ಟಿಪ್ಪು ಜಯಂತಿ: ಕೊಡಗಿನಲ್ಲಿ ಕಟ್ಟೆಚ್ಚರ, ಹಲವರಿಗೆ ನೋಟಿಸ್‌ ಜಾರಿ

7
ಚೆಕ್‌ಪೋಸ್ಟ್‌ನಲ್ಲಿ ಭದ್ರತೆ ಹೆಚ್ಚಳ

ಟಿಪ್ಪು ಜಯಂತಿ: ಕೊಡಗಿನಲ್ಲಿ ಕಟ್ಟೆಚ್ಚರ, ಹಲವರಿಗೆ ನೋಟಿಸ್‌ ಜಾರಿ

Published:
Updated:

ಮಡಿಕೇರಿ: ಮತೀಯ ವಿಚಾರದಲ್ಲಿ ಅತಿಸೂಕ್ಷ್ಮ ಜಿಲ್ಲೆ ಎನಿಸಿರುವ ಕೊಡಗಿನಲ್ಲಿ ನ. 10ರಂದು ನಡೆಯಲಿರುವ ಟಿಪ್ಪು ಜಯಂತಿಗೆ ಪ್ರಬಲ ವಿರೋಧ ವ್ಯಕ್ತವಾಗುತ್ತಿದೆ.

ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ, ಕೊಡವ ಮಕ್ಕಡ ಕೂಟ, ಬಿಜೆಪಿ, ಬಜರಂಗದಳ, ವಿಶ್ವ ಹಿಂದೂ ಪರಿಷತ್‌, ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಆಕ್ರೋಶ ಹೆಚ್ಚಾಗುತ್ತಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ಪೊಲೀಸ್‌ ಇಲಾಖೆಯು ಕಟ್ಟೆಚ್ಚರ ವಹಿಸಿದೆ. ಶಾಂತಿಭಂಗ ಉಂಟು ಮಾಡಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.

‘ಪ್ರವಾಹ, ಭೂಕುಸಿತದಿಂದ ಕೊಡಗಿನ ಜನರು ಸಂಕಷ್ಟದಲ್ಲಿದ್ದಾರೆ. ಜಿಲ್ಲೆಯ ಜನರ ಭಾವನೆಗಳಿಗೆ ವಿರುದ್ಧವಾಗಿರುವ ಜಯಂತಿ ಕೈಬಿಡಿ’ ಎಂದು ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಅಭಿಮನ್ಯು ಕುಮಾರ್‌ ಆಗ್ರಹಿಸಿದ್ದಾರೆ.

ವಿರೋಧ ವ್ಯಕ್ತಪಡಿಸುತ್ತಿರುವ ಹಲವರಿಗೆ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ. ಅವರನ್ನು ಸೋಮವಾರಪೇಟೆ, ವಿರಾಜಪೇಟೆ ಹಾಗೂ ಮಡಿಕೇರಿ ತಹಶೀಲ್ದಾರ್‌ ಎದುರು ಸೋಮವಾರ ಹಾಜರುಪಡಿಸಲಾಯಿತು. ಶಾಂತಿಭಂಗ ಉಂಟು ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ರೌಡಿಪಟ್ಟಿಯಲ್ಲಿರುವ ಹಲವರಿಂದ ಮುಚ್ಚಳಿಕೆ ಪತ್ರವನ್ನೂ ಬರೆಸಿಕೊಳ್ಳಲಾಗಿದೆ.

2015ರ ನ. 10ರಂದು ನಡೆದಿದ್ದ ಟಿಪ್ಪು ಜಯಂತಿಯು ಕಹಿ ಘಟನೆಗೆ ಸಾಕ್ಷಿಯಾಗಿತ್ತು. ಇಬ್ಬರು ಮೃತಪಟ್ಟಿದ್ದರು. 2016 ಹಾಗೂ 2017ರಲ್ಲೂ ಕೊಡಗಿನಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ಬಾರಿಯೂ ಮತ್ತೆ ಅದೇ ವಿರೋಧ ಎದ್ದಿದೆ.

ಇಬ್ಬರೂ ಹೊಸಬರು: ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಜಿಲ್ಲೆಗೆ ಬಂದು 8 ತಿಂಗಳಾಗಿದ್ದರೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನಾ ಡಿ.ಪನ್ನೇಕರ್‌ ಅವರು ಜಿಲ್ಲೆಗೆ ಬಂದು 5 ತಿಂಗಳಷ್ಟೇ ಕಳೆದಿದೆ. ಇಬ್ಬರೂ ಮಹಿಳಾ ಅಧಿಕಾರಿಗಳು ಭದ್ರತೆಯ ನೇತೃತ್ವ ವಹಿಸಿದ್ದು, ಮುಸ್ಲಿಂ ಹಾಗೂ ಹಿಂದೂ ಮುಖಂಡರೊಂದಿಗೆ ಸೋಮವಾರ ಶಾಂತಿಸಭೆ ನಡೆಸಿದರು.

ಚೆಕ್‌ಪೋಸ್ಟ್‌ ಆರಂಭ: 2015ರಲ್ಲಿ ನಡೆದಿದ್ದ ಗಲಭೆಗೆ ಹೊರ ರಾಜ್ಯದಿಂದ ಬಂದವರು ಕಾರಣವೆಂಬ ಆರೋಪ ಕೇಳಿಬಂದಿತ್ತು. ಹೀಗಾಗಿ, ಕೇರಳದ ಕಣ್ಣೂರು, ಕಾಸರಗೋಡು ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ನಿಗಾ ವಹಿಸಲು ಮಾಹಿತಿ ಪಡೆಯಲಾಗಿದೆ. ಜಿಲ್ಲೆಯ ಗಡಿಭಾಗಗಳಾದ ಮಾಲ್ದಾರೆ, ಕುಟ್ಟ, ಆನೆಚೌಕೂರು, ಸಿದ್ದಾಪುರ, ಕೊಪ್ಪ, ಶಿರಂಗಾಲ, ಕೊಡ್ಲಿಪೇಟೆ, ಶನಿವಾರಸಂತೆ, ಸಂಪಾಜೆಯಲ್ಲಿ ಚೆಕ್‌ಪೋಸ್ಟ್‌ಗಳಿದ್ದು, ಭದ್ರತೆ ಹೆಚ್ಚಿಸಲು ಪೊಲೀಸರು ಮುಂದಾಗಿದ್ದಾರೆ.

‘ಬಹಿರಂಗ ಸಭೆಗಳಿಗೆ ಅನುಮತಿ ನೀಡುವುದಿಲ್ಲ. ಹಳೇ ಕೋಟೆ ಆವರಣದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಶುಕ್ರವಾರ, ಶನಿವಾರ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗುವುದು. ಮದ್ಯ ಮಾರಾಟ ನಿಷೇಧ ಸೇರಿದಂತೆ ಹಲವು ಭದ್ರತಾ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !