ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾವ್ರ ಮಗ್ಗುಲಲ್ಲೇ ಅಂಬಿ ಚಿರನಿದ್ರೆಗೆ

ವಿದಾಯದ ಮುತ್ತಿಕ್ಕಿದ ಸುಮಲತಾ; ಹರಿದುಬಂದ ಜನಸಾಗರ
Last Updated 27 ನವೆಂಬರ್ 2018, 8:48 IST
ಅಕ್ಷರ ಗಾತ್ರ

ಬೆಂಗಳೂರು:‌ ಚಂದನವನದ ‘ಕನ್ವರ್ ಲಾಲ್’, ಅಭಿಮಾನಿಗಳ ಪಾಲಿನ ‘ರೆಬೆಲ್ ಸ್ಟಾರ್’, ರಾಜಕೀಯ ರಂಗಿನ ‘ಮಂಡ್ಯದ ಗಂಡು’ ಎಂ.ಎಚ್. ಅಂಬರೀಷ್ ಇನ್ನು ನೆನಪು ಮಾತ್ರ.

ಸಕಲ ಸರ್ಕಾರಿ ಗೌರವಗಳೊಂದಿಗೆ ಒಕ್ಕಲಿಗ ಸಂಪ್ರದಾಯದಂತೆ ಕಂಠೀರವ ಸ್ಟುಡಿಯೊ ಆವರಣದಲ್ಲಿ ಸೋಮವಾರ ಇಳಿಹೊತ್ತಿನಲ್ಲಿ ನಡೆದ ‘ಜಲೀಲ’ನ ಅಂತ್ಯಸಂಸ್ಕಾರಕ್ಕೆ, ಸಾಗರೋಪಾದಿಯಲ್ಲಿ ಹರಿದುಬಂದ ಜನಪ್ರವಾಹ ಸಾಕ್ಷಿಯಾಯಿತು.

ಅರವತ್ತಾರು ವಸಂತಗಳನ್ನು ಕಂಡ ಬದುಕಿನಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದ ಅಂಬಿ, ಕುಟುಂಬಸ್ಥರ ರೋದನ, ಶೋಕತಪ್ತ ಅಭಿಮಾನಿಗಳ ಅಶ್ರುತರ್ಪಣದ ಮಧ್ಯೆ ಅಣ್ಣಾವ್ರ ಸಮಾಧಿಯ ಮಗ್ಗುಲಲ್ಲೇ ಚಿರನಿದ್ರೆಗೆ ಜಾರಿದರು.

ಸದ್ಯ ಅಮೆರಿಕದಲ್ಲಿರುವ ವೈದಿಕ ಪಂಡಿತ ಭಾನುಪ್ರಕಾಶ್ ಶರ್ಮಾ ಅವರ ಮಾರ್ಗದರ್ಶನದಂತೆ ಅವರ ಶಿಷ್ಯವರ್ಗ ಶಾಸ್ತ್ರೋಕ್ತವಾಗಿ ಅಂತಿಮ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಅಂತ್ಯಕ್ರಿಯೆಯ ಕೈಂಕರ್ಯದಲ್ಲಿ ‍‍ವಿಷ್ಣು ಸಹಸ್ರನಾಮ, ಶಾಂತಿ ಮಂತ್ರ ಪಠಿಸಿದರು. ಪೊಲೀಸರು ಮೂರು ಸುತ್ತು ಕುಶಾಲ ತೋಪು ಹಾರಿಸಿ ಗೌರವ ಸಲ್ಲಿಸಿದರು.

ಚಿತೆಯ ಮೇಲಿಟ್ಟ ಅಪ್ಪನ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದ ಪುತ್ರ ಅಭಿಷೇಕ್ ಗೌಡ, ಒಂದು ಕ್ಷಣ ಆಗಸದತ್ತ ಮುಖ ಮಾಡಿ ನಿಂತುಕೊಂಡರು. ಈ ಕ್ಷಣಗಳನ್ನು ನೋಡಲಾಗದ ಅಂಬಿ ಪತ್ನಿ ಸುಮಲತಾ ಸಂತೈಸಲಾಗದಂತೆ ಬಿಕ್ಕಿ ಬಿಕ್ಕಿ ಅತ್ತರು.

ದುಃಖವನ್ನು ಅದುಮಿಟ್ಟುಕೊಂಡ ಪುತ್ರ ಅಭಿಷೇಕ್, ಅಮ್ಮನನ್ನು ಬಿಗಿದಪ್ಪಿಕೊಂಡರು. ಅಮ್ಮ- ಮಗನನ್ನು ಸಮಾಧಾನಪಡಿಸಲು ಮುಂದಾದ ಸಂಬಂಧಿಕರು ಹಾಗೂ ಚಿತ್ರರಂಗದ ತಾರೆಯರ ಕಣ್ಣಾಲಿಗಳೂ ಒದ್ದೆಯಾದವು.

13 ಕಿ.ಮೀ. ಅಂತಿಮ ಯಾತ್ರೆ– ಅಭಿಮಾನಿಗಳ ಸಾಗರ: ಅಂಬರೀಷ್ ಪಾರ್ಥಿವ ಶರೀರವನ್ನು ಮಂಡ್ಯದಿಂದ ಸೇನಾ ಹೆಲಿಕಾಪ್ಟರ್‌ನಲ್ಲಿ ಕಂಠೀರವ ಕ್ರೀಡಾಂಗಣಕ್ಕೆ ತಂದು, ವಿಶೇಷವಾಗಿ ಅಲಂಕರಿಸಿದ ವಾಹನದಲ್ಲಿ ಕಂಠೀರವ ಸ್ಟುಡಿಯೊಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. 13 ಕಿ.ಮೀ. ಅಂತಿಮ ಯಾತ್ರೆಯುದ್ದಕ್ಕೂ ರಸ್ತೆಗಳ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿದ್ದ ಜನಸ್ತೋಮ ಅಗಲಿದ ಜನನಾಯಕ, ದಿಗ್ಗಜ ನಟನಿಗೆ ಒಂದೇ ಸಮನೆ ಕಂಬನಿ ಮಿಡಿದರು.

ಪಾರ್ಥಿವ ಶರೀರವಿದ್ದ ವಾಹನದ ಬಳಿಗೆ ನುಗ್ಗಲು ಯತ್ನಿಸಿದ ಅಭಿಮಾನಿಗಳನ್ನು ನಿಯಂತ್ರಿಸಲು ಅಲ್ಲಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳ ಜೈಕಾರದ ನಡುವೆ ಪಾರ್ಥಿವ ಶರೀರ ಹೊತ್ತ ವಾಹನವನ್ನು ಚಿತೆಯ ಬಳಿಗೆ ಕೊಂಡೊಯ್ಯಲು ಭದ್ರತಾ ಸಿಬ್ಬಂದಿ ಹರಸಾಹಸಪಟ್ಟರು. ಕಂಠೀರವ ಸ್ಟುಡಿಯೊ ಸುತ್ತಮುತ್ತ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಭದ್ರತೆಗಾಗಿ ನಗರದ ಸುಮಾರು 15 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು.

ಒಂದೂವರೆ ಎಕರೆ ಭೂಮಿಯಲ್ಲಿ ಸ್ಮಾರಕ: ಕಂಠೀರವ ಸ್ಟುಡಿಯೊದ ಪ್ರವೇಶ ದ್ವಾರದ ಎಡಭಾಗದಲ್ಲಿರುವ ಒಂದೂವರೆ ಎಕರೆ ಭೂಮಿಯಲ್ಲಿ ಅಂಬರೀಷ್ ಸ್ಮಾರಕ ನಿರ್ಮಾಣವಾಗಲಿದೆ. ಬಲ ಭಾಗದಲ್ಲಿ ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಸಮಾಧಿ ಇದೆ.

ಅಸ್ವಸ್ಥರಾದ ಸುಮಲತಾ

ವಿಶೇಷ ವಾಹನದಿಂದ ಅಂಬರೀಷ್‌ ಪಾರ್ಥಿವ ಶರೀರವನ್ನು ಚಿತಾಗಾರದ ಬಳಿಗೆ ಸಾಗಿಸುತ್ತಿದ್ದಾಗ ಜೊತೆಯಲ್ಲಿದ್ದ ಸುಮಲತಾ, ಚಿತೆಯನ್ನು ನೋಡುತ್ತಿದ್ದಂತೆ ಅಸ್ವಸ್ಥರಾಗಿ ಕುಸಿದುಬಿದ್ದರು. ಅದೇ ವೇಳೆ ಅಂಬಿ ಕುಟುಂಬದ ಮತ್ತೊಬ್ಬ ಮಹಿಳೆಯೂ ಅಸ್ವಸ್ಥಗೊಂಡರು.

ತಕ್ಷಣವೇ‌ ಪಕ್ಕದಲ್ಲಿದ್ದ ಮೋಹನ್‌ಬಾಬು, ರಾಕ್‌ಲೈನ್‌ ವೆಂಕಟೇಶ್‌, ಮುನಿರತ್ನ, ಜಯಮಾಲಾ ಮತ್ತಿತರರು ಸುಮಲತಾ ಅವರನ್ನು ಸಂತೈಸಿದರು. ಸ್ಥಳದಲ್ಲೇ ಹಾಜರಿದ್ದ ವೈದ್ಯರು, ಇಬ್ಬರಿಗೂ ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡರು.

250 ಕೆಜಿ ಗಂಧದ ಕಟ್ಟಿಗೆ ಬಳಕೆ

ವೈದಿಕ ನಾಗೇಶ್‌ ದೀಕ್ಷಿತ್‌ ನೇತೃತ್ವದ ತಂಡ ಅಂಬರೀಷ್‌ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿತು. ಅಂತ್ಯಕ್ರಿಯೆಗೆ 250 ಕಿಲೋ ಗಂಧದ ಕಟ್ಟಿಗೆ, 10 ಕಿಲೋ ತುಪ್ಪ ಸೇರಿದಂತೆ ಹುಣಿಸೆ, ಅತ್ತಿ ಮರದ ಕಟ್ಟಿಗೆಗಳನ್ನು ಬಳಸಲಾಯಿತು.

ಧ್ವಜ ಹಸ್ತಾಂತರ; ಕಣ್ಣೀರ ಧಾರೆ

ಪಾರ್ಥಿವ ಶರೀರಕ್ಕೆ ಹೊದಿಸಿದ್ದ ರಾಷ್ಟ್ರ ಧ್ವಜವನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಸುಮಲತಾ ಅವರಿಗೆ ಹಸ್ತಾಂತರಿಸಿದರು. ಧ್ವಜ ಸ್ವೀಕರಿಸಿದ ಸುಮಲತಾ ಕೆಲಕ್ಷಣ ಕಣ್ಣೀರು ಸುರಿಸಿದರು.

‘ರೆಬಲ್’ ಕಿವಿಯಲ್ಲಿ ಪಿಸುಗುಟ್ಟಿದ ಪತ್ನಿ

ಅಂಬಿ ಜೊತೆಗಿನ ಶಾರೀರಿಕ ಸಂಬಂಧ ಕಳಚಿಕೊಳ್ಳುವ ‘ಶಾಸ್ತ್ರ’ವಾಗಿ ಚಿತೆಯ ಮೇಲಿಟ್ಟ ಪಾರ್ಥಿವ ಶರೀರಕ್ಕೆ ‘ಅಕ್ಕಿ ಕಾಳು‘ ಹಾಕಿದ ಪತ್ನಿ ಸುಮಲತಾ ಬಳಿಕ ಮುತ್ತಿಕ್ಕಿದಾಗ ಅಲ್ಲಿ ಮೌನ ಆವರಿಸಿತು. ಪತಿಯ ಕಳೇಬರಹದ ಮೇಲೆ ಬಾಗಿದ ಅವರು ಅದೇನನ್ನೋ ಪಿಸುಗುಟ್ಟಿದರು. ಬಳಿಕ, ಪಾದ ಮುಟ್ಟಿ ನಮಸ್ಕರಿಸಿ ಒಂದೇ ಸಮನೆ ಕಣ್ಣೀರಿಟ್ಟರು. ಅಪ್ಪನ ಮುಖದ ಮೇಲೆ ತನ್ನ ಮುಖ ಆನಿಸಿದ ಪುತ್ರ ಅಭಿಷೇಕ್‌ ಕೂಡಾ ಕೆಲಕ್ಷಣ ಮೌನಿಯಾದರು. ಆ ಕ್ಷಣ, ಅಲ್ಲಿದ್ದವರ ಕಣ್ಣುಗಳು ತೇವಗೊಂಡವು.

ಹೆಗಲುಕೊಟ್ಟ ಕಲಾವಿದರು

‘ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ, ಹರೇ ರಾಮ ಹರೇ ರಾಮ, ರಾಮ ರಾಮ, ಹರೇ ಹರೇ...’ ಎಂದು ಮಂತ್ರಘೋಷ ಮೊಳಗುತ್ತಿರುವ ಮಧ್ಯೆಯೇ ಚಿತೆಯ ಮೇಲೇರಿದ ಪಾರ್ಥಿವ ಶರೀರಕ್ಕೆ ಸಿನಿಮಾ ಕಲಾವಿದರು ಹೆಗಲುಕೊಟ್ಟರು. ಶಿವರಾಜ್‌ ಕುಮಾರ್‌, ದರ್ಶನ್‌, ಗಣೇಶ್‌, ಯಶ್‌ ಹೀಗೆ ಹಿರಿಯ– ಕಿರಿಯ ನಟರು ಅಂಬಿ ಕಳೇಬರವನ್ನು ಹೆಗಲ ಮೇಲಿಟ್ಟುಕೊಂಡು ಚಿತೆಗೆ ಸುತ್ತು ಬಂದರು.

ಅಂಬಿ ವಿದಾಯ ಪಯಣ

11.50: ಮಂಡ್ಯದಿಂದ ಕಂಠೀರವ ಕ್ರೀಡಾಂಗಣಕ್ಕೆ ಬಂದ ಪಾರ್ಥಿವ ಶರೀರ

12.30: ಅಂತಿಮ ಯಾತ್ರೆ ಆರಂಭ

3.47: ಕಂಠೀರವ ಸ್ಟುಡಿಯೊ ತಲುಪಿದ ಪಾರ್ಥಿವ ಶರೀರ

4.16: ಅಂತ್ಯಕ್ರಿಯೆ ವಿಧಿವಿಧಾನ ಆರಂಭ

4.55: ಸರ್ಕಾರಿ ಗೌರವ; ಮೂರು ಬಾರಿ ಹಾರಿದ ಕುಶಾಲು ತೋಪು

5.33: ಚಿತೆ ಏರಿದ ಕಳೇಬರಹ

5.36: ಅಂಬಿಗೆ ಸುಮಲತಾ ವಿದಾಯದ ಮುತ್ತು

5.56: ಚಿತೆಗೆ ಅಗ್ನಿಸ್ಪರ್ಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT