ಶನಿವಾರ, ಡಿಸೆಂಬರ್ 14, 2019
23 °C
ಗದಗ, ಬೀದರ್‌, ಕೊಪ್ಪಳಗಳಲ್ಲಿ 37,500 ಎಕರೆ ಜಮೀನಿಗಾಗಿ ಹುಡುಕಾಟ

ಮೂರು ಬೃಹತ್ ಸೌರ ವಿದ್ಯುತ್ ಘಟಕ ಸ್ಥಾಪನೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದಲ್ಲಿ ಬೃಹತ್‌ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗೆ ಅನುಗುಣವಾಗಿ ಗದಗ, ಬೀದರ್ ಮತ್ತು ಕೊಪ್ಪಳಗಳಲ್ಲಿ ಇಂತಹ ಘಟಕಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಯೋಜನೆಗೆ ರಾಜ್ಯದ 37,500 ಎಕರೆ ಜಮೀನನ್ನು ಬಳಸಿಕೊಂಡರೂ, ಉತ್ಪಾದನೆಯಾಗುವ ವಿದ್ಯುತ್ ಅನ್ನು ಇತರ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಭಾರತೀಯ ಸೌರ ವಿದ್ಯುತ್‌ ನಿಗಮ (ಎಸ್‌ಇಸಿಎಲ್‌) ಮತ್ತು ಕರ್ನಾಟಕ ಪುನರ್‌ಬಳಕೆ ಇಂಧನ ಅಭಿವೃದ್ಧಿ ಕಂಪನಿಗಳ (ಕೆಆರ್‌ಇಡಿಎಲ್‌) ಸಹಯೋಗದಲ್ಲಿ ಈ ಯೋಜನೆ ರೂಪುಗೊಳ್ಳಲಿದೆ.

ಯೋಜನೆಗೆ ಜಮೀನು ಪಡೆಯುವ ನಿಟ್ಟಿನಲ್ಲಿ ಕೆಆರ್‌ಇಡಿಎಲ್‌ ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ತಲಾ 2,500 ಮೆಗಾವಾಟ್‌ ಸಾಮರ್ಥ್ಯದ ಮೂರು ಸ್ಥಾವರಗಳ ಸ್ಥಾಪನೆಗಾಗಿ ಪ್ರತಿ ಜಿಲ್ಲೆಯಲ್ಲಿ 12,500 ಎಕರೆ ಜಮೀನು ಬೇಕು ಎಂದು ತಿಳಿಸಲಾಗಿದೆ. 

ಅಂತರ ರಾಜ್ಯ ವಿದ್ಯುತ್‌ ಸರಬರಾಜು ವ್ಯವಸ್ಥೆಯ (ಐಎಸ್‌ಟಿಎಸ್‌) ಮಾದರಿಯಲ್ಲಿ ಸೌರ ವಿದ್ಯುತ್ ಘಟಕಗಳು ಸ್ಥಾಪನೆಗೊಳ್ಳಲಿದ್ದು, ಕೆಆರ್‌ಇಡಿಎಲ್‌ ಇಲ್ಲಿ ನಿವೇಶನವನ್ನು ಒಟ್ಟುಗೂಡಿಸುವ ಪಾತ್ರ ನಿರ್ವಹಿಸಲಿದೆ.

ನಿವೇಶನ ಸ್ವಾಧೀನಪಡಿಸಿಕೊಂಡ ಬಳಿಕ ಎಸ್‌ಇಸಿಎಲ್‌ಗೆ ಅದನ್ನು ಹಸ್ತಾಂತರಿಸಲಾಗುತ್ತದೆ. ಸೌರ ವಿದ್ಯುತ್‌ ಘಟಕಗಳಿಂದ ಉತ್ಪಾದನೆಯಾಗುವ ವಿದ್ಯುತ್ ಪಡೆಯುವ ರಾಜ್ಯಗಳು ಯಾವುವು ಎಂಬುದು ಸ್ಪಷ್ಟವಾಗಿಲ್ಲ.

ಪಾವಗಡ ಮಾದರಿಯಲ್ಲಿ ಭೋಗ್ಯ: ಪಾವಗಡದಲ್ಲಿ ಸ್ಥಾಪಿಸಲಾಗಿರುವ ಸೋಲಾರ್‌ ಪಾರ್ಕ್‌ನಲ್ಲಿ ಭೂ ಮಾಲೀಕರಿಂದ ನಿವೇಶನ ಪಡೆದ ಮಾದರಿಯಲ್ಲಿ ಈ ಮೂರೂ ಜಿಲ್ಲೆಗಳಲ್ಲಿ ನಿವೇಶನ ಪಡೆಯಲಾಗುತ್ತದೆ. ಸರ್ಕಾರ 28 ವರ್ಷಗಳ ಅವಧಿಗೆ ಸಾರ್ವಜನಿಕರಿಂದ ಭೋಗ್ಯಕ್ಕೆ ಈ ಜಮೀನು ಪಡೆಯಲಿದೆ.

‘ಪಾವಗಡದಲ್ಲಿ ಎಕರೆಗೆ ವಾರ್ಷಿಕ ₹ 21 ಸಾವಿರಕ್ಕೆ ಜಮೀನನ್ನು ಭೋಗ್ಯಕ್ಕೆ ಪಡೆಯಲಾಗಿದೆ. ಭೂಮಾಲೀಕರು ಇನ್ನೂ ₹ 3 ಸಾವಿರದಷ್ಟು ಅಧಿಕ ಹಣ ಪಡೆಯಲೂಬಹುದು. ಆದರೆ ಅಂತಿಮ ನಿರ್ಧಾರ ಕೈಗೊಳ್ಳುವವರು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೇ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದರು.

ಜಮೀನು ನೀಡಲು ಮುಂದೆ ಬರುವ ಭೂಮಾಲೀಕರಿಗೆ ತಮ್ಮ ನಿಲುವು ತಿಳಿಸಲು ಇದೇ 18ರ ಗಡುವು ನೀಡಲಾಗಿತ್ತು. ಇದೀಗ ಅಧಿಕ ಮಂದಿ ಇದರತ್ತ ಆಸಕ್ತಿ ತೋರಿಸುತ್ತಿರುವ ಕಾರಣ ಈ ಗಡುವನ್ನು ಇದೇ 30ರವರೆಗೆ ವಿಸ್ತರಿಸಲಾಗಿದೆ.

ಗದಗ ಜಿಲ್ಲೆಯ ಮುಂಡರಗಿಯಲ್ಲಿ ಒಂದೇ ಕಡೆ 4 ಸಾವಿರ ಎಕರೆಯಷ್ಟು ಜಮೀನು ನೀಡುವ ನಿಟ್ಟಿನಲ್ಲಿ ಭೂ ಮಾಲೀಕರು ಕೆಆರ್‌ಇಡಿಎಲ್‌ ಅನ್ನು ಸಂಪರ್ಕಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗ ಹಾಗೂ ಬೀದರ್‌ ಜಿಲ್ಲೆಯ ಔರಾದ್‌ಗಳಲ್ಲಿ ಇಂತಹ ಘಟಕ ಸ್ಥಾಪನೆಗೆ ಜನರು ಆಸಕ್ತಿ ತೋರಿಸಿದ್ದಾರೆ ಎಂದು ಹೇಳಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು