ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

150 ದಿನಗಳಿಗೆ ನರೇಗಾ ಕೂಲಿ ದಿನ ಹೆಚ್ಚಳಕ್ಕೆ ಚಿಂತನೆ: ಸಚಿವ ಕೆ.ಎಸ್. ಈಶ್ವರಪ್ಪ

Last Updated 5 ಜೂನ್ 2020, 6:12 IST
ಅಕ್ಷರ ಗಾತ್ರ

ಕಲಬುರ್ಗಿ: ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ₹ 20 ಲಕ್ಷ ‌ಕೋಟಿ ಪ್ಯಾಕೇಜ್ ನಲ್ಲಿ ₹ 40 ಸಾವಿರ ಕೋಟಿ ಹಂಚಿಕೆ ಮಾಡಿದೆ. ಹೀಗಾಗಿ ಒಬ್ಬರಿಗೆ ಕೂಲಿ ದಿನವನ್ನು ಗರಿಷ್ಠ 150 ದಿನಗಳಿಗೆ ಹೆಚ್ಚಳ ಮಾಡುವ ಚಿಂತನೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಕಲಬುರ್ಗಿ ತಾಲ್ಲೂಕಿನ ಹೊನ್ನ ಕಿರಣಗಿ ಗ್ರಾಮದಲ್ಲಿ ಉದ್ಯೋಗ ಖಾತ್ರಿಯಡಿ ನಡೆಯುತ್ತಿರುವ ಹೊಲದ ಬದು ನಿರ್ಮಾಣ ಕಾಮಗಾರಿ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಲಾಕ್‌ಡೌನ್‌ನಿಂದಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದವರು ಇದೀಗ ಗ್ರಾಮಗಳಿಗೆ ವಾಪಸಾಗಿದ್ದಾರೆ. ಉದ್ಯೋಗ ಕೇಳಿದ ಎಲ್ಲರಿಗೂ ಜಾಬ್‌ ಕಾರ್ಡ್ ನೀಡುವಂತೆ ಎಲ್ಲ ಜಿಲ್ಲಾ ಪಂಚಾಯಿತಿ ‌ಸಿಇಒಗಳಿಗೆ ಸೂಚನೆ ನೀಡಿದ್ದೇನೆ. ಕೇಂದ್ರ ಸರ್ಕಾರ ನಿರ್ದೇಶನ ನೀಡಿದರೆ ಈಗ ಇರುವ ₹ 275 ಕೂಲಿ ದರವನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ಭರವಸೆ ‌ನೀಡಿದರು.

ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಯಾರು ಬೇಕಾದರೂ ಉದ್ಯೋಗ ‌ಖಾತ್ರಿಯಡಿ ಜಾಬ್ ಕಾರ್ಡ್ ಪಡೆಯಬಹುದು ಎಂದು ಈಶ್ವರಪ್ಪ ‌ಹೇಳಿದರು.

ಪಕ್ಷದಲ್ಲಿ ಸ್ಥಾನಮಾನ ನೀಡುವುದಕ್ಕೆ ಸಂಬಂಧಿಸಿದಂತೆ ಅಸಮಾಧಾನ ಇರುವುದು ನಿಜ. ಆದರೆ ಸೂಕ್ತ ವೇದಿಕೆಯಲ್ಲಿ ಬಗೆಹರಿಸಿಕೊಳ್ಳುತ್ತೇವೆ ಎಂದರು.

ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಬೇಕೇ ಎಂಬುದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸಲಹೆ ಪಡೆದೆವು. ಸದ್ಯಕ್ಕೆ ‌ಕೊರೊನಾ ಇರುವುದರಿಂದ ಚುನಾವಣೆ ನಡೆಸುವುದು ಬೇಡ ಎಂದರು. ಹೀಗಾಗಿ ಸದ್ಯಕ್ಕೆ ‌ಚುನಾವಣೆ ಮುಂದೂಡಲಾಗಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.

ವಿಧಾನಪರಿಷತ್ ಚುನಾವಣೆಗೆ ಯಾರನ್ನು ನಿಲ್ಲಿಸಬೇಕು ಎಂಬ ಬಗ್ಗೆ ಶನಿವಾರ ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ನಿರ್ಣಯ ‌ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಂಸದ ಡಾ‌‌.ಉಮೇಶ ಜಾಧವ್, ಶಾಸಕರಾದ ಬಸವರಾಜ ಮತ್ತಿಮೂಡ, ಎಂ.ವೈ.ಪಾಟೀಲ, ವಿಧಾನಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಜಿ.ಪಂ. ಅಧ್ಯಕ್ಷೆ ಸುವರ್ಣಾ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿರಸಗಿ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT