ಶತಾಯುಷಿ ಮತದಾರರಿಗೆ ‘ವಿವಿಐಪಿ’ ಟ್ರೀಟ್ಮೆಂಟ್!

ಸೋಮವಾರ, ಏಪ್ರಿಲ್ 22, 2019
32 °C
ಜಿಲ್ಲೆಯಲ್ಲಿದ್ದಾರೆ 65 ಮಂದಿ ಹಿರಿಯ ಜೀವಗಳು

ಶತಾಯುಷಿ ಮತದಾರರಿಗೆ ‘ವಿವಿಐಪಿ’ ಟ್ರೀಟ್ಮೆಂಟ್!

Published:
Updated:
Prajavani

ಬೆಳಗಾವಿ: ಇಲ್ಲಿನ ಚಿಕ್ಕೋಡಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 65 ಶತಾಯುಷಿ ಮತದಾರರಿದ್ದು, ಲೋಕಸಭಾ ಚುನಾವಣೆಯ ಮತದಾನದ ದಿನದಂದು (ಏ.23) ಅವರಿಗೆ ‘ಅತಿಗಣ್ಯರ ಮಾದರಿಯಲ್ಲಿ ವ್ಯವಸ್ಥೆ’ ಕಲ್ಪಿಸಲು ಚುನಾವಣಾಧಿಕಾರಿಗಳು ಕಾರ್ಯಕ್ರಮ ರೂಪಿಸಿದ್ದಾರೆ.

ಬೆಳಗಾವಿ ಕ್ಷೇತ್ರದಲ್ಲಿ 17,49,005 ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 15,79,309 ಮತದಾರರಿದ್ದಾರೆ. ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಚುನಾವಣಾ ಆಯೋಗದ ಸೂಚನೆ ಪ್ರಕಾರ ಕೈಗೊಂಡಿರುವ ಕಾರ್ಯಕ್ರಮಗಳ ಭಾಗವಾಗಿ, ಶತಾಯುಷಿ ಮತದಾರರಿಗೆ ವಿಶೇಷ ಸೌಲಭ್ಯ ಒದಗಿಸಲಾಗುತ್ತಿದೆ. ಅಲ್ಲದೇ, ಇತರರಿಗೆ ಪ್ರೇರಣೆ ನೀಡುವ ನಿಟ್ಟಿನಲ್ಲೂ ಅವರನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.

‘ಮತದಾನದಿಂದ ಯಾರೂ ಹೊರಗುಳಿಯಬಾರದು ಎನ್ನುವುದು ನಮ್ಮ ಉದ್ದೇಶ. ಹೀಗಾಗಿ, ಶತಾಯುಷಿ ಮತದಾರರಿಗೆ ನೆರವಾಗಲಾಗುವುದು. ಅವರಿಗೆ ಟ್ರೈಸಿಕಲ್ ಅಥವಾ ವಾಹನದ ವ್ಯವಸ್ಥೆಯನ್ನು ಕೂಡ ಉಚಿತವಾಗಿ ಮಾಡಿಕೊಡಲಾಗುವುದು. ಅವರು ಸರದಿಯಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ. ನೇರವಾಗಿ ಮತದಾನಕ್ಕೆ ಅವಕಾಶ ಕೊಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಅವರ ಉತ್ಸಾಹ ನೋಡಿ ಯುವಕರು ಸೇರಿದಂತೆ ಉಳಿದ ಮತದಾರರು ಮತಗಟ್ಟೆಗಳತ್ತ ಬರುವಂತಾಗಬೇಕು’ ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಡಾ.ಕೆ.ವಿ. ರಾಜೇಂದ್ರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ದೂರ ಉಳಿಯದಂತೆ ನೋಡಿಕೊಳ್ಳಲು:

‘ಹಿರಿಯ ನಾಗರಿಕರಲ್ಲಿ ಮತದಾನದ ಪ್ರಜ್ಞೆ ಮೂಡಿಸುವ ಉದ್ದೇಶದಿಂದ ಅವರಿಗಾಗಿಯೇ ಸ್ವೀಪ್‌ ( ವ್ಯವಸ್ಥಿತ ಮತದಾರರ ಶಿಕ್ಷಣ ಹಾಗೂ ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ) ಸಮಿತಿಯಿಂದ ಪ್ರತ್ಯೇಕವಾಗಿ ಜಾಗೃತಿ ಚಟುವಟಿಕೆಗಳನ್ನು ನಡೆಸಲಾಗುವುದು. ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ಮತ ಚಲಾಯಿಸುವುದು ಹಾಗೂ ಮತದಾನ ಖಾತ್ರಿ ಯಂತ್ರ (ವಿವಿಪ್ಯಾಟ್)ಗಳ ಬಳಕೆ ಕುರಿತು ಪ್ರಾತ್ಯಕ್ಷಿಕೆ ನೀಡಲಾಗುವುದು. ಇದಕ್ಕಾಗಿ ಆ ಭಾಗದಲ್ಲಿರುವ ಹಿರಿಯ ನಾಗರಿಕರ ವೇದಿಕೆಗಳ ಸಹಕಾರ ಪಡೆಯಲಾಗುವುದು. ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಸಹಕರಿಸುವಂತೆ ಹಾಗೂ ಕುಟುಂಬದವರಿಗೂ ತಿಳಿಸುವಂತೆ ಆ ಹಿರಿಯ ಜೀವಗಳನ್ನು ಕೋರಿಕೊಳ್ಳಲಾಗುವುದು’ ಎಂದರು.

ಜಿಲ್ಲಾಳಿತದ ಮಾಹಿತಿ ಪ್ರಕಾರ, ರಾಮದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 20 ಮಂದಿ ಶತಾಯುಷಿಗಳಿದ್ದಾರೆ. ಬೈಲಹೊಂಗಲದಲ್ಲಿ 14, ಚನ್ನಮ್ಮನ ಕಿತ್ತೂರು ಹಾಗೂ ಕಾಗವಾಡ ಕ್ಷೇತ್ರದಲ್ಲಿ ತಲಾ 6, ಅಥಣಿಯಲ್ಲಿ 5, ರಾಯಬಾಗ–2, ಅರಬಾವಿ–2, ಗೋಕಾಕದಲ್ಲಿ 5, ಯಮಕನಮರಡಿಯಲ್ಲಿ 2, ಬೆಳಗಾವಿ ಉತ್ತರದಲ್ಲಿ ಒಬ್ಬರು, ಸವದತ್ತಿ–ಯಲ್ಲಮ್ಮ ಕ್ಷೇತ್ರದಲ್ಲಿ ಇಬ್ಬರು ಶತಾಯುಷಿಗಳಿದ್ದಾರೆ. ಹೆಚ್ಚು ಯುವ ಮತದಾರರನ್ನು ಹೊಂದಿರುವ ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಶತಾಯುಷಿಗಳಿಲ್ಲ.‌ ನಿಪ್ಪಾಣಿ ಮತಕ್ಷೇತ್ರದಲ್ಲಿ ಕೂಡ ಇಲ್ಲ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !