ತೇಜಸ್ವಿನಿ ಅನಂತಕುಮಾರ್‌ಗೆ ಟಿಕೆಟ್ ಮಿಸ್, ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ಸ್ಪರ್ಧೆ

ಸೋಮವಾರ, ಏಪ್ರಿಲ್ 22, 2019
29 °C

ತೇಜಸ್ವಿನಿ ಅನಂತಕುಮಾರ್‌ಗೆ ಟಿಕೆಟ್ ಮಿಸ್, ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ಸ್ಪರ್ಧೆ

Published:
Updated:
Prajavani

ಬೆಂಗಳೂರು: ಬಿಜೆಪಿಯ ಭದ್ರಕೋಟೆ ಎನಿಸಿರುವ ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಯುವ ವಕೀಲ ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ಟಿಕೆಟ್ ನೀಡಿ ಕಣಕ್ಕಿಳಿಸಲು ತೀರ್ಮಾನಿಸಿದೆ. ಸೋಮವಾರ ಮಧ್ಯರಾತ್ರಿಯವರಿಗೆ ನಡೆದ ಚರ್ಚೆ ಹಾಗೂ ನಾಟಕೀಯ ಬೆಳವಣಿಗೆಗಳ ಫಲವಾಗಿ ಅಂತಿಮ ಹೆಸರು ತೇಜಸ್ವಿ ಸೂರ್ಯ ಎಂದು ತಿಳಿದುಬಂದಿದೆ.

ಇದಲ್ಲದೆ, ಅನಂತಕುಮಾರ್ ಪತ್ನಿ ತೇಜಸ್ವಿನಿ ಅವರು ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ಯುವ ವಕೀಲ ತೇಜಸ್ವಿ ಸೂರ್ಯ ಹೆಸರು ಪ್ರಕಟವಾಗಿದೆ. ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದ ಜೊತೆಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ತಡರಾತ್ರಿವರೆಗೂ ನಡೆದ ಸಭೆಯ ನಂತರ ಆಡಳಿತ ಪಕ್ಷ ಎಲ್ಲಾ ವದಂತಿ ಹಾಗೂ ಮಾತುಗಳಿಗೂ ತೆರೆ ಎಳೆದು ತೇಜಸ್ವಿ ಸೂರ್ಯ ಹೆಸರು ಅಂತಿಮಗೊಳಿಸಿದೆ. 28 ವರ್ಷ ವಯಸ್ಸಿನ ತೇಜಸ್ವಿ ಸೂರ್ಯ ಈ ಸಂಬಂಧ ಮಧ್ಯರಾತ್ರಿಯೇ ಟ್ವಿಟರ್ ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

'ಓ ದೇವರೆ ನಾನು ಇದನ್ನು ನಂಬಲು ಆಗುತ್ತಿಲ್ಲ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಮಂತ್ರಿ ಮತ್ತು ಬೃಹತ್ ರಾಜಕೀಯ ಪಕ್ಷದ ಅಧ್ಯಕ್ಷರು ನಂಬಿಕೆ, ವಿಶ್ವಾಸಗಳನ್ನು ಈ 28 ವರ್ಷದ ಯುವಕನ ಮೇಲೆ ಇಟ್ಟು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವಂತೆ ಹೇಳಿದ್ದಾರೆ. ಇದು ಕೇವಲ ಬಿಜೆಪಿಯಲ್ಲಿ ಮಾತ್ರ ನಡೆಯುತ್ತದೆ' ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಚೌಕಿದಾರ್ ತೇಜಸ್ವಿ ಎಂಬ ಹ್ಯಾಷ್ ಟ್ಯಾಗ್ ನಲ್ಲಿ ಪ್ರತಿಕ್ರಿಯಿಸಿರುವ ತೇಜಸ್ವಿ ಸೂರ್ಯ, ವಿನೀತ, ಕೃತಜ್ಞ, ಈ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸುತ್ತೇನೆ. ಆದರೆ, ಎಷ್ಟೇ ಧನ್ಯವಾದ ಹೇಳಿದರೂ ಅದು ಸಾಲದು. ನನ್ನ ಕೊನೆ ಉಸಿರಿರುವ ತನಕ ನನ್ನ ತಾಯ್ನಾಡಿನ ಸೇವೆ ಸಲ್ಲಿಸುವ ಪ್ರಮಾಣ ಮಾಡುತ್ತೇನೆ. ಹೀಗೆ ಮಾಡುವುದರ ಮೂಲಕವಷ್ಟೇ ನನ್ನ ಕೃತಜ್ಞತೆಗಳನ್ನು ಸಲ್ಲಿಸಬಹುದು ಎಂದು ಹೇಳಿದ್ದಾರೆ.

ಇದನ್ನು ಟೈಪಿಸುವ ವೇಳೆ ನನ್ನ ಕೈಗಳು ನಡುಗುತ್ತಿವೆ. ಕಳೆದ ವರ್ಷ, ನಾನು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅವರ ಜೊತೆ ಮಾತನಾಡುವ  ಅವಕಾಶ ಸಿಕ್ಕಿತ್ತು. ಒಂದು ಗಂಟೆ ಕಾಲ ನಮ್ಮಿಬ್ಬರ ಮಾತುಕತೆ ನಡೆಯಿತು. ಅದು ನನ್ನನ್ನು ಸಾಕಷ್ಟು ಪ್ರೇರೇಪಿಸಿತು. ಇದೇ ಗುಂಗಿನಲ್ಲಿ ನನಗೆ ಒಂದು ವಾರ ನಿದ್ರೆ ಮಾಡಲಿಲ್ಲ ಎಂದು ಹೇಳಿಕೊಂಡಿದ್ದಾರೆ. 

ಕೇಂದ್ರ ಸಚಿವ ಅನಂತಕುಮಾರ್ ಅವರು ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಅವರ ಅಕಾಲಿಕ ಸಾವಿನಿಂದಾಗಿ ತೆರವಾಗಿತ್ತು. ಮರು ಚುನಾವಣೆ ನಡೆಸುವ ವೇಳೆಗೆ ಸಾರ್ವತ್ರಿಕ ಚುನಾವಣೆಯೇ ಪ್ರಕಟವಾಯಿತು. ಈ ಸಮಯದಲ್ಲಿ ಸೋಮವಾರ ರಾತ್ರಿಯವರೆಗೂ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ನೀಡಲಿದ್ದಾರೆ ಎಂದು ಹೇಳಲಾಗಿತ್ತು.  ಕಾಂಗ್ರೆಸ್ ನಿಂದ ಬಿ.ಕೆ.ಹರಿಪ್ರಸಾದ್ ಸ್ಪರ್ಧಿಸುತ್ತಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 30

  Happy
 • 5

  Amused
 • 0

  Sad
 • 0

  Frustrated
 • 16

  Angry

Comments:

0 comments

Write the first review for this !