ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿಗಳ ಅನುಮಾನಾಸ್ಪದ ಸಾವು: ಸಿಗದ ಸುಳಿವು

ನಾಗರಹೊಳೆ, ಬಂಡೀ‍ಪುರ ಹುಲಿ ರಕ್ಷಿತಾರಣ್ಯದಲ್ಲಿ ವ್ಯಾಘ್ರಗಳ ಅನುಮಾನಾಸ್ಪದ ಸಾವು
Last Updated 24 ಅಕ್ಟೋಬರ್ 2018, 6:13 IST
ಅಕ್ಷರ ಗಾತ್ರ

ಮೈಸೂರು: ಬಂಡೀಪುರ ಹಾಗೂ ನಾಗರಹೊಳೆ ಹುಲಿ ರಕ್ಷಿತಾರಣ್ಯದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಮೂರು ಹುಲಿಗಳ ಸಾವಿಗೆ ನಿಖರ ಕಾರಣ ಪತ್ತೆಯಾಗಿಲ್ಲ.

ಜನವರಿ 26ರಂದು ಬಂಡೀಪುರ ಹುಲಿ ರಕ್ಷಿತಾರಣ್ಯದ ಹಿಮವದ್‌ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದಲ್ಲಿ ಎರಡು ಹುಲಿಗಳ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವಿಷಪ್ರಾಶನದಿಂದ ಸಾವನ್ನಪ್ಪಿವೆ ಎಂಬ ಶಂಕೆ ವ್ಯಕ್ತವಾಗಿತ್ತು. ದೇಹದ ಮಾದರಿಗಳನ್ನು 4 ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು.

ಕೊಯಮತ್ತೂರಿನ ವಿಧಿವಿಜ್ಞಾನ ಪ್ರಯೋಗಾಲಯ ಮಾತ್ರ ಹುಲಿಗಳ ಜಠರದಲ್ಲಿ ವಿಷದ ಅಂಶ ಇದೆ ಎಂದು ವರದಿ ನೀಡಿದೆ. ಹೀಗಾಗಿ, ಈ ವಿಚಾರದಲ್ಲಿ ಅಂತಿಮ ತೀರ್ಮಾನ ನೀಡುವಂತೆ ಬೆಂಗಳೂರಿನ ಪಶುವೈದ್ಯಕೀಯ ವಿಜ್ಞಾನಗಳ ಪ್ರಯೋಗಾಲಯಕ್ಕೆ ಪತ್ರ ಬರೆಯಲಾಗಿದೆ. ಇದುವರೆಗೂ ಹುಲಿಗಳ ಸಾವಿಗೆ ಕಾರಣ ಪತ್ತೆಯಾಗಿಲ್ಲ.

ಇಂತಹುದೇ ಮತ್ತೊಂದು ಘಟನೆ ಸೆಪ್ಟೆಂಬರ್‌ 28ರಂದು ಮೈಸೂರು ವನ್ಯಜೀವಿ ವಲಯದ ಹಾರೋಹಳ್ಳಿ ಬಳಿಯ ಚಿಕ್ಕನಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿತ್ತು. ಹೆಣ್ಣು ಹುಲಿಯೊಂದರ ಶವ ಪತ್ತೆಯಾಗಿತ್ತು. ಆರಂಭದಲ್ಲಿ ವಿದ್ಯುತ್ ತಂತಿಬೇಲಿಗೆ ಸಿಲುಕಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಇದು ದೃಢಪಟ್ಟಿಲ್ಲ.

ಈ ಪ್ರದೇಶಕ್ಕೆ ಹುಲಿ ಸೇರಿದ್ದಲ್ಲ ಎಂಬುದು ಖಚಿತವಾಗಿದೆ. ಇಲ್ಲಿಗೆ ಹುಲಿ ಮೃತದೇಹವನ್ನು ಟ್ರ್ಯಾಕ್ಟರ್‌ನಲ್ಲಿ ತಂದು ಬೀಸಾಡಿರುವ ಕುರುಹುಗಳು ಪತ್ತೆಯಾಗಿವೆ. ಆದರೆ, ಶವವನ್ನು ಎಲ್ಲಿಂದ, ಯಾರು, ಏಕೆ ತಂದು ಹಾಕಿದರು ಎಂಬುದು ಮಾತ್ರ ಒಂದು ತಿಂಗಳಾದರೂ ಪತ್ತೆಯಾಗಿಲ್ಲ.

ಈ ಕುರಿತು ಅರಣ್ಯ ಇಲಾಖೆಯು ಪೊಲೀಸ್‌ ಠಾಣೆಗೂ ದೂರು ನೀಡಿದೆ. ಪೊಲೀಸರೂ ತನಿಖೆ ನಡೆಸುತ್ತಿದ್ದಾರೆ. ಸದ್ಯ, ಶವ ಪತ್ತೆಯಾದ ಪ್ರದೇಶದಲ್ಲಿ ಕಂಡು ಬಂದಿರುವ ಮೊಬೈಲ್‌ ಕರೆಗಳ ಮಾಹಿತಿ ಕಲೆ ಹಾಕಲಾಗುತ್ತಿದೆ.

ಆಗಸ್ಟ್‌ನಲ್ಲಿ ಕಬಿನಿ ಹಿನ್ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿ ದೇಹ ಪತ್ತೆಯಾಗಿತ್ತು. ವಿದ್ಯುತ್‌ ಆಘಾತದಿಂದ ಮೃತಪಟ್ಟಿದೆ ಎಂಬುದು ಸಾಬೀತಾಗಿದ್ದು, ಇಬ್ಬರು ರೈತರನ್ನು ಬಂಧಿಸಲಾಗಿದೆ. ಜಮೀನಿನ ತಂತಿಬೇಲಿಗೆ ವಿದ್ಯುತ್ ಸಂಪರ್ಕ ನೀಡಿದ್ದರಿಂದ ಸಿಲುಕಿ ಮೃತಪಟ್ಟಿದ್ದು, ನಂತರ, ಮೃತದೇಹವನ್ನು ಕಬಿನಿ ಹಿನ್ನೀರಿನಲ್ಲಿ ಎಸೆಯಲಾಗಿತ್ತು.

ಕೆಲ ದಿನಗಳ ಹಿಂದೆ ಹುಲಿ ಚರ್ಮ ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಅರಣ್ಯ ಸಂಚಾರ ದಳದ ಪೊಲೀಸರು ಇಲವಾಲ ಬಳಿ ಬಂಧಿಸಿದ್ದರು. ಪಿರಿಯಾಪಟ್ಟಣ ಬಳಿಯ ನಾಗರಹೊಳೆ ಅರಣ್ಯದಲ್ಲಿ ಉರುಳಿಗೆ ಸಿಲುಕಿ ಮೃತಪಟ್ಟ ಹುಲಿ ಚರ್ಮವನ್ನು ಸುಲಿದು ಮಾರಾಟಕ್ಕೆ ತಂದಿರುವುದಾಗಿ ಒಪ್ಪಿಕೊಂಡಿದ್ದ. ಹುಲಿ ಬೇಟೆ ಇನ್ನೂ ಜೀವಂತವಾಗಿದೆ ಎಂಬುದು ಈ ಮೂಲಕ ಸಾಬೀತಾಗಿತ್ತು.

**

ಸದ್ಯ ಕೊಯಮತ್ತೂರಿನ ವಿಧಿವಿಜ್ಞಾನ ಪ್ರಯೋಗಾಲಯ ಮಾತ್ರ ಹುಲಿಗಳ ಜಠರದಲ್ಲಿ ವಿಷ ಇತ್ತು ಎಂದು ವರದಿ ನೀಡಿದೆ. ಬೆಂಗಳೂರು ಪಶುವೈದ್ಯಕೀಯ ವಿಜ್ಞಾನ ಪ್ರಯೋಗಾಲಯಕ್ಕೆ ಪತ್ರ ಬರೆದು ಅಂತಿಮ ವರದಿ ನೀಡುವಂತೆ ಮನವಿ ಮಾಡಲಾಗಿದೆ.
–ಅಂಬಾಡಿ ಮಾಧವ್, ಬಂಡೀಪುರ ಹುಲಿ ರಕ್ಷಿತಾರಣ್ಯ ನಿರ್ದೇಶಕ

**

ಮೈಸೂರು ವನ್ಯಜೀವಿ ವಲಯದಲ್ಲಿ ದೊರಕಿದ ಹುಲಿ ಶವದ ಕುರಿತು ತನಿಖೆ ಬಿರುಸುಗೊಂಡಿದೆ. ಶೀಘ್ರ ನಿಖರ ಕಾರಣ ಗೊತ್ತಾಗಲಿದೆ.
–ಹನುಮಂತಪ್ಪ, ಡಿಸಿಎಫ್, ಮೈಸೂರು ವಲಯ
**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT