ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಜಯಂತಿ ರದ್ದು: ವಿಧಾನಸಭೆಯಲ್ಲಿ ಗದ್ದಲ

Last Updated 31 ಜುಲೈ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: ಟಿಪ್ಪು ಜಯಂತಿ ರದ್ದು ಮಾಡಿರುವುದನ್ನು ಖಂಡಿಸಿ ವಿರೋಧ ಪಕ್ಷಗಳ ನಾಯಕರು ವಿಧಾನಸಭೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ವಿಧಾನಸಭಾಧ್ಯಕ್ಷರ ಆಯ್ಕೆಯ ಬಳಿಕ ಈ ವಿಷಯವನ್ನು ಪ್ರಸ್ತಾಪಿಸಲು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಎದ್ದು ನಿಂತರು. ‘ನಾವು ವಿಷಯ ಪ್ರಸ್ತಾಪಿಸುವಾಗ ಮುಖ್ಯಮಂತ್ರಿ ಹಾಜರಿರಬೇಕು’ ಎಂದು ಪಟ್ಟು ಹಿಡಿದರು.

ಚಿಕ್ಕಮಗಳೂರಿನಲ್ಲಿ ಸಿದ್ಧಾರ್ಥ ಅವರ ಅಂತ್ಯಕ್ರಿಯಲ್ಲಿ ಭಾಗವಹಿಸಲು ತೆರಳುತ್ತಿರುವುದಾಗಿ ಹೇಳಿ ಯಡಿಯೂರಪ್ಪ ನಿರ್ಗಮಿಸಿದರು. ಈ ಬಗ್ಗೆ ಸಿದ್ದರಾಮಯ್ಯ ಭಾರಿ ಆಕ್ರೋಶ ವ್ಯಕ್ತಪಡಿಸಿದಾಗ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಧ್ವನಿಗೂಡಿಸಿದರು.

‘ಮುಖ್ಯಮಂತ್ರಿ ಹೊರಟು ಹೋದರು, ಇನ್ನೂ ಸಚಿವರ ನೇಮಕ ಆಗಿಲ್ಲ. ಯಾರಿಗೆ ಮಾತನಾಡಬೇಕು. ಒಂದೇ ದಿನಕ್ಕೆ ಅಧಿವೇಶನ ಕರೆದು ಮುಂದೂಡಿದರೆ ಹೇಗೆ’ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ, ‘ಮುಖ್ಯಮಂತ್ರಿಯವರು ಚಿಕ್ಕಮಗಳೂರಿನಲ್ಲಿ ಸಿದ್ಧಾರ್ಥ ಅವರ ಅಂತ್ಯಕ್ರಿಯೆಗೆ ತೆರಳಬೇಕಾಗಿತ್ತು. ದಿನದ ಕಲಾಪದ ಎಲ್ಲ ಕಾರ್ಯ ಸೂಚಿಗಳನ್ನೂ ಪೂರ್ಣಗೊಳಿಸಲಾಗಿದೆ. ಅಲ್ಲದೇ, ಈ ವಿಷಯದ ಬಗ್ಗೆ ನೀವು ನೋಟಿಸ್‌ ನೀಡಿಲ್ಲ’ ಎಂದರು.

ಎಲ್ಲ ವಿಷಯದಲ್ಲೂ ನೋಟಿಸ್‌ ನೀಡಿಯೇ ಮಾತನಾಡಬೇಕೆಂದು ಹೇಳುವುದು ಸರಿಯಲ್ಲ. ಇದು ಅತಿ ಮಹತ್ವದ ವಿಷಯವಾಗಿದೆ. ಅದನ್ನು ಇಲ್ಲಿ ಪ್ರಸ್ತಾಪಿಸದೇ, ಬೇರೆ ಎಲ್ಲಿ ಪ್ರಸ್ತಾಪಿಸಬೇಕು ಎಂದು ಖಾರವಾಗಿ ಪ್ರಶ್ನಿಸಿದರು. ಸಿದ್ದರಾಮಯ್ಯ ಮಾತಿಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಧ್ವನಿಗೂಡಿಸಿದರು. ಗದ್ದಲ ಉಂಟಾದ ಕಾರಣ ಸಭಾಧ್ಯಕ್ಷರು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

‘ಮುಂದೆ ಸದನವನ್ನು ನಡೆಸಲು ಬಿಡುವುದಿಲ್ಲ’ ಎಂದು ಸಿದ್ದರಾಮಯ್ಯ ಏರಿದ ಧ್ವನಿಯಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT