ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ದಾಳಿ: ಆರ್‌ಎಫ್‌ಒ ಪ್ರಾಣಾಪಾಯದಿಂದ ಪಾರು

Last Updated 1 ಜುಲೈ 2019, 20:21 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಳ್ಳೀಪುರ ಗ್ರಾಮದ ಕಾಡಂಚಿನಲ್ಲಿ ಹುಲಿಯೊಂದು‌ ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಧಿಕಾರಿ (ಆರ್‌ಎಫ್‌ಒ) ರಾಘವೇಂದ್ರ ಅವರ ಮೇಲೆ ಸೋಮವಾರ ದಾಳಿ ಮಾಡಿದೆ.

ರಾಘವೇಂದ್ರ ಅವರು ಕೂ‌ದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹುಲಿಯು ಅವರ ಎಡ ಹಾಗೂ ಬಲ ಕಾಲುಗಳಿಗೆ ಪರಚಿದ್ದು, ಎಡ ತೊಡೆಯನ್ನು ಕಚ್ಚಿದೆ.

ಕಳ್ಳೀಪುರ ಗ್ರಾಮದ ಜಮೀನೊಂದಕ್ಕೆ ಹುಲಿ ಬಂದಿದೆ ಎಂದು ಸ್ಥಳೀಯ ರೈತರೊಬ್ಬರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಪರಿಶೀಲನೆಗಾಗಿ ರಾಘವೇಂದ್ರ ಅವರು ಸಿಬ್ಬಂದಿ ಬಸವರಾಜು ಅವರೊಂದಿಗೆ ಸ್ಥಳಕ್ಕೆ ತೆರಳಿದ್ದರು.

ಹುಲಿಯ ಹೆಜ್ಜೆ ಗುರುತುಗಳಿವೆಯೇ ಎಂ‌ದುಪರಿಶೀಲನೆ ನಡೆಸುತ್ತಿದ್ದಾಗ ಜಮೀನಿನಲ್ಲಿ ಅವಿತಿದ್ದ ಹುಲಿ ರಾಘವೇಂದ್ರ ಅವರ ಮೇಲೆ ಎರಗಿ, ಬಲ, ಎಡ ಕಾಲುಗಳಿಗೆ ಪರಚಿ ಎಡ ತೊಡೆಗೆ ಕಚ್ಚಿದೆ. ಜೊತೆಗಿದ್ದ ಸಿಬ್ಬಂದಿ ಬಸವರಾಜು ಹಾಗೂ ಸ್ಥಳೀಯರು ಜೋರಾಗಿ ಕೂಗಿದಾಗ ಬೆದರಿದ ಹುಲಿ ಓಡಿ ಹೋಯಿತು.

ತಕ್ಷಣ ಅವರನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯಿತು. ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿ ಕುಮಾರ್‌ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರ್‌ಎಫ್‌ಒ ಆರೋಗ್ಯ ವಿಚಾರಿಸಿದರು.

ಮೈಸೂರು ಆಸ್ಪತ್ರೆಗೆ: ‘ಇದು ಆಕಸ್ಮಿಕ ಘಟನೆ. ಜಮೀನಿಗೆ ಹುಲಿ ಬಂದಿದೆ ಎಂದು ರೈತರು ಹೇಳಿದ್ದರಿಂದ ಪರಿಶೀಲನೆಗಾಗಿ ಇಬ್ಬರು ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದರೆ. ಅಲ್ಲಿಂದ ಹುಲಿ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಆರ್‌ಎಫ್‌ಒ ಮೇಲೆ ಹಾರಿದೆ. ಪ್ರಾಣಾಪಾಯಕ್ಕೆ ಏನೂ ಅಪಾಯ ಇಲ್ಲ’ ಎಂದು ಟಿ.ಬಾಲಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹುಲಿ ಕಚ್ಚಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಚಿಕಿತ್ಸೆಗಾಗಿ ರಾಘವೇಂದ್ರ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಫೆಬ್ರುವರಿ ತಿಂಗಳಲ್ಲಿ ಹಂಗಳ ಗ್ರಾಮದ ಜಮೀನೊಂದರಲ್ಲಿ ಅರಣ್ಯ ವೀಕ್ಷಕ ರಾಮು ಎಂಬುವವರ ಮೇಲೆ ಹುಲಿ ಎರಗಿತ್ತು. ಈ ಸಂದರ್ಭದಲ್ಲಿ ಅವರ ಬಲಗೈ ತೋಳಿಸಿ ಮಾಂಸ ಕಿತ್ತು ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT