ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದರಾಯನಪುರದಲ್ಲಿ ಗಲಭೆಕೋರನಿಂದ ಮೂವರಿಗೆ ಸೋಂಕು

ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 182ಕ್ಕೆ ಏರಿಕೆ
Last Updated 12 ಮೇ 2020, 19:38 IST
ಅಕ್ಷರ ಗಾತ್ರ

ಬೆಂಗಳೂರು: ಪಾದರಾಯನಪುರದ ಗಲಭೆಕೋರನಿಂದ (ರೋಗಿ 454) ಮೂವರಿಗೆ ಸೋಂಕು ಹರಡಿದೆ. ನಗರದಲ್ಲಿ ಮಂಗಳವಾರ ನಾಲ್ಕು ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 182ಕ್ಕೆ ಏರಿಕೆಯಾಗಿದೆ.

ಪಾದರಾಯನಪುರ ಗಲಭೆಯಲ್ಲಿ ಭಾಗಿಯಾಗಿ ಜೈಲು ಸೇರಿದ್ದ 23 ವರ್ಷದ ಯುವಕನಿಗೆ ಏ.24ರಂದು ಸೋಂಕು ತಗುಲಿತ್ತು. ಆತನ ಸಂಪರ್ಕ ಹೊಂದಿದ್ದವರನ್ನು ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಅವರ ಕ್ವಾರಂಟೈನ್ ಅವಧಿ ಮುಗಿದ ಬಳಿಕ ನಡೆಸಿದ ತಪಾಸಣೆಯಲ್ಲಿ ಮೂವರಿಗೆ ಸೋಂಕು ಪತ್ತೆಯಾಗಿದೆ. 33 ವರ್ಷದ ಒಬ್ಬ ಹಾಗೂ 38 ವರ್ಷದ ಇಬ್ಬರು ಮಹಿಳೆಯರು ಸೋಂಕಿತರಾಗಿದ್ದಾರೆ.

ಮಂಗಮ್ಮನಪಾಳ್ಯದ ಮದೀನ‌ ನಗರದಲ್ಲಿ 35 ವರ್ಷದ ಗೂಡ್ಸ್ ಲಾರಿ ಚಾಲಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆತ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಆರೋಗ್ಯಾಧಿಕಾರಿಗಳು ಸೋಂಕು ಹೇಗೆ ತಗುಲಿತು ಎನ್ನುವುದನ್ನು ಪತ್ತೆ ಮಾಡುತ್ತಿದ್ದಾರೆ. ಚಾಲಕನ ಕುಟುಂಬದ ನಾಲ್ವರು ಸದಸ್ಯರನ್ನು ಕ್ವಾರಂಟೈನ್ ಮಾಡಲಾಗಿದೆ. ಉಸಿರಾಟದ ಸಮಸ್ಯೆ ಸಂಬಂಧ ಖಾಸಗಿ ಕ್ಲಿನಿಕ್ ಒಂದರಲ್ಲಿ ಚಿಕಿತ್ಸೆ ಪಡೆದಿದ್ದರು. ಕ್ಲಿನಿಕ್ ಅನ್ನು ತಪಾಸಣೆ ನಡೆಸಿ, ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಮಹಿಳೆಗಿಲ್ಲ ಸೋಂಕು:ಎರಡು ದಿನಗಳ ಹಿಂದೆ ಜಯನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದ ಮಹಿಳೆಗೆ ಕೊರೊನಾ ಸೋಂಕು ತಗುಲಿಲ್ಲ ಎನ್ನುವುದು ಪ್ರಯೋಗಾಲಯದ ಪರೀಕ್ಷಾ ವರದಿಯಿಂದ ದೃಢಪಟ್ಟಿದೆ.

ಭೈರಸಂದ್ರದ ನಿವಾಸಿ ಸತ್ಯಮ್ಮ (47) ತೀವ್ರ ಹೊಟ್ಟೆನೋವು ಸಮಸ್ಯೆಯಿಂದಾಗಿ ಆಸ್ಪತ್ರೆಗೆ ಶನಿವಾರ ದಾಖಲಾಗಿದ್ದರು. ಚಿಕಿತ್ಸೆ ಸಾಧ್ಯವಿಲ್ಲ ಎಂದು ಕೈಚೆಲ್ಲಿದ ಅಲ್ಲಿನ ವೈದ್ಯರು, ಬೇರೆ ಆಸ್ಪತ್ರೆಗೆ ತೆರಳಲು ಸೂಚಿಸಿದರು. ಇದರಿಂದ ಜಯನಗರದ 3ನೇ ಹಂತದಲ್ಲಿರುವ ಖಾಸಗಿ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ಅವರನ್ನು ಕರೆತರಲಾಗಿತ್ತು. ಆದರೆ, 45 ನಿಮಿಷ ಅವರನ್ನು ಆಸ್ಪತ್ರೆಯ ಆವರಣದಲ್ಲಿಯೇ ಕಾಯಿಸಿ, ಬಳಿಕ ದಾಖಲಿಸಿಕೊಳ್ಳಲಾಗಿತ್ತು. ಮಹಿಳೆಗೆ ಕೊರೊನಾ ಸೋಂಕು ತಗುಲಿದೆಯೇ ಎಂಬ ವೈದ್ಯರ ಆತಂಕವೇ ವಿಳಂಬ ಮಾಡಲು ಕಾರಣವಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಮಹಿಳೆ ಭಾನುವಾರ ರಾತ್ರಿ ಮೃತಪಟ್ಟಿದ್ದರು. ಅವರ ಗಂಟಲ ದ್ರವವನ್ನು ಪರೀಕ್ಷೆಗೆ ಕಳಿಸಿ, ಮೃತದೇಹವನ್ನು ಆಸ್ಪತ್ರೆಯಲ್ಲಿಯೇ ಇರಿಸಿಕೊಳ್ಳಲಾಗಿತ್ತು.

ವೈದ್ಯರ ನಿರ್ಲಕ್ಷ್ಯದಿಂದಲೇ ಮಹಿಳೆ ಮೃತಪಟ್ಟಿರುವುದಾಗಿ ಕುಟುಂಬದ ಸದಸ್ಯರು ಆರೋಪಿಸಿದ್ದು, ಮೃತದೇಹಕ್ಕಾಗಿ ಎರಡು ದಿನ ಆಸ್ಪತ್ರೆಯ ಆವರಣದಲ್ಲಿಯೇ ಕಳೆದಿದ್ದಾರೆ. ಮಹಿಳೆಗೆ ಸೋಂಕು ತಗುಲಿಲ್ಲ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ಮೃತದೇಹವನ್ನು ಕೊಂಡೊಯ್ಯಲು ವೈದ್ಯರು ಅನುಮತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT