ಮೈತ್ರಿ ಸರ್ಕಾರದ ಮೇಲೆ ವಿಶ್ವಾಸವಿಡಿ: ಸಿಎಂ

7
ಮೂರು ದಿನಗಳ ರಾಜ್ಯಮಟ್ಟದ ಮತ್ಸ್ಯ ಹಾಗೂ ಜಾನುವಾರ ಮೇಳ ಆರಂಭ

ಮೈತ್ರಿ ಸರ್ಕಾರದ ಮೇಲೆ ವಿಶ್ವಾಸವಿಡಿ: ಸಿಎಂ

Published:
Updated:
Prajavani

ರಾಯಚೂರು: ರೈತರ ಸಾಲಮನ್ನಾ ಹೇಳಿಕೆಗೆ ಈಗಲೂ ಬದ್ದವಾಗಿದ್ದೇನೆ ಎಂದು ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಹೇಳಿದರು.

ಜಿಲ್ಲೆಯ ಸಿಂಧನೂರಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಪಶುಪಾಲನೆ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ ಮತ್ತು ಮೀನುಗಾರಿಕೆ ಇಲಾಖೆಯಿಂದ ಆಯೋಜಿಸಿದ ಮೂರು ದಿನಗಳ ರಾಜ್ಯಮಟ್ಟದ ಮತ್ಸ್ಯಹಾಗೂ ಜಾನುವಾರು ಮೇಳವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

’ಈ ಮುಂಚೆ ರೈತರ ಬೆಳೆಸಾಲವನ್ನು ನಾಲ್ಕು ಹಂತಗಳಲ್ಲಿ ಮನ್ನಾ ಮಾಡಲಾಗುವುದು ಅಂತ ಹೇಳಿದ್ದೆ. ರೈತರ ಸಾಲಮನ್ನಾ ವಿಷಯದಲ್ಲಿ ರೈತ ಸಮುದಾಯ ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗುವುದು ಬೇಡ. ಸಾಲಮನ್ನಾಗೆ ಸಂಬಂಧಿಸಿದಂತೆ ಒಂದು ಸಮಿತಿ ರಚಿಸಲಾಗಿದ್ದು, ವೈಜ್ಞಾನಿಕವಾಗಿ ರೈತನಿಗೆ ಈ ಸಾಲಮನ್ನಾ ಹಣ ತಲುಪಬೇಕು ಎಂಬ ಸದಾಶಯದೊಂದಿಗೆ ಇಡೀ ದೇಶದಲ್ಲಿಯೇ ಅತ್ಯುತ್ತಮವಾದ ವೈಜ್ಞಾನಿಕವಾದ ನಿಯಮವಾಳಿಗಳನ್ನು ಸಿದ್ದಪಡಿಸಲಾಗಿದೆ. ರೈತರು ಪಹಣಿ, ಆಧಾರ್ ಸಂಖ್ಯೆ ಮತ್ತು ರೇಷನ್ ಕಾರ್ಡ್ ಮಾಹಿತಿ ನೀಡಿ’ ಎಂದು ಮನವಿ ಮಾಡಿದರು.

’ರೈತರ ಸಾಲಮನ್ನಾಕ್ಕಾಗಿ ಬೇರೆ ಬೇರೆ ಯೋಜನೆಗಳ ಮತ್ತು ಕಾರ್ಯಕ್ರಮಗಳ ಹಾಗೂ ಇಲಾಖೆಗಳ ಅನುದಾನ ಕಡಿತ ಮಾಡಲಾಗುತ್ತಿದೆ ಎಂಬುದು ಶುದ್ದ ಸುಳ್ಳು. ಸಾಲಮನ್ನಾ ಮಾಡಲು ಪ್ರತ್ಯೇಕ ಹಣ ತೆಗೆದಿರಿಸಿದ್ದು, ಅದರಡಿಯೇ ಸಾಲಮನ್ನಾಗೆ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದರು.

’ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಾಲಮನ್ನಾ ಆದವರಿಗೆ ಈಗ ಸಾಲಮನ್ನಾ ಅನ್ವಯ ಆಗಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಅದು ಶುದ್ದ ಸುಳ್ಳು; ಅದುವೇ ಬೇರೆ ಮತ್ತು ಇದೇ ಬೇರೆ’ ಎಂದರು.

’ರೈತ ಸಾಲದ ಸುಳಿಗೆ ಸಿಲುಕದಂತೆ ಮಾಡುವ ನಿಟ್ಟಿನಲ್ಲಿ ಕ್ರಮ: ರೈತರು ಇನ್ಮುಂದೆ ಯಾವುದೇ ರೀತಿಯ ಸಾಲದ ಸುಳಿಗೆ ಸಿಲುಕದಂತೆ ಅವರನ್ನು ಕಾಪಾಡುವ ಮತ್ತು ಅವರಲ್ಲಿ ಚೈತನ್ಯ ತುಂಬಿ‌ ನಗುಮೊಗದೊಂದಿಗೆ ಬಾಳುವ ನಿಟ್ಟಿನಲ್ಲಿ ಹೊಸ ಹೊಸ ಮಾರ್ಗಗಳನ್ನು ಸರ್ಕಾರ ಹುಡುಕುತ್ತಿದೆ’ ಎಂದು ಹೇಳಿದರು.

’ಇಸ್ರೇಲ್ ಕೃಷಿ ಪದ್ದತಿ, ರಾಜ್ಯ ಸರಕಾರವೇ ಬೆಂಬಲ ಬೆಲೆ ನೀಡುವಂತ ಕ್ರಮವೂ ಸೇರಿ ಇನ್ನಿತರ ಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಸೋನಾಮಸೂರಿ ಭತ್ತಕ್ಕೆ ಕ್ವಿಂಟಾಲ್‌ಗೆ ₹2 ಸಾವಿರ ಬೆಂಬಲ ಬೆಲೆ ಒದಗಿಸುವ ನಿಟ್ಟಿನಲ್ಲಿ ಶೀಘ್ರ ಕ್ರಮಕೈಗೊಳ್ಳಲಾಗುವುದು’ ಎಂದರು.

’ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಅಂತ ಕೇಂದ್ರದ ಮುಂದೆ ಪತ್ರ ಹಿಡಿದುಕೊಂಡು ಹೋಗುವುದಕ್ಕೆ ಇತಿಶ್ರೀ ಹಾಡಬೇಕೆಂದಿದ್ದು, ಬೆಂಬಲ ಬೆಲೆ, ಎಪಿಎಂಸಿ ಬಲವರ್ಧನೆ, ಮಧ್ಯವರ್ತಿಗಳ ಬ್ರೇಕ್ ಸೇರಿದಂತೆ ಇನ್ನೀತರ ಕ್ರಮಗಳನ್ನು ಬರುವ ಬಜೆಟ್ ನಲ್ಲಿ ಘೋಷಿಸಲಾಗುವುದು’ ಎಂದು ತಿಳಿಸಿದರು.

’ಮೈತ್ರಿ ಸರಕಾರದ ಮೇಲೆ ವಿಶ್ವಾಸವಿಡಿ, ರೈತರು ಯುವಕರು ಯಾವುದೇ ಕಾರಣಕ್ಕೂ ನಿರಾಶೆಗೆ ಒಳಗಾಗುವುದು ಬೇಡ. ಎಲ್ಲ ಬದಲಾವಣೆ ಮಾಡಲು ಮತ್ತು ಕ್ರಮ ಕೈಗೊಳ್ಳಲು ಸಮಯದ ಅವಶ್ಯಕತೆ ಇದೆ. ಅಧಿಕಾರವಿರಲಿ; ಇಲ್ಲದಿರಲಿ ಜಿಲ್ಲೆಯ ಜನರು ನನಗೆ ತೋರಿದ ಪ್ರೀತಿಗೆ ಚಿರ ಋಣಿಯಾಗಿದ್ದು, ತಮ್ಮ ನಿರೀಕ್ಷೆಗಳಿಗೆ ಸ್ಪಂದಿಸುವ ಕೆಲಸ ಸರಕಾರ ಮಾಡಲಿದೆ’ ಎಂದು ಹೇಳಿದರು.

ಸಹಕಾರ ಬ್ಯಾಂಕುಗಳಲ್ಲಿ 23ಲಕ್ಷ ರೈತರಿಗೆ ಸಾಲ ನೀಡಲಾಗುತ್ತಿದ್ದು, ಉಳಿದ ರೈತರಿಗೂ ವಿತರಿಸುವುದಕ್ಕೆ ಚಿಂತನೆ ನಡೆದಿದೆ. ಈ ಮೂಲಕ ಖಾಸಗಿ ಲೇವಾದೇವಿಗಾರರ ಆಟೋಟಪಕ್ಕೆ ಬ್ರೇಕ್ ಹಾಕಲಾಗುವುದು. ಬೀದಿ ಬದಿ ವ್ಯಾಪಾರಿಗಳಿಗೆ ಬಡವರ ಬಂಧು, ಸ್ತ್ರೀ ಶಕ್ತಿ ಗುಂಪುಗಳಿಗೆ ₹ 10ಲಕ್ಷದವರೆಗೆ ಸಾಲವನ್ನು ನಮ್ಮ ಸರ್ಕಾರ ವಿತರಿಸುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಬರಗಾಲದಲ್ಲಿ ಮೇಳವೂ ರೈತರಿಗೆ ಆತ್ಮವಿಶ್ವಾಸ ತುಂಬಲಿದೆ ಎಂದರು.

ಪಶುಸಂಗೋಪನೆ ಇಲಾಖೆಗೆ ಸಂಬಂಧಿಸಿದ ವಿವಿಧ ಕಿರುಹೊತ್ತಿಗೆಗಳನ್ನು ಬಿಡುಗಡೆ ಮಾಡಲಾಯಿತು.

ಕೃಷಿ ಸಚಿವ ಶಿವಶಂಕರ್ ರೆಡ್ಡಿ, ಶಾಸಕರಾದ ಅಮರೇಗೌಡ ಬಯ್ಯಾಪುರ, ಪ್ರತಾಪ್ ಗೌಡ ಪಾಟೀಲ, ವೆಂಕಟಪ್ಪ ನಾಯಕ, ಬಸವರಾಜ ದಡೇಸೂಗುರು, ಬಸವರಾಜ ದದ್ದಲ್, ಬಸವರಾಜ ಪಾಟೀಲ ಇಟಗಿ, ಡಿ.ಎಸ್.ಹುಲಗೇರಿ, ಜಿಲ್ಲಾಧಿಕಾರಿ  ಬಿ. ಶರತ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಲಿನ್‌ ಅತುಲ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ಕಿಶೋರಬಾಬು ಇದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !