ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಧರ್ಮ ಚುನಾವಣೆ ಸ್ಟಂಟ್‌

Last Updated 27 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ದಾವಣಗೆರೆ: ‘ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ವಿಷಯ ಚುನಾವಣಾ ಹೊತ್ತಿನಲ್ಲಿ ಮತಗಳನ್ನು ಸೆಳೆಯಲು ಕಾಂಗ್ರೆಸ್ ಸೃಷ್ಟಿಸಿದ ಸುಂಟರಗಾಳಿ. ಚುನಾವಣೆ ಮುಗಿದ ಮೇಲೆ ಅದು ಮರೆಯಾಗಲಿದೆ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದರು.

‘ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ವಿಷಯವನ್ನು ಮುನ್ನೆಲೆಗೆ ತಂದಿದೆ. ಮತಪತ್ರದ  ಮೂಲಕ ರಾಜ್ಯದ ಜನರು ಇದಕ್ಕೆ ತಕ್ಕ ಉತ್ತರ ನೀಡಬೇಕು’ ಎಂದು ಕರೆ ಕೊಡುವ ಮೂಲಕ ಲಿಂಗಾಯತ ಮತಗಳನ್ನು ಭದ್ರಪಡಿಸಿಕೊಳ್ಳುವ ಯತ್ನವನ್ನೂ ಮಾಡಿದರು.

ಕರುನಾಡ ಜಾಗೃತಿ ಯಾತ್ರೆ ಅಂಗವಾಗಿ ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಅವರು, ತುಮಕೂರಿನ ಸಿದ್ಧಗಂಗಾ, ಶಿವಮೊಗ್ಗದ ಬೆಕ್ಕಿನ ಕಲ್ಮಠ, ಸಿರಿಗೆರೆಯ ಬೃಹನ್ಮಠ, ಚಿತ್ರದುರ್ಗದ ಮುರುಘಾಮಠ, ಮಾದಾರ ಚೆನ್ನಯ್ಯ ಗುರುಪೀಠ ಸೇರಿದಂತೆ 40ಕ್ಕೂ ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು. ಮಂಗಳವಾರ ಬೆಳಿಗ್ಗೆ ಮಾಧ್ಯಮಗೋಷ್ಠಿಯನ್ನೂ ನಡೆಸಿದರು.

‘ಲಿಂಗಾಯತರಿಗೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡುವ ಕುರಿತು ನಿಮ್ಮ ನಿಲುವೇನು’ ಎಂಬ ಪ್ರಶ್ನೆಗೆ, ಅವರು ನಿಖರವಾಗಿ ಏನನ್ನೂ ಹೇಳಲಿಲ್ಲ.

ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ ಕರ್ನಾಟಕ ಕಳುಹಿಸಿದ್ದ ಪ್ರಸ್ತಾವನೆ ತಿರಸ್ಕೃತವಾಗಿತ್ತು. ಈ ವಿಷಯದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಐದು ವರ್ಷ ಏನನ್ನೂ ಮಾಡಲಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಯಾವುದಾದರೂ ಸಂಗತಿಯನ್ನು ಮುಂಚೂಣಿಗೆ ತರುವಂತೆ ಪ್ರತ್ಯೇಕ ಧರ್ಮದ ಮಾನ್ಯತೆ ವಿಷಯವನ್ನು ಹುಟ್ಟುಹಾಕಿದೆ. ಸದ್ಯದಲ್ಲೇ ನಡೆಯಲಿರುವ ಚುನಾವಣೆಯಲ್ಲಿ ರಾಜ್ಯದ ಜನರು ಇದಕ್ಕೆ ಉತ್ತರ ಕೊಡಲಿದ್ದಾರೆ ಎಂದರು.

‘ಇದೇ ಉದ್ದೇಶಕ್ಕಾಗಿ ಲಿಂಗಾಯತ ಮಠಾಧೀಶರನ್ನು ಭೇಟಿ ಮಾಡುತ್ತಿದ್ದೀರಾ’ ಎಂದು ಕೇಳಿದ ಪ್ರಶ್ನೆಗೆ, ‘ನಮಗೆ ಸ್ವಾಮೀಜಿಗಳ ಮೇಲೆ ಗೌರವ ಇದೆ. ಅವರ ಆಶೀರ್ವಾದ ಪಡೆಯಲು ಭೇಟಿ ಮಾಡುತ್ತಿದ್ದೇನೆ. ಅದನ್ನು ಬಿಟ್ಟರೆ ಬೇರೆ ಉದ್ದೇಶ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಅನೇಕ ಸ್ವಾಮೀಜಿಗಳು ಬಿಜೆಪಿ ಟಿಕೆಟ್ ಕೇಳುತ್ತಿದ್ದಾರಲ್ಲ’ ಎಂಬ ಪ್ರಶ್ನೆಗೆ, ‘ಸಾಮರ್ಥ್ಯ ಆಧರಿಸಿ ಟಿಕೆಟ್ ನೀಡುವ ಕುರಿತು ಪಕ್ಷದ ಸಂಸದೀಯ ಮಂಡಳಿ ತೀರ್ಮಾನಿಸಲಿದೆ’ ಎಂದಷ್ಟೇ ಹೇಳಿದರು.

ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರನ್ನು ಒಂದು ಮಾಡಿದ್ದೀರಿ, ತಾನೂ ಟಿಕೆಟ್ ಆಕಾಂಕ್ಷಿ ಎಂದು ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಗೌಡ ಹೇಳಿಕೆ ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ, ಈಶ್ವರಪ್ಪ-ಯಡಿಯೂರಪ್ಪ ಒಟ್ಟಿಗೆ ಇರುವ ಫೋಟೋವನ್ನು ನೀವು ನೋಡಿದ್ದೀರಲ್ಲ ಎಂದು ಶಾ ಕೇಳಿದರು.

ನಂದಿತಾ ಹತ್ಯೆ ಮಾಡಿದವರಿಗೆ ಶಿಕ್ಷೆ:
ತೀರ್ಥಹಳ್ಳಿಯ ನಂದಿತಾ ಎಂಬ ಮುಗ್ಧ ಬಾಲಕಿಯನ್ನು ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಎರಡು ವರ್ಷವಾದರೂ ರಾಜ್ಯ ಸರ್ಕಾರ ಬಂಧಿಸಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ದುರ್ಷರ್ಮಿಗಳನ್ನು ಬಂಧಿಸಲಾಗುವುದು ಎಂದರು.

ರಾಜ್ಯದಲ್ಲಿ ನಡೆಯುತ್ತಿರುವ ಸಂಘ ಪರಿವಾರ ಕಾರ್ಯಕರ್ತರ ಕೊಲೆಯ ಹಿಂದೆ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿಎಫ್ಐ) ಇದೆ. ಈ ಸಂಘಟನೆಯ ಮೇಲಿದ್ದ ಮೊಕದ್ದಮೆಗಳನ್ನು ಸಿದ್ದರಾಮಯ್ಯ ವಾಪಸ್ ಪಡೆದಿದ್ದರಿಂದಲೇ ಸರಣಿ ಹತ್ಯೆಗಳು ನಡೆಯುತ್ತಿವೆ. ಕೇರಳ ಸರ್ಕಾರ ಪಿಎಫ್‌ಐ ನಿಷೇಧ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದರೆ, ಸಿದ್ದರಾಮಯ್ಯ ಆ ಸಂಘಟನೆ ಜತೆ ದೋಸ್ತಿ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಬಂದ ಕೂಡಲೇ, ಪಿಎಫ್ಐ ಮೇಲಿದ್ದ ಮೊಕದ್ದಮೆಗಳಿಗೆ ಮರು ಜೀವ ನೀಡಲಾಗುವುದು ಎಂದು ಹೇಳಿದರು.

ಲಿಂಗಾಯತ ಪ್ರತ್ಯೇಕ ಧರ್ಮ; ಶಾಗೆ ಮನವಿ
ಚಿತ್ರದುರ್ಗ: ‘ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಕೇಂದ್ರ ಸರ್ಕಾರದ ಸಹಕಾರ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ನಮಗೆ ಸಹಕಾರ ನೀಡಬೇಕು’ ಎಂದು ಮುರುಘಾಮಠದ ಶಿವಮೂರ್ತಿ ಶರಣರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮಂಗಳವಾರ ಮುರುಘಾ ಮಠಕ್ಕೆ ಅಮಿತ್ ಶಾ ಭೇಟಿ ನೀಡಿದ ವೇಳೆ ಈ ವಿಷಯವಾಗಿ ಅವರಲ್ಲಿ ಮನವಿ ಮಾಡಿದ್ದೇನೆ ಎಂದು ಮುರುಘಾ ಶರಣರು ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದರು. ಮನವಿ ಸ್ವೀಕರಿಸಿದ ಶಾ ಅವರು, ‘ಈ ವಿಷಯವನ್ನು ಪರಿಶೀಲಿಸಿದ ನಂತರ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಹೇಳಿರುವುದಾಗಿ ಶರಣರು ಸ್ಪಷ್ಟಪಡಿಸಿದರು.

‘ಸಿದ್ದಗಂಗಾ ಮಠ, ಮುರುಘಾಮಠ, ಸಿರಿಗೆರೆ ಮಠ ಸೇರಿದಂತೆ ರಾಜ್ಯದಲ್ಲಿ ಸಾವಿರಾರು ಬಸವ ಪರಂಪರೆಯ ಮಠಗಳಿವೆ. ಎಲ್ಲವೂ ಬಸವಾದಿ ಶರಣರ ತತ್ವ ಪಾಲಿಸುತ್ತಿವೆ. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ಸಿಗಬೇಕು ಎಂಬುದು ಬಸವ ಧರ್ಮದ ಅನುಯಾಯಿಗಳ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಬಸವ ಪರಂಪರೆಯ ಮಠಾಧೀಶರ ಪರವಾಗಿ ಅಮಿತ್ ಶಾಗೆ ಮನವಿ ಮಾಡಿದ್ದೇನೆ’ ಎಂದು ವಿವರಿಸಿದರು.

‘ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿದ್ದ ಮಾತೆ ಮಹಾದೇವಿ ಈಗಾಗಲೇ ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ಈ ವಿಚಾರದಲ್ಲಿ ತಮ್ಮ ನಿಲುವೇನು’ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಈ ಕುರಿತು ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಡಿದ ಮಠಾಧೀಶರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಉತ್ತರಿಸಿದರು.

‘ದಾವಣಗೆರೆ – ಚಿತ್ರದುರ್ಗ – ತುಮಕೂರು ನೇರ ರೈಲು ಮಾರ್ಗವನ್ನು ತ್ವರಿತವಾಗಿ ಪೂರ್ಣಗೊಳಿಸಿದಲ್ಲಿ ಈ ಭಾಗದ ಜನತೆಗೆ ತುಂಬಾ ಅನುಕೂಲವಾಗಲಿದೆ. ಸಂಚಾರದ ಸಮಯವೂ ಉಳಿಯಲಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದು ಅನುಷ್ಠಾನಕ್ಕೆ ತರಬೇಕು. ಶ್ರೀಮಠದಿಂದ ನಿರ್ಮಿಸಲಾಗುತ್ತಿರುವ ಬೃಹತ್ ಬಸವ ಪುತ್ಥಳಿಗೂ ಅನುದಾನ ಕೊಡಿಸಲು ಪ್ರಯತ್ನಿಸಬೇಕು’ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದೇನೆ ಎಂದು ಶರಣರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT