ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ| ನಿಜಗುಣಾನಂದ ಸ್ವಾಮೀಜಿಗೆ ಬೆದರಿಕೆ ಪತ್ರ

Last Updated 24 ಜನವರಿ 2020, 12:28 IST
ಅಕ್ಷರ ಗಾತ್ರ

ಬೆಳಗಾವಿ: ಕಿತ್ತೂರು ತಾಲ್ಲೂಕಿನ ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿ ಅವರನ್ನು ಇದೇ ತಿಂಗಳ 29ರಂದು ‘ಸಂಹಾರ’ ಮಾಡುವುದಾಗಿ ಬೆದರಿಕೆ ಪತ್ರವೊಂದು ದಾವಣಗೆರೆಯಿಂದ ಅವರ ಮಠಕ್ಕೆ ಬಂದಿದೆ.

ನಿಜಗುಣಾನಂದ ಸ್ವಾಮೀಜಿ ಅವರಲ್ಲದೇ, ಬಜರಂಗದಳದ ಮಾಜಿ ನಾಯಕ ಮಹೇಂದ್ರಕುಮಾರ್‌, ನಿಡುಮಾಮಿಡಿ ವೀರಭದ್ರ ಸ್ವಾಮೀಜಿ, ಚಿತ್ರನಟ ಪ್ರಕಾಶ್‌ ರಾಜ್‌, ಚೇತನಕುಮಾರ್‌, ಬಿ.ಟಿ. ಲಲಿತಾ ನಾಯಕ, ಮಹೇಶ್ಚಂದ್ರ ಗುರು, ಭಗವಾನ್‌, ದಿನೇಶ ಅಮಿನ್‌ ಮಟ್ಟು, ಅಗ್ನಿ ಶ್ರೀಧರ್‌, ಬೃಂದಾ ಕಾರಟ್‌ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ 15 ಜನರನ್ನು ಹತ್ಯೆ ಮಾಡುವುದಾಗಿ ಅನಾಮಧೇಯ ಪತ್ರದಲ್ಲಿ ಬೆದರಿಕೆಯೊಡ್ಡಲಾಗಿದೆ.

2–3 ತಿಂಗಳಿನಿಂದಲೂ ಬೆದರಿಕೆ:

‘ಶಿಷ್ಯಂದಿರ ದೂರವಾಣಿಗೆ ಕರೆ ಮಾಡಿ, ನನ್ನನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಕಳೆದ 2–3 ತಿಂಗಳಿನಲ್ಲಿ ಸುಮಾರು 3–4 ಸಲ ಕರೆಗಳು ಬಂದಿವೆ. ನನ್ನ ಜೊತೆ ನೇರವಾಗಿ ಮಾತನಾಡಿಲ್ಲ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರನ್ನು ಖುದ್ದು ಭೇಟಿಯಾಗಿ, ಗಮನಕ್ಕೆ ತಂದಿದ್ದೇನೆ. ಕಿತ್ತೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದೇನೆ’ ಎಂದು ನಿಜಗುಣಾನಂದ ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ವೈಚಾರಿಕತೆ ಕಾರಣ:

‘ಹಲವು ವರ್ಷಗಳಿಂದ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುತ್ತಿದ್ದೇನೆ. ಮೂಢನಂಬಿಕೆ, ಕಂ‌ದಾಚಾರ ಹಾಗೂ ಅಂಧಶ್ರದ್ಧೆಯಲ್ಲಿ ತೊಡಗದಂತೆ ಜಾಗೃತಿ ಮೂಡಿಸುತ್ತಿದ್ದೇನೆ. ಇದನ್ನು ಅವರು (ಕರೆ ಮಾಡಿದವರು, ಪತ್ರ ಬರೆದವರು) ಸಹಿಸುತ್ತಿಲ್ಲ. ನನ್ನನ್ನು ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದಾರೆ.ಇಂತಹ ಬೆದರಿಕೆಗೆ ನಾನು ಬಗ್ಗಲ್ಲ. ವೈಚಾರಿಕ ಪ್ರಜ್ಞೆ ಮೂಡಿಸುವ ಕಾಯಕವನ್ನು ಮುಂದುವರಿಸುತ್ತೇನೆ’ ಎಂದು ಸ್ವಾಮೀಜಿ ಪ್ರತಿಕ್ರಿಯಿಸಿದರು.

ಭದ್ರತೆ ಒದಗಿಸಲಾಗಿದೆ–ಎಸ್ಪಿ:

‘ಸ್ವಾಮೀಜಿ ಅವರಿಗೆ ಬೆದರಿಕೆ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ ಭದ್ರತೆ ಒದಗಿಸಲಾಗಿದೆ. ಸದ್ಯಕ್ಕೆ ಅವರು ಕಲ್ಬುರ್ಗಿಯ ಜೇವರ್ಗಿಯಲ್ಲಿ ಇದ್ದಾರೆ. ಅಲ್ಲಿಯೂ ಅವರಿಗೆ ಭದ್ರತೆ ಒದಗಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT