ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಟ್ರಿಕ್‌ ಗೆಲುವಿನ ಕನವರಿಕೆ

ಶಿಷ್ಯನಿಗೆ ಗುರು ಸೆಡ್ಡು * ಕೈ–ಕಮಲ ಸಮಬಲದ ಹೋರಾಟ * ಜೆಡಿಎಸ್‌ಗೆ ಖಾತೆ ತೆರೆಯುವ ತವಕ
Last Updated 8 ಮೇ 2018, 19:30 IST
ಅಕ್ಷರ ಗಾತ್ರ

ಬಿಜೆಪಿ ಪ್ರಾಬಲ್ಯವಿದ್ದ ಬೆಂಗಳೂರು ದಕ್ಷಿಣ ಭಾಗದ 9 ವಿಧಾನಸಭಾಕ್ಷೇತ್ರಗಳಲ್ಲಿ 2013ರ ಚುನಾವಣೆಯಲ್ಲಿ ಕೈ–ಕಮಲ ಪಕ್ಷಗಳ ನಡುವೆ ನೇರ ಪೈಪೋಟಿ ಇತ್ತು. ಈ ಬಾರಿ ಹೊಸ ಕ್ಷೇತ್ರಗಳನ್ನು ತೆಕ್ಕೆಗೆ ಸೇರಿಸಿಕೊಳ್ಳುವುದಕ್ಕಿಂತಲೂ ಕಳೆದ ಬಾರಿ ಗೆದ್ದ ಕ್ಷೇತ್ರಗಳನ್ನು ಉಳಿಸಿಕೊಳ್ಳುವತ್ತಲೇ ಈ ಪಕ್ಷಗಳು ಚಿತ್ತ ಹರಿಸಿವೆ. ಈ ನಡುವೆ, ಒಂದೆರಡು ಕ್ಷೇತ್ರಗಳಲ್ಲಾದರೂ ಗೆಲ್ಲಬೇಕೆಂದು ಜೆಡಿಎಸ್‌ ಶತಾಯಗತಾಯ ಪ್ರಯತ್ನ ನಡೆಸಿದೆ.

ಕಳೆದ ಚುನಾವಣೆಯಲ್ಲಿ ಗೆದ್ದ ಅಷ್ಟೂ ಅಭ್ಯರ್ಥಿಗಳು ಈ ಬಾರಿಯೂ ಕಣದಲ್ಲಿದ್ದಾರೆ. ಗೃಹಸಚಿವ ರಾಮಲಿಂಗಾರೆಡ್ಡಿ ಸತತ ಏಳನೇ ಬಾರಿ ಗೆಲ್ಲುವ ತವಕದಲ್ಲಿದ್ದರೆ, ಬಿಜೆಪಿಯಲ್ಲಿ ಒಕ್ಕಲಿಗರ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿರುವ ಆರ್‌.ಅಶೋಕ ಆರನೇ ಬಾರಿ ಗೆಲುವಿಗಾಗಿ ಯತ್ನಿಸುತ್ತಿದ್ದಾರೆ. ವಸತಿ ಸಚಿವ ಎಂ.ಕೃಷ್ಣಪ್ಪ, ಅವರ ಪುತ್ರ ಪ್ರಿಯಕೃಷ್ಣ, ಬಿಜೆಪಿ ಶಾಸಕರಾದ ಸತೀಶ್‌ ರೆಡ್ಡಿ, ಎಂ.ಕೃಷ್ಣಪ್ಪ, ಎಲ್‌.ಎ.ರವಿ ಸುಬ್ರಹ್ಮಣ್ಯ ಹ್ಯಾಟ್ರಿಕ್‌ ಗೆಲುವಿನ ಕನವರಿಕೆಯಲ್ಲಿದ್ದಾರೆ.

ಬಿಟಿಎಂ ಬಡಾವಣೆಯಲ್ಲಿ ಕಳೆದ ಚುನಾವಣೆಯಲ್ಲಿ ರಾಮಲಿಂಗಾರೆಡ್ಡಿ 49,048 ಮತಗಳ ಅಂತರದಿಂದ ಗೆದ್ದಿದ್ದರು. ಗೃಹ ಸಚಿವರ ಎದುರು ಬಿಜೆಪಿ ಹೊಸಮುಖ ಲಲ್ಲೇಶ್‌ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ. ಗಣಿ ಧಣಿ ಜನಾರ್ದನ ರೆಡ್ಡಿ ಅವರ ಸಮೀಪದ ಸಂಬಂಧಿಯಾಗಿರುವ ಲಲ್ಲೇಶ್‌, ಕಾಂಗ್ರೆಸ್‌ನ ‘ಹಳೆ ಹುಲಿ’ಗೆ ಪ್ರಬಲ ಪೈಪೋಟಿ ಒಡ್ಡುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ. 

ಗುರು–ಶಿಷ್ಯರ ಸ್ಪರ್ಧೆ: ಪದ್ಮನಾಭ ನಗರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಶ್ರೀನಿವಾಸ್‌ ಬಿಜೆಪಿ ಅಭ್ಯರ್ಥಿ ಆರ್‌.ಅಶೋಕ ಅವರಿಗೆ ರಾಜಕೀಯ ಗುರು. ಈ ಕ್ಷೇತ್ರ ಹಿಂದೆ ಉತ್ತರಹಳ್ಳಿ ಕ್ಷೇತ್ರದ ಭಾಗವಾಗಿತ್ತು. ಇಲ್ಲಿ ಶಾಸಕರಾಗಿದ್ದ ಬಿಜೆಪಿಯ ಶ್ರೀನಿವಾಸ್‌ 1998ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಡೆದಾಗ ಅಶೋಕ ಗೆದ್ದು ಬಂದಿದ್ದ‌ರು.

ಕಾಂಗ್ರೆಸ್‌ ಸೇರಿರುವ ಶ್ರೀನಿವಾಸ್‌ ಹೋರಾಟ ಮಾಡಿ ಟಿಕೆಟ್‌ ಪಡೆದಿದ್ದಾರೆ. ಇಲ್ಲಿ ಗುರಪ್ಪ ನಾಯ್ಡು ಅವರಿಗೆ ಟಿಕೆಟ್‌ ನೀಡುವುದಾಗಿ ಕಾಂಗ್ರೆಸ್‌ ಮೊದಲು ಪ್ರಕಟಿಸಿತ್ತು. ನಂತರ ಶ್ರೀನಿವಾಸ್‌ಗೆ ‘ಬಿ’ ಫಾರಂ ನೀಡಿತು. ಬಿಜೆಪಿ ಸಖ್ಯ ತೊರೆದಿರುವ ಮಾಜಿ ಮೇಯರ್‌ ವೆಂಕಟೇಶ್‌ಮೂರ್ತಿ ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಸಾಥ್ ನೀಡಿದ್ದಾರೆ. ಜೆಡಿಎಸ್‌ ವಿ.ಕೆ.ಗೋಪಾಲ್‌ ಅವರನ್ನು ಕಣಕ್ಕಿಳಿಸಿದೆ. ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಬಸವನಗುಡಿಯಲ್ಲಿ ಜೆಡಿಎಸ್‌ ಅಭ್ಯರ್ಥಿ ಕೆ.ಬಾಗೇಗೌಡ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಎಂ.ಬೋರೇಗೌಡ ಅವರು ಬಿಜೆಪಿಯ ಎಲ್‌.ಎ.ರವಿಸುಬ್ರಹ್ಮಣ್ಯ ಗೆಲುವಿನ ಓಟಕ್ಕೆ ಕಡಿವಾಣ ಹಾಕುವರೇ ಎಂದು ನೋಡಬೇಕಾಗಿದೆ.

ಬೊಮ್ಮನಹಳ್ಳಿಯಲ್ಲಿ ಶಾಸಕ ಸತೀಶ್‌ ರೆಡ್ಡಿ ಅವರ ವಿರುದ್ಧ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದ್ದ ಕಾಂಗ್ರೆಸ್‌ ಕೊನೇ ಕ್ಷಣದಲ್ಲಿ ಸುಷ್ಮಾ ರಾಜಗೋಪಾಲ ಅವರಿಗೆ ಟಿಕೆಟ್‌ ನೀಡಿದೆ. ಜೆಡಿಎಸ್‌ ಇಲ್ಲಿ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರಾನಂದನಾಥ ಸ್ವಾಮೀಜಿಯನ್ನು ಕಣಕ್ಕಿಳಿಸುತ್ತದೆ ಎಂಬ ವದಂತಿ ಇತ್ತು. ಕೊನೆಗೆ ಟಿ.ಆರ್‌.ಪ್ರಸಾದ್‌ ಅವರಿಗೆ ‘ಬಿ’ ಫಾರಂ ನೀಡಿದೆ.

ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್‌ನ ಮುನಿರತ್ನ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಬಿಜೆಪಿ ಯುವ ಮುಖಂಡ ತುಳಸಿ ಮುನಿರಾಜುಗೌಡ ಅವರಿಗೆ ಟಿಕೆಟ್ ನೀಡಿದೆ. ಬಿಜೆಪಿ ಟಿಕೆಟ್‌ ಕೈತಪ್ಪಿದ್ದರಿಂದ ಮುನಿಸಿಕೊಂಡ ಜಿ.ಎಚ್‌.ರಾಮಚಂದ್ರ ಜೆಡಿಎಸ್‌ಗೆ ಜಿಗಿದಿದ್ದಾರೆ. ಒಕ್ಕಲಿಗ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಪ್ರಜ್ವಲ್‌ ರೇವಣ್ಣ ಅವರನ್ನು ಕಣಕ್ಕಿಳಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದರು. ಆದರೆ, ಕೊನೇ ಕ್ಷಣ
ದಲ್ಲಿ ಪಕ್ಷಕ್ಕೆ ಸೇರ್ಪಡೆಯಾದ ರಾಮಚಂದ್ರ ಅವರಿಗೆ ವರಿಷ್ಠರು ಟಿಕೆಟ್‌ ನೀಡಿದ್ದಾರೆ.

ಬೆಂಗಳೂರು ದಕ್ಷಿಣದಲ್ಲಿ ಕಳೆದ ಚುನಾವಣೆಯಲ್ಲಿ ಎಂ.ಕೃಷ್ಣಪ್ಪ ಜೆಡಿಎಸ್‌ನ ಆರ್‌.ಪ್ರಭಾಕರ ರೆಡ್ಡಿ ಅವರನ್ನು 30,162 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿಯೂ ಅವರಿಬ್ಬರು ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಆರ್‌.ಕೆ.ರಮೇಶ್‌ ಸ್ಪರ್ಧಿಸಿದ್ದಾರೆ. ಇಲ್ಲಿ ಈ ಬಾರಿ 31,056 ಹೊಸ ಮತದಾರರು ಸೇರ್ಪಡೆಯಾಗಿದ್ದು, ಇದರಿಂದಾಗಿ ಇಲ್ಲಿನ ರಾಜಕೀಯ ಸಮೀಕರಣ ಬದಲಾಗುವ ಸಾಧ್ಯತೆ ಇದೆ.

ಆನೇಕಲ್‌ನಲ್ಲಿ ಈ ಬಾರಿಯೂ ಕಾಂಗ್ರೆಸ್‌ನ ಎ.ಶಿವಣ್ಣ ಹಾಗೂ ಬಿಜೆಪಿಯ ನಾರಾಯಣಸ್ವಾಮಿ ನಡುವೆ ಈ ಬಾರಿಯೂ ಪೈಪೋಟಿ ಇದೆ. ಈ ಕ್ಷೇತ್ರವನ್ನು ಜೆಡಿಎಸ್‌ ಬಿಎಸ್‌ಪಿಗೆ ಬಿಟ್ಟುಕೊಟ್ಟಿದೆ. ಜಿ.ಶ್ರೀನಿವಾಸ್‌ ಇಲ್ಲಿ ಬಿಎಸ್‌ಪಿ ಅಭ್ಯರ್ಥಿ.

ಬೆಂಗಳೂರು ದಕ್ಷಿಣದ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ನಗರದ ಹೊರವಲಯದ ಪ್ರದೇಶಗಳಲ್ಲಿ ರಿಯಲ್‌ ಎಸ್ಟೇಟ್‌ ಚಟುವಟಿಕೆ ಗರಿಗೆದರುತ್ತಿದೆ. ಭೂಕಬಳಿಕೆ ಹಾಗೂ ಕಾನೂನುಬಾಹಿರ ಭೂಮಿ ಹಂಚಿಕೆ ಪ್ರಕರಣಗಳು ದಾಖಲಾಗಿರುವುದು ಇಲ್ಲಿನ ಕ್ಷೇತ್ರಗಳಲ್ಲೇ ಹೆಚ್ಚು. ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ ಕ್ಷೇತ್ರಗಳಲ್ಲಿ ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಗೊಂಡ ಹಳ್ಳಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ದಶಕಗಳ ಬಳಿಕವೂ ಇಲ್ಲಿಗೆ ಕಾವೇರಿ ನೀರಿನ ಸಂಪರ್ಕ ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ಆನೇಕಲ್‌ ಭಾಗದಲ್ಲೂ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ಭಾಗದಲ್ಲಿ ಕೆರೆ
ಗಳನ್ನು ತುಂಬಿಸುವುದೂ ಚುನಾವಣಾ ವಿಷಯ.

ಜಯನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಎನ್‌.ವಿಜಯಕುಮಾರ್ ಅವರ ನಿಧನದಿಂದ ಚುನಾವಣಾ ಪ್ರಕ್ರಿಯೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT