದ ಹುಲಿ ಗಣತಿಯಲ್ಲಿ 18ರಿಂದ 20 ಹುಲಿಗಳು ಇವೆ ಎಂದು ಲೆಕ್ಕಹಾಕಲಾಗಿತ್ತು.

2019ರ ಜನವರಿಯಲ್ಲಿ ರಾಜ್ಯ ವನ್ಯಜೀವಿ ಮಂಡಳಿಯು ಈ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಅನುಮತಿ ನೀಡಿತ್ತು. 2019ರ ಮೇನಲ್ಲಿ ಅರಣ್ಯ ಇಲಾಖೆ ಎನ್‌ಟಿಸಿಎಗೆ ಪ್ರಸ್ತಾವ ಕಳುಹಿಸಿತ್ತು.

ವನ್ಯಧಾಮದ ವ್ಯಾಪ್ತಿಯಲ್ಲಿರುವ ಗ್ರಾಮಗಳು, ವಸತಿ ಪ್ರದೇಶದ ವಿವರಗಳನ್ನು ಸ್ಪಷ್ಟವಾಗಿ ನಮೂದಿಸುವಂತೆ,ಕೆಲವು ಕಡೆಗಳಲ್ಲಿ ಅರಣ್ಯದ ಕೋರ್‌ (ಮೂಲ ಅಥವಾ ಪ್ರಮುಖ) ಪ್ರದೇಶದ ಗಡಿಯನ್ನು ಸರಿಯಾಗಿ ಗುರುತಿಸುವಂತೆ ಹಾಗೂ ಧಾರ್ಮಿಕ ಪ್ರವಾಸೋದ್ಯಮದ ವ್ಯಾಪ್ತಿಯನ್ನು ಸ್ಪಷ್ಟವಾಗಿ ಉಲ್ಲೇಖಿಸುವಂತೆ ಹಾಗೂ ವನ್ಯಧಾಮದ ಕೋರ್‌ ವಲಯ ಮತ್ತು ಬಫರ್‌ ವಲಯವನ್ನು ಸ್ಪಷ್ಟವಾಗಿ ವಿವರಿಸುವಂತೆ ಸೂಚಿಸಿ ಪ್ರಾಧಿಕಾರ ಪ್ರಸ್ತಾವವನ್ನು ವಾಪಸ್‌ ಕಳುಹಿಸಿತ್ತು.ಅರಣ್ಯ ಇಲಾಖೆಯು ಈ ವರ್ಷದ ಜನವರಿಯಲ್ಲಿ ಪರಿಷ್ಕೃತ ಪ್ರಸ್ತಾವವನ್ನು ಸಲ್ಲಿಸಿತ್ತು.

ಉತ್ತರಕ್ಕೆ ಕಾವೇರಿ ವನ್ಯಧಾಮ, ದಕ್ಷಿಣಕ್ಕೆ ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಪೂರ್ವಕ್ಕೆ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದೊಂದಿಗೆ ಬೆಸೆದುಕೊಂಡಿರುವ ಈ ವನ್ಯಧಾಮವು, ಹುಲಿಗಳ ಆವಾಸಕ್ಕೆ ಯೋಗ್ಯವಾದ ವಾತಾವರಣ ಹೊಂದಿದೆ ಎಂಬುದು ಅಧಿಕಾರಿಗಳ ವಾದ.

ಮಲೆ ಮಹದೇಶ್ವರ ವನ್ಯಧಾಮವು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾದರೆ, ಇದು ಜಿಲ್ಲೆಯ ಮೂರನೇ ಹಾಗೂ ರಾಜ್ಯದ ಆರನೇ ಹುಲಿ ಸಂರಕ್ಷಿತ ಪ್ರದೇಶವಾಗಲಿದೆ.

******

ಭಕ್ತರು, ಮೂಲ ನಿವಾಸಿಗಳ ಆತಂಕ

ವನ್ಯಧಾಮದ ವ್ಯಾಪ್ತಿಯಲ್ಲಿ ಯಾತ್ರಾಸ್ಥಳವಾದ ಮಹದೇಶ್ವರ ಬೆಟ್ಟ ಸೇರಿದಂತೆ 18 ಕಂದಾಯ ಗ್ರಾಮಗಳಿವೆ. ಬೆಟ್ಟದಲ್ಲಿರುವ ಮಲೆ ಮಹದೇಶ್ವರ ಸ್ವಾಮಿಯ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ವನ್ಯಧಾಮದಲ್ಲೇ ಸಾಗುತ್ತದೆ.

ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿದರೆ ರಸ್ತೆ
ಯಲ್ಲಿ ಸಂಚರಿಸಲು ಅದರಲ್ಲೂ ರಾತ್ರಿ ಹೊತ್ತು ಪ್ರಯಾಣಿಸುವುದರ ಮೇಲೆ ನಿರ್ಬಂಧ ವಿಧಿಸುವ ಆತಂಕ ಭಕ್ತರನ್ನು ಕಾಡುತ್ತಿದೆ. ಜೊತೆಗೆ, ಅಭಿವೃದ್ಧಿಯಿಂದ ವಿಮುಖವಾಗಿರುವ ತಮ್ಮ ಗ್ರಾಮಗಳು ಮತ್ತೆಂದೂ ಪ್ರಗತಿ ಕಾ‌ಣಲಾರವು ಎಂಬ ಭಯದಲ್ಲಿ ಗ್ರಾಮಗಳ ನಿವಾಸಿಗಳಿದ್ದಾರೆ. ಇದೇ ಕಾರಣಕ್ಕಾಗಿ, ಗಿರಿಜನ ಸಮುದಾಯ ಆರಂಭದಿಂದಲೂ ಈ ಪ್ರಸ್ತಾವವನ್ನು ವಿರೋಧಿಸುತ್ತಿದ್ದು, ಮುಂದೆ ಇದು ಅರಣ್ಯ ಇಲಾಖೆ ಹಾಗೂ ಸ್ಥಳೀಯರ ನಡುವೆ ಸಂಘರ್ಷಕ್ಕೆ ಕಾರಣವಾಗಬಹುದು ಎಂಬುದು ಅವರ ವಾದ. ಈ ಬಗ್ಗೆ ಪ್ರತಿಕ್ರಿಯಿಸಿರುವ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ವಿ.ಏಡುಕುಂಡಲು, ‘ವನ್ಯಧಾಮ ವ್ಯಾಪ್ತಿಯಲ್ಲಿ ಈಗಾಗಲೇ ಅಭಿವೃದ್ಧಿ ಚಟುವಟಿಕೆಗಳಿಗೆ ನಿರ್ಬಂಧಗಳಿವೆ. ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾದರೆ ಹೊಸ ನಿಯಮಗಳೇನೂ ಬರುವುದಿಲ್ಲ. ಸ್ಥಳೀಯರು ಹಾಗೂ ಮೂಲನಿವಾಸಿಗಳಿಗೆ ಈಗಿರುವ ಹಕ್ಕುಗಳು, ಸೌಲಭ್ಯಗಳು ಮುಂದೆಯೂ ಇರಲಿವೆ. ದೇವಸ್ಥಾನಕ್ಕೆ ಬರುವ ಭಕ್ತರಿಗೂ ತೊಂದರೆ ಇಲ್ಲ’ ಎಂದರು.

****

ಎನ್‌ಟಿಸಿಎ ಕೇಳಿರುವ ಸ್ಪಷ್ಟನೆಗಳಿಗೆ ಉತ್ತರಿಸಲಾಗಿದೆ.‌ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಪ್ರಾಧಿಕಾರ ಅನುಮತಿ ನೀಡಬೇಕು. ಶೀಘ್ರದಲ್ಲಿ ಒಪ್ಪಿಗೆ ಸಿಗುವ ವಿಶ್ವಾಸವಿದೆ
-ಮನೋಜ್‌ ಕುಮಾರ್‌, ಸಿಸಿಎಫ್‌

ಎಲ್ಲ ಸಮಸ್ಯೆಗಳೂ ಬಗೆಹರಿದಿವೆ. ಎನ್‌ಟಿಸಿಎ ಯಾವಾಗ ಬೇಕಾದರೂ ನಮ್ಮ ಪ್ರಸ್ತಾವಕ್ಕೆ ಅನುಮತಿ ನೀಡಬಹುದು
-ವಿ.ಏಡುಕುಂಡಲು ಡಿಸಿಎಫ್‌, ಮಲೆ ಮಹದೇಶ್ವರ ವನ್ಯಧಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT