ಟಿಪ್ಪು ಜಯಂತಿ ಆಚರಣೆ ಸ್ಥಳ: ಕಾಂಗ್ರೆಸ್‌ನಲ್ಲಿ ಗೊಂದಲ

7

ಟಿಪ್ಪು ಜಯಂತಿ ಆಚರಣೆ ಸ್ಥಳ: ಕಾಂಗ್ರೆಸ್‌ನಲ್ಲಿ ಗೊಂದಲ

Published:
Updated:
Deccan Herald

ಬೆಂಗಳೂರು: ಟಿಪ್ಪು ಜಯಂತಿ ರಾಜ್ಯ ಮಟ್ಟದ ಕಾರ್ಯಕ್ರಮ ಆಚರಣೆಯ ಸ್ಥಳ ನಿಗದಿ ಮಾಡುವ ಬಗ್ಗೆ ಕಾಂಗ್ರೆಸ್‌ನಲ್ಲಿ ಗೊಂದಲ ಸೃಷ್ಟಿಯಾಗಿದೆ.

ವಿಧಾನಸೌಧದ ಬ್ಯಾಕ್ವೆಂಟ್‌ಹಾಲ್‌ನಲ್ಲೇ ಜಯಂತಿ ನಡೆಸಬೇಕು ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಆಹಾರ, ವಕ್ಫ್‌ ಸಚಿವ ಜಮೀರ್ ಅಹಮದ್ ಖಾನ್‌ ಪಟ್ಟು ಹಿಡಿದರೆ, ಗೃಹ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಸುವುದು ಸೂಕ್ತ ಎಂದು ಪ್ರತಿಪಾದಿಸಿದ್ದಾರೆ.

ಜಮೀರ್‌ ಅಹಮದ್‌ ಖಾನ್‌ ಅವರು ಸಿದ್ದರಾಮಯ್ಯ ಮೂಲಕ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಟಿಪ್ಪು ಜಯಂತಿ ನಡೆಸುವಂತೆ ಒತ್ತಡ ಹೇರಿದ್ದಾರೆ. ಜಮೀರ್‌ ಅವರ ವಾದವನ್ನು ಪುರಸ್ಕರಿಸಿರುವ ಸಿದ್ದರಾಮಯ್ಯ, ‘ಈ ಹಿಂದೆಯೂ ಟಿಪ್ಪು ಜಯಂತಿಯನ್ನು ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಚರಿಸಲಾಗಿತ್ತು. ಈ ಬಾರಿಯೂ ಅಲ್ಲಿಯೇ ಆಚರಿಸಬೇಕು’ ಎಂದು ಸಲಹೆ ನೀಡಿದ್ದಾರೆ.

‘ಈ ಕಾರ್ಯಕ್ರಮವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಸುವುದು ಸೂಕ್ತ ಮತ್ತು ಮಧ್ಯಾಹ್ನದೊಳಗೆ ಮುಗಿಸುವುದು ಉತ್ತಮ’ ಎಂದು ಪರಮೇಶ್ವರ ಅವರಿಗೆ ಪೊಲೀಸ್‌ ಇಲಾಖೆ ಹಿರಿಯ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಮುಂದೆ ಇದೇ ವಾದವನ್ನು ಪರಮೇಶ್ವರ ಮುಂದಿಟ್ಟಿದ್ದಾರೆ. ಆದರೆ, ಇದಕ್ಕೆ ಜಮೀರ್‌ ವಿರೋಧ ವ್ಯಕ್ತಪಡಿಸಿದ್ದು, ಕಾರ್ಯಕ್ರಮ ಸಂಜೆ 6ಕ್ಕೆ ನಡೆಸುವಂತೆ ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ಜಮೀರ್‌, ‘ಮೂರು ವರ್ಷಗಳಿಂದ ಟಿಪ್ಪು ಜಯಂತಿ ಬ್ಯಾಂಕ್ವೆಟ್‌ ಹಾಲ್‌ನಲ್ಲೇ ಆಚರಿಸಲಾಗಿದೆ. ಈ ಬಾರಿಯೂ ಅಲ್ಲೇ ಆಚರಿಸಲಾಗುವುದು’ ಎಂದು ಹೇಳಿದರು.

**

ಕೊಡಗು ಬಂದ್‌ಗೆ ಕರೆ

ಮಡಿಕೇರಿ: ಇದೇ 10ರಂದು ನಡೆಯಲಿರುವ ಟಿಪ್ಪು ಜಯಂತಿ ವಿರೋಧಿಸಿ ಕೊಡಗು ಜಿಲ್ಲೆಯಲ್ಲಿ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ. 

‘ಜಿಲ್ಲೆಯ 3 ತಾಲ್ಲೂಕಿನಲ್ಲೂ ಬಂದ್‌ ನಡೆಯಲಿದೆ. ಆಟೊ ಚಾಲಕರು, ಖಾಸಗಿ ಬಸ್‌ ಹಾಗೂ ಅಂಗಡಿ ಮಾಲೀಕರು ಬಂದ್‌ಗೆ ಸಹಕಾರ ನೀಡುವ ವಿಶ್ವಾಸವಿದೆ’ ಎಂದು ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಅಭಿಮನ್ಯು ಕುಮಾರ್‌ ಸೋಮವಾರಪೇಟೆಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸೋಮವಾರಪೇಟೆ, ವಿರಾಜಪೇಟೆ ಯಲ್ಲಿ ಗುರುವಾರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಶುಕ್ರವಾರ ಮಡಿಕೇರಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

10ರಂದೂ ಶಾಂತಿಯುತ ಪ್ರತಿಭಟನೆ ನಡೆಸಿ ‘ಕರಾಳ ದಿನ’ ಆಚರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

2015ರಲ್ಲಿ ಜಿಲ್ಲೆಯಲ್ಲಿ ನಡೆದಿದ್ದ ಟಿಪ್ಪು ಜಯಂತಿಯು ಕಹಿ ಘಟನೆಗೆ ಸಾಕ್ಷಿಯಾಗಿತ್ತು. ಇಬ್ಬರು ಮೃತಪಟ್ಟಿದ್ದರು. 2016 ಹಾಗೂ 2017ರಲ್ಲೂ ಕೊಡಗಿನಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ಬಾರಿಯೂ ಮತ್ತೆ ಅದೇ ವಿರೋಧ ಎದ್ದಿದ್ದು ವ್ಯಾಪಕ ಬಂದೋಬಸ್ತ್‌ ಮಾಡಿಕೊಳ್ಳಲಾಗಿದೆ.

**

ಶ್ರೀರಂಗಪಟ್ಟಣದಲ್ಲಿ ಎರಡು ದಿನ ನಿಷೇಧಾಜ್ಞೆ: ಮೆರವಣಿಗೆ ನಿಷೇಧ

ಶ್ರೀರಂಗಪಟ್ಟಣ: ಟಿಪ್ಪು ಜಯಂತಿ ಆಚರಣೆ ಅಂಗವಾಗಿ ಪಟ್ಟಣದಲ್ಲಿ ನ.9ರಿಂದ 2 ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಪಟ್ಟಣದಲ್ಲಿ ಬುಧವಾರ ನಡೆದ ಟಿಪ್ಪು ಸುಲ್ತಾನ್‌ ಜಯಂತಿ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜ್‌ ಈ ವಿಷಯ ತಿಳಿಸಿದರು.

‘ನ. 9ರ ಸಂಜೆ 6 ಗಂಟೆಯಿಂದ 11ರ ಬೆಳಿಗ್ಗೆ 6ರ ವರೆಗೆ ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮೈಸೂರು ಕಡೆಯಿಂದ ಹೆಚ್ಚು ಜನರು ಪಟ್ಟಣದತ್ತ ಬರುವ ಸಾಧ್ಯತೆ ಇದೆ. ಅಂದು ಮೆರವಣಿಗೆ, ಬಾವುಟ ಪ್ರದರ್ಶನ, ಡಿಜೆ ಬಳಕೆ, ಘೋಷಣೆ ಕೂಗುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ’ ಎಂದರು.

**

ಕೆಜೆಪಿ ಕಟ್ಟಿದ್ದಾಗ ಯಡಿಯೂರಪ್ಪ ಟಿಪ್ಪು ಸ್ಮರಿಸಿದ್ದರು. ಜಗದೀಶ ಶೆಟ್ಟರ್‌, ಆರ್‌.ಅಶೋಕ ಟಿಪ್ಪು ವೇಷ ಧರಿಸಿದ್ದರು. ಆಗಿನ ಪ್ರೇಮ ಈಗೇಕ್ಕಿಲ್ಲ?

–ಜಮೀರ್ ಅಹ್ಮದ್ ಖಾನ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !