ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರದ ಫಸಲ್ ಬಿಮಾ ಮಾನದಂಡ ಬದಲಾವಣೆ ಚಿಂತನೆ: ಸಚಿವ ಶಿವಶಂಕರ ರೆಡ್ಡಿ

Last Updated 17 ನವೆಂಬರ್ 2018, 14:10 IST
ಅಕ್ಷರ ಗಾತ್ರ

ಬೆಂಗಳೂರು:‘ಕೇಂದ್ರ ಸರ್ಕಾರದ ಫಸಲ್ ಬಿಮಾ ಯೋಜನೆಯ ಮಾನದಂಡಗಳು ಸರಿ ಇಲ್ಲದ ಕಾರಣಕ್ಕೆ ಅನೇಕ ರೈತರಿಗೆ ಅನ್ಯಾಯವಾಗುತ್ತಿದ್ದು, ರಾಜ್ಯದ್ದೇ ಪ್ರತ್ಯೇಕ ಮಾನದಂಡ ರೂಪಿಸುವ ಚಿಂತನೆ ನಡೆಯುತ್ತಿದೆ’ಎಂದು ಕೃಷಿ ಸಚಿವ ಎನ್. ಎಚ್‌ ಶಿವಶಂಕರ ರೆಡ್ಡಿ ಹೇಳಿದರು.

'ಮಾನದಂಡಗಳನ್ನು ಬದಲಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೆವು. 660 ಕೋಟಿ ರೂಪಾಯಿ ರಾಜ್ಯದ ರೈತರಿಂದ ಸಂದಾಯವಾಗಿದ್ದರೂ ಪರಿಹಾರ ಸಿಗುತ್ತಿಲ್ಲ. ಕೇಂದ್ರ ಸರ್ಕಾರವೇ ವಿಮಾ ಕಂಪನಿಗಳನ್ನು ಆಯ್ಕೆ ಮಾಡುತ್ತದೆ. ಬಿಹಾರದಲ್ಲಿ ಪ್ರತ್ಯೇಕ ಮಾನದಂಡ ರೂಪಿಸಿಕೊಂಡಿದ್ದಾರೆ, ಅದು ಸಮರ್ಪಕವಾಗಿದೆ ಎಂಬ ಮಾಹಿತಿ ಇದೆ. ಈ ಕುರಿತು ಅಧ್ಯಯನಕ್ಕೆ ತಂಡವೊಂದನ್ನು ಅಲ್ಲಿಗೆ ಕಳುಹಿಸಲಾಗಿದೆ' ಎಂದರು.

ಬರಪೀಡಿತ ಜಿಲ್ಲೆಗಳ ರೈತರಿಗೆ ಪರಿಹಾರ ಕುರಿತು ಪ್ರತಿಕ್ರಿಯಿಸಿದ ಅವರು, 'ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಜತೆ ಇತ್ತೀಚೆಗೆ ಕೇಂದ್ರ ಸರ್ಕಾರದ ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ್ದೆವು. ಇದೀಗ ಕೇಂದ್ರ ಅಧ್ಯಯನ ತಂಡ ಸಮೀಕ್ಷೆ ನಡೆಸುತ್ತಿದೆ. ಒಟ್ಟು 16 ಸಾವಿರ ಕೋಟಿ ರೂ.ಪಾಯಿ ನಷ್ಟವಾಗಿದೆ. 2,450 ಕೋಟಿ ರೂಪಾಯಿ ನೀಡುವಂತೆ ಮನವಿ ಮಾಡಿದ್ದೇವೆ. ಸೂಕ್ತ ಪ್ರಮಾಣದಲ್ಲಿ ಪರಿಹಾರ ಸಿಗುವ ಭರವಸೆ ಇದೆ' ಎಂದರು.

'ಹೈಕಮಾಂಡ್ ಮುಖ್ಯ ಮಂತ್ರಿ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ' ಎಂಬ ಜಿ. ಪರಮೇಶ್ವರ ಹೇಳಿಕೆಗೆ ಪ್ರಯಿಕ್ರಿಯಿಸಿದ ರೆಡ್ಡಿ, ಪರಮೇಶ್ವರ ಅವರ ಅರ್ಹತೆ ಪ್ರಶ್ನಿಸುವಂತಿಲ್ಲ.. ಅವರು ಸಮರ್ಥರಿದ್ದಾರೆ. ಸದ್ಯ ಎರಡೂ ಪಕ್ಷಗಳ‌ ವರಿಷ್ಠರ ನಿರ್ಧಾರದಂತೆ ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ಸದ್ಯಕ್ಕೆ ಪರಮೇಶ್ವರ ಉಪ ಮುಖ್ಯಮಂತ್ರಿ ಆಗಿದ್ದಾರೆ. ಇದು ಪಕ್ಷದ ಹೈಕಮಾಂಡ್ ತೀರ್ಮಾನವೂ ಆಗಿದೆ. ರಾಜಕೀಯದಲ್ಲಿ ಏನು ಬೇಕಾದರೂ ಬದಲಾವಣೆ ಆಗಬಹುದು' ಎಂದರು.

ಸಂಪುಟ ವಿಸ್ತರಣೆ ವೇಳೆ ಮತ್ತೊಬ್ಬರಿಗೆ ಅವಕಾಶ ನೀಡಲು ಕೈಬಿಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 'ಹೈಕಮಾಂಡ್ ಏನೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಬದ್ಧ. ಪಕ್ಷದ ಹಿತದೃಷ್ಟಿಯಿಂದ ಏನು ಹೇಳಿದರೂ ಮಾಡುತ್ತೇನೆ. ಪಕ್ಷದಲ್ಲಿ ಸಚಿವ ಸ್ಥಾನಗಳ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಸದ್ಯ ಆರು ಸ್ಥಾನಗಳಲ್ಲಿ ಯಾರಿಗೆ ಸಚಿವ ಸ್ಥಾನ ನೀಡುತ್ತಾರೋ ಗೊತ್ತಿಲ್ಲ' ಎಂದು ಸ್ಪಷ್ಟಪಡಿಸಿದರು.

ಸಾಲ ಮನ್ನಾ ವಿಳಂಬ ಆಗಿದೆ:

'ಸಾಲ ಮನ್ನಾ ಭರವಸೆ ಈಡೇರಿಸುವಲ್ಕಿ ವಿಳಂಬವಾಗಿದೆ' ಎಂದ ರೆಡ್ಡಿ, 'ಈ ಭರವಸೆ ಈಡೇರುತ್ತದೆ. ಕೆಲವೆಡೆ ಸಾಲ ವಸೂಲಿ ಮಾಡಲು ಮುಖ್ಯಮಂತ್ರಿ ತಡೆ ನೀಡಿದ್ದಾರೆ. ಇಂತಹ ಕೆಲಸ ಯಾವ ಸರ್ಕಾರವೂ ಮಾಡಿಲ್ಲ. ಸಾಲ ಮನ್ನಾ ವಿಳಂಬದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವಂತಿಲ್ಲ. ಯಾರು ಸತ್ತರೂ ಕೃಷಿ ಸಾಲಕ್ಕೇ ಸಂಬಂಧ ಕಲ್ಪಿಸಬಾರದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT