ಶುಕ್ರವಾರ, ಏಪ್ರಿಲ್ 3, 2020
19 °C
ಗಮನಸೆಳೆದಿರುವ ಪ್ರಯೋಗಶೀಲ ಕೃಷಿಕ ಶಿವಗೌಡ

ತೋಟಗಾರಿಕೆಯಲ್ಲಿ ನಾವಿನ್ಯತೆ ಪ್ರಯೋಗ

ಸುಧಾಕರ ತಳವಾರ Updated:

ಅಕ್ಷರ ಗಾತ್ರ : | |

Prajavani

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಅಲ್ಲಿ 50ಕ್ಕೂ ಹೆಚ್ಚು ಬಗೆಯ ಬಾಳೆ ತಳಿಗಳನ್ನು ಬೆಳೆಸಲಾಗಿದೆ. ದೇಶ ವಿದೇಶದ 30ಕ್ಕೂ ಹೆಚ್ಚು ಹಣ್ಣಿನ ಸಸಿಗಳು ನಳನಳಿಸುತ್ತಿವೆ. ಮಸಾಲೆ ಪದಾರ್ಥಗಳ ಸಸಿಗಳ ಘಮ ಸೂಸುತ್ತಿದೆ. ಅದೊಂದು ತೋಟಗಾರಿಕೆಯ ಪ್ರಯೋಗಶಾಲೆಯಾಗಿ ಕಂಗೊಳಿಸುತ್ತಿದೆ.

– ಹೌದು. ತಾಲ್ಲೂಕಿನ ಪೋಗತ್ಯಾನಟ್ಟಿಯ ಶಿವಗೌಡ ಮಲಗೌಡ ಪಾಟೀಲ ಎಂಬ ಯುವ ಕೃಷಿಕ ಕೈಗೊಂಡಿರುವ ಅಪರೂಪದ ಕೃಷಿಯಿದು.

ಐದನೇ ತರಗತಿ ಶಿಕ್ಷಣ ಪಡೆದರೂ ಕೃಷಿಯಲ್ಲಿ ವಿಶೇಷತೆ ಅಳವಡಿಸಿಕೊಂಡು ವಿವಿಧ ವಿದೇಶಿ ತಳಿಗಳ ಹಣ್ಣಿನ ಹಾಗೂ ಬಾಳೆ ಗಿಡಗಳನ್ನು ಬೆಳೆದು ಮಾದರಿ ಕೃಷಿಕರೆನಿಸಿದ್ದಾರೆ ಅವರು. ಇತರ ಕೃಷಿಕರ ಗಮನಸೆಳೆದಿದ್ದಾರೆ.

ನಾಲ್ಕು ವರ್ಷಗಳಿಂದ

ನಾಲ್ಕು ವರ್ಷಗಳಿಂದ ತೋಟಗಾರಿಕೆಯಲ್ಲಿ ನಾವಿನ್ಯತೆ ಅಳವಡಿಸಿಕೊಂಡಿದ್ದಾರೆ. ತಮ್ಮ ತೋಟದಲ್ಲಿ ಮಲ್ಬೇರಿಯನ್ ಫಿಸ್ತಾ, ಮನಿಲಾ ಟೆನಿಸ್ಬಾಲ್ ಚೆರ್ರಿ, ಸ್ಟ್ರಾಬೆರಿ, ವಾಟರ್ ಆ್ಯಪಲ್, ರೊಹಿಣ್ಯಾ ಸೀತಾಫಲ, ಗೋಲ್ಡನ್ ಸೀತಾಫಲ, ಬ್ಯಾಂಕಾಂಕ್ ಹನಿ, ಖರ್ಜೂರ, ಸೀಡ್‌ಲೆಸ್‌ ನಿಂಬೆ, ಸ್ವೀಟ್‌ ಚೆರ್ರಿ, ಮಿಲ್ಕ್ ಫ್ರೂಟ್, ಅಬಂಟೆ, ಬನಾನಾ ಸಪೋಟ, ಬ್ಲ್ಯಾಕ್‌ಬೆರ್ರಿ, ರಂಬೋಟಾನ್, ಬಟರ್ ಫ್ರೂಟ್, ರುದ್ರಾಕ್ಷಿ, ಹನುಮಾನ ಫಲ, ಲಕ್ಷ್ಮಣ ಫಲ, ಪ್ಲಮ್, ವೆಲ್ವೆಟ್ ಆ್ಯಪಲ್, ಪೆನೆಟ್ ಬಟರ್, ಡ್ರ್ಯಾಗನ್ ಫ್ರೂಟ್, ಫಿಚ್, ಸಿಂಗಾಪುರ ಹಲಸು, ಥೈಲ್ಯಾಂಡ್ ಹಲಸು, ರೆಡ್ ಮ್ಯಾಂಗೊ, ಬ್ಲ್ಯಾಕ್ ಮ್ಯಾಂಗೊ, ಮಮ್ಮಿ ಸಪೋಟ, ಅಂಜೂರ, ಚೈನೀಸ್ ಪೇರಲ, ಬ್ರೇಜಿಲ್ ಪೇರಲ ಸೇರಿದಂತೆ ಇನ್ನೂ ಹತ್ತಾರು ಬಗೆಯ ವಿದೇಶಿ ತಳಿಗಳ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ.

ಕಾಳುಮೆಣಸು, ಲವಂಗ, ದಾಲ್ಚಿನ್ನಿ, ಹಿಂಗು, ಬಾಸುಮತಿ, ಕೊತ್ತಂಬರಿ ಸುವಾಸನೆ ಬೀರುವ ಗಿಡ, ಬಳ್ಳೂಳ್ಳಿ ಸುವಾಸನೆ ಬೀರುವ ಗಿಡಗಳನ್ನು ಹಾಗೂ ವಿವಿಧ ಸುಧಾರಿತ ತಳಿಗಳ ಮೆಣಸಿನ ಗಿಡಗಳನ್ನು ಬೆಳೆಸಿದ್ದಾರೆ.

ತಳಿಗಳ ಸಂರಕ್ಷಣೆ

65ಕ್ಕೂ ಹೆಚ್ಚು ಬಗೆ ಬಗೆಯ ಬಾಳೆ ಹಣ್ಣಿನ ತಳಿಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತರಹೇವಾರಿ ಬಾಳೆ ತಳಿಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಸಾವಯವ ಕೃಷಿ ಪದ್ಧತಿಯಲ್ಲಿ ಒಂದು ಎಕರೆ ಪ್ರದೇಶದಲ್ಲಿ ಬಾಳೆ ಕೃಷಿ ಕೈಗೊಂಡಿದ್ದಾರೆ. ಕೆಂಪು, ಸಕ್ಕರೆ, ಸಾವಿರ, ಏಲಕ್ಕಿ, ಬರಗಿ, ಮಂಥನ, ಮಸ್ತಾ, ಹೂಬಾಳೆ, ಕರ್ಪೂರ, ಉದಯಂ, ರಾಜಾಪುರ, ಕದಳಿ, ಬಿಸಾಂಗ್, ಶ್ರೀಮತಿ, ಕರಿ ಬಾಳೆ, ನೇಂದ್ರ, ರಸಬಾಳೆ, ಗುಲಾಬಿ ಬಾಳೆ ಹೀಗೆ... ಹಲವು ತಳಿಗಳ ಬಾಳೆ ಗಿಡಗಳನ್ನು ಬೆಳೆಸಿರುವುದು ವಿಶೇಷವಾಗಿದೆ.

ರಾಜ್ಯದ ನಾನಾ ಕಡೆಗಳಿಂದ ಮಾತ್ರವಲ್ಲದೆ, ಕೇರಳ ಮತ್ತು ತಮಿಳುನಾಡಿನಿಂದಲೂ ಅವರು ಬಾಳೆ ಮತ್ತು ಹಣ್ಣಿನ ಸಸಿಗಳನ್ನು ತಂದು ಬೆಳೆಸಿದ್ದಾರೆ.

‘ಸ್ಥಳೀಯ ಮಾರುಕಟ್ಟೆಯಲ್ಲಿ ಬಾಳೆ ಹಣ್ಣುಗಳನ್ನು ಮಾರುತ್ತೇನೆ. ಬರಗಿ ಬಾಳೆಗೆ ಬೆಳಗಾವಿ ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನದಲ್ಲಿ ಪ್ರಶಸ್ತಿ ಲಭಿಸಿದೆ. ಜಮೀನಿನಲ್ಲಿ ಬೆಳೆದ ದೇಶಿ ಮತ್ತು ವಿದೇಶಿ ತಳಿಗಳ ಹಣ್ಣು ಹಾಗೂ ಬಾಳೆ ಸಸಿಗಳನ್ನು ಸಂವರ್ಧಿಸಿ ಆಸಕ್ತರಿಗೆ ಮಾರುತ್ತಿದ್ದೇನೆ’ ಎನ್ನುವ ಅವರು ಪ್ರಯೋಗಶೀಲ ಕೃಷಿಕರೆನಿಸಿಕೊಂಡಿದ್ದಾರೆ. ಅವರ ಸಂಪರ್ಕಕ್ಕೆ: 8722141489.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು