ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಜಯಂತಿ: ಭರಾಟೆ–ಗಲಾಟೆ

ಮೈತ್ರಿ ಸರ್ಕಾರದ ಪಕ್ಷಗಳ ನಡುವೆಯೇ ಅಭಿಪ್ರಾಯಭೇದ
Last Updated 9 ನವೆಂಬರ್ 2018, 19:43 IST
ಅಕ್ಷರ ಗಾತ್ರ

ಬೆಂಗಳೂರು: ಟಿಪ್ಪು ಜಯಂತಿ ಆಚರಣೆ ರಾಜಕೀಯ ವಾಗ್ಯುದ್ಧಕ್ಕೆ ವೇದಿಕೆಯಾಗಿದ್ದು, ಟೀಕೆ–ಸಮರ್ಥನೆಗಳ ಭರಾಟೆ ಜೋರಾಗಿ ನಡೆದಿದೆ.

ಶನಿವಾರ ನಡೆಯಲಿರುವ ಟಿಪ್ಪು ಜಯಂತಿ ಆಚರಣೆಯನ್ನು ಬಿಜೆಪಿ ಬಹಿಷ್ಕರಿಸಿದರೆ, ಮೈತ್ರಿ ಸರ್ಕಾರದ ಭಾಗಿದಾರ ಪಕ್ಷಗಳ ಮಧ್ಯೆ ಈ ವಿಷಯದಲ್ಲಿ ಅಭಿಪ್ರಾಯಭೇದ ಮೂಡಿದೆ.

ಕಾರ್ಯಕ್ರಮದಲ್ಲಿ ಗೈರು ಹಾಜರಾಗುವ ಮೂಲಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಕೈಗೆ ಮತ್ತೊಂದು ಅಸ್ತ್ರ ನೀಡಿದ್ದಾರೆ. ಮುಖ್ಯಮಂತ್ರಿ ನಡೆಯನ್ನು ಸಚಿವ ಜಮೀರ್‌ ಅಹ್ಮದ್‌ ಖಾನ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮರ್ಥಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ವಿಶ್ರಾಂತಿ ಪಡೆಯುತ್ತಿರುವ ಕಾರಣ ಗೈರುಹಾಜರಾಗುತ್ತಿದ್ದಾರೆ. ಇದೊಂದು ದೊಡ್ಡ ವಿಷಯ ಅಲ್ಲ ಎಂದೂ ಅವರು ಪ್ರತಿಪಾದಿಸಿದ್ದಾರೆ.

ಬಿಜೆಪಿ ಬಹಿಷ್ಕಾರ:ಪಕ್ಷದ ಯಾವ ಶಾಸಕರು ಟಿಪ್ಪು ಜಯಂತಿಯಲ್ಲಿ ಭಾಗವಹಿಸುವುದಿಲ್ಲ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕರೂ ಆಗಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಯಡಿಯೂರಪ್ಪ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಗಳು ಕರೆ ಮಾಡಿ ಆಹ್ವಾನ ನೀಡಿದರು.

‘ನಮ್ಮ ಯಾವ ಶಾಸಕರು, ಸಂಸದರೂ ಪಾಲ್ಗೊಳ್ಳುವುದಿಲ್ಲ. ಆಹ್ವಾನ ಪತ್ರಿಕೆಯಲ್ಲಿ ಯಾರ ಹೆಸರೂ ಹಾಕುವುದು ಬೇಡ’ ಎಂಬುದಾಗಿ ಯಡಿಯೂರಪ್ಪ ವಿನಂತಿಸಿದರು ಎಂದು ಅಧಿಕಾರಿಯೊಬ್ಬರು ಹೇಳಿದರು.

ಜಯಂತಿ ಆಚರಣೆಯನ್ನು ಖಂಡಿಸಿ ಬಿಜೆಪಿ ರಾಜ್ಯದಾದ್ಯಂತ ಶುಕ್ರವಾರ ಪ್ರತಿಭಟನೆ ನಡೆಸಿತು.

ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರನ್ನು ಹಿಗ್ಗಾಮುಗ್ಗಾ ಟೀಕಿಸಿದ ತೆಗೆದುಕೊಂಡ ಬಿಜೆಪಿ ನಾಯಕರು, ರಾಜ್ಯ ಸರ್ಕಾರದ ವಿರುದ್ಧವೂ ಟೀಕಾಪ್ರಹಾರ ನಡೆಸಿದರು. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ, ಮುತ್ತಿಗೆ ಯತ್ನ ನಡೆಸಿದ ಆ ಪಕ್ಷದ ನಾಯಕರು, ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

ಕೊಡಗಿನಲ್ಲಿ ಕಟ್ಟೆಚ್ಚರ: ಟಿಪ್ಪು ಜಯಂತಿ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಕೊಡಗಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಜಿಲ್ಲಾಡಳಿತದಿಂದ ಶನಿವಾರ ನಗರದ ಹಳೇ ಕೋಟೆಯ ವಿಧಾನ ಸಭಾಂಗಣದಲ್ಲಿ ಜಯಂತಿ ನಡೆಯುತ್ತಿದ್ದು ಪೊಲೀಸ್‌
ಸರ್ಪಗಾವಲು ಹಾಕಲಾಗಿದೆ. ಮಂಡ್ಯ, ಚಿತ್ರದುರ್ಗದಲ್ಲೂ ಮುನ್ನೆಚ್ಚರಿಕೆ ವಹಿಸಲಾಗಿದೆ.

ಕೊಡಗು ಜಿಲ್ಲೆಯ ಒಳಗೆ 40 ಹಾಗೂ ಕೇರಳ ರಾಜ್ಯದ ಕಣ್ಣೂರು, ವಯನಾಡು, ಕಾಸರಗೋಡು, ಹಾಸನ, ದಕ್ಷಿಣ ಕನ್ನಡ ಹಾಗೂ ಮೈಸೂರು ಜಿಲ್ಲೆಗೆ ಹೊಂದಿಕೊಂಡಂತೆ 10 ಕಡೆ ಚೆಕ್‌ಪೋಸ್ಟ್‌ ತೆರೆಯಲಾಗಿದ್ದು, 40 ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಮೂರು ತಾಲ್ಲೂಕುಗಳ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚುವರಿ 200 ಸಿ.ಸಿ ಟಿ.ವಿ ಕ್ಯಾಮೆರಾ ಹಾಕಲಾಗಿದೆ.

2015ರಲ್ಲಿ ನಡೆದಿದ್ದ ಗಲಾಟೆಗೆ ಹೊರ ರಾಜ್ಯದಿಂದ ಬಂದ ಕಿಡಿಗೇಡಿಗಳೇಕಾರಣವೆಂಬ ಆರೋಪವಿತ್ತು. ಹೀಗಾಗಿ, ರಾಜ್ಯದ ಗಡಿಭಾಗದಲ್ಲಿ ಹದ್ದಿನಕಣ್ಣಿಡಲಾಗಿದೆ.

**

ತಡೆಗೆ ನಕಾರ

‘ಸರ್ಕಾರದ ವತಿಯಿಂದ ನಡೆಸಲಾಗುವ ಟಿಪ್ಪುಜಯಂತಿ ಆಚರಣೆಗೆ ತಡೆ ನೀಡಬೇಕು’ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರ (ಪಿಐಎಲ್‌) ಮಧ್ಯಂತರ ಮನವಿಯನ್ನು ಹೈಕೋರ್ಟ್‌ ಸಾರಾಸಗಟಾಗಿ ತಳ್ಳಿಹಾಕಿದೆ.

**

ಕಿರಿಕಿರಿ ತಪ್ಪಿಸಿಕೊಳ್ಳಲು ಸಿ.ಎಂ ವಿಶ್ರಾಂತಿ

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟಿಪ್ಪುಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಟೀಕೆಗೆಒಳಗಾಗುವುದನ್ನು ತಪ್ಪಿಸಿಕೊಳ್ಳಲು ಆರೋಗ್ಯದಕಾರಣ ನೀಡಿ ಮೂರು ದಿನಗಳ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಿ, ವಿಶ್ರಾಂತಿಯ ಮೊರೆ ಹೋಗಿದ್ದಾರೆ.

ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಹಾಜರಾಗಿರಲಿಲ್ಲ. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರೂ ಭಾಗವಹಿಸಿರಲಿಲ್ಲ.ಇದು ಟೀಕೆಗೆ ಕಾರಣವಾಗಿತ್ತು. ಈಗ ಟಿಪ್ಪು ಜಯಂತಿಯಲ್ಲಿ ಭಾಗಿಯಾದರೆ ಅನಗತ್ಯ ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣದಿಂದ ಮುಖ್ಯಮಂತ್ರಿ, ಕಾರ್ಯಕ್ರಮಕ್ಕೆ ಗೈರಾಗುವ ನಿಲುವು ತಾಳಿದರು.

‘ವಿವಾದಕ್ಕೆ ಕಾರಣವಾಗುತ್ತಿರುವ ಜಯಂತಿಗಳನ್ನು ಸರ್ಕಾರವೇ ಆಚರಿಸುವ ಅಗತ್ಯ ಏನಿದೆ’ ಎಂದುಕಳೆದ ವರ್ಷ ಟಿಪ್ಪು ಜಯಂತಿ ಸಂದರ್ಭದಲ್ಲಿ ಕುಮಾರಸ್ವಾಮಿ ಪ್ರಶ್ನಿಸಿದ್ದರು. ಈ ಬಾರಿ ಪಾಲ್ಗೊಂಡರೆ ಮುಜುಗರ ಅನುಭವಿಸಬೇಕಾಗುತ್ತದೆ ಎಂಬಕಾರಣಕ್ಕೆ ಅವರು ಹೊರಗುಳಿದರುಎನ್ನಲಾಗುತ್ತಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುವಾರ ಬಿಡುಗಡೆ ಮಾಡಿದ ಆಹ್ವಾನ ಪತ್ರದಲ್ಲಿ ಮುಖ್ಯಮಂತ್ರಿ ಹೆಸರು ಇರಲಿಲ್ಲ. ಈ ಬಗ್ಗೆ ಚರ್ಚೆ ಆರಂಭವಾಗುತ್ತಿದ್ದಂತೆ, ಶುಕ್ರವಾರ ಬೆಳಿಗ್ಗೆ ಹೇಳಿಕೆಯೊಂದನ್ನು ಬಿಡುಗಡೆಮಾಡಿದ ಮುಖ್ಯಮಂತ್ರಿ ಸಚಿವಾಲಯ, ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ಇರುವ ಕಾರಣವನ್ನು ಸ್ಪಷ್ಟಪಡಿಸಿತು.

**

ರಾಜ್ಯದಲ್ಲಿ ಹಿಂದೂ–ಮುಸ್ಲಿಮರು ಸಂತೋಷವಾಗಿದ್ದರು. ಈಗ ಕಾಂಗ್ರೆಸ್‌ನವರು ಟಿಪ್ಪು ಜಯಂತಿ ಹೆಸರಿನಲ್ಲಿ ಇಬ್ಬರ ಮಧ್ಯೆ ಬೆಂಕಿ ಹಚ್ಚಿ ಆಟ ನೋಡುತ್ತಿದ್ದಾರೆ. ಜನ ಸತ್ತರೆ ಇವರಿಗೇನು ಆನಂದವೋ ಗೊತ್ತಿಲ್ಲ
-ಕೆ.ಎಸ್‌.ಈಶ್ವರಪ್ಪ, ಬಿಜೆಪಿ ಶಾಸಕ

**

ಬಿಜೆಪಿ 2013ರಲ್ಲಿ ಟಿಪ್ಪು ಜಯಂತಿ ಮಾಡಲಿಲ್ಲ. ಹಾಗಾಗಿ, ಅಧಿಕಾರಕ್ಕೆ ಬರಲಿಲ್ಲ. ಸಿದ್ದರಾಮಯ್ಯ ನಿರಂತರವಾಗಿ ಜಯಂತಿ ಆಚರಿಸಿದರು. ಇದರಿಂದಾಗಿ ನಾವು ಮತ್ತೆ ಅಧಿಕಾರಕ್ಕೆ ಬಂದೆವು
–ಜಮೀರ್‌ ಅಹ್ಮದ್‌ ಖಾನ್‌, ಸಚಿವ

**

ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ಕಾಂಗ್ರೆಸ್‌ಗಿಂತ ಮೊದಲೇ ಆರಂಭಿಸಿದ್ದು ನಾವು (ಜೆಡಿಎಸ್‌). 20 ವರ್ಷಗಳಿಂದ ಈ ಕಾರ್ಯಕ್ರಮಕ್ಕೆ ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿ ಎಂದೂ ತಪ್ಪಿಸಿಲ್ಲ
–ಬಂಡೆಪ್ಪ ಕಾಶೆಂಪೂರ, ಸಚಿವ

**

ಮುಸ್ಲಿಮರು ಹುಟ್ಟುಹಬ್ಬ ಆಚರಣೆಯಲ್ಲಿ ನಂಬಿಕೆ ಹೊಂದಿಲ್ಲದೇ ಇದ್ದರೂ ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ ಆರಂಭಿಸಿದ ಸಿದ್ದರಾಮಯ್ಯ ಅವರು ಟಿಪ್ಪುವಿಗಿಂತಲೂ ದೊಡ್ಡ ಮತಾಂಧ
–ನಳಿನ್‌ ಕುಮಾರ್‌ ಕಟೀಲ್‌, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT