ಭಾನುವಾರ, ಆಗಸ್ಟ್ 18, 2019
26 °C
ಸಂಗೀತಗಾರ ಟಿ.ಎಂ.ಕೃಷ್ಣ

ಜಮ್ಮು ಕಾಶ್ಮೀರ: ದೇಶದಲ್ಲಿ ಸಿಟ್ಟಿನ ಏಕರೂಪೀಕರಣ

Published:
Updated:
Prajavani

ಮಂಗಳೂರು: ‘ಜಮ್ಮು ಕಾಶ್ಮೀರದ ವಿಚಾರದಲ್ಲಿ ಸಿಟ್ಟಿನ ಏಕರೂಪೀಕರಣವನ್ನು ನಾವು ದೇಶದಲ್ಲಿ ಕಾಣುತ್ತಿದ್ದೇವೆ’ ಎಂದು ಸಂಗೀತಗಾರ, ಸಂಗೀತ ವಿಮರ್ಶಕ ಟಿ.ಎಂ. ಕೃಷ್ಣ ಹೇಳಿದರು.

ನಗರದಲ್ಲಿ ಭಾನುವಾರ ಬಿ.ವಿ.ಕಕ್ಕಿಲ್ಲಾಯ ಜನ್ಮ ಶತಾಬ್ದಿ ಕಾರ್ಯಕ್ರಮದಲ್ಲಿ ‘ಕಲೆಯ ಮರು ನಿರೂಪಣೆ– ಜಾತಿಗಳಾಚೆ’ ವಿಷಯ ಕುರಿತು ಅವರು ಮಾತನಾಡಿದರು.

‘ದೇಶದಲ್ಲಿ ಊಳಿಗಮಾನ್ಯ ವ್ಯವಸ್ಥೆ ಇತ್ತು. ಸಾಂಸ್ಕೃತಿಕ ಪ್ರಜಾಪ್ರಭುತ್ವ ಎಲ್ಲಿತ್ತು? ನಮ್ಮ ಶಿಕ್ಷಣದಲ್ಲಿ ಪ್ರಜಾಪ್ರಭುತ್ವ ಹಾಗೂ ಜಾತ್ಯತೀತತೆ ಪಾಠ ಎಲ್ಲಿದೆ? ಇವುಗಳನ್ನು ನಾವು ಪರಿಸರದಿಂದ ಕಲಿಯುತ್ತಿದ್ದೇವೆ. ಶಿಕ್ಷಣದಲ್ಲಿ ಒಂದು ನಿರ್ದಿಷ್ಟ ಚೌಕಟ್ಟಿನ ಕಲಿಕೆ ಅಥವಾ ಕವಾಯತು ಅಥವಾ ಕಂಠಪಾಠ ಮಾಡಿಸಲಾಗುತ್ತಿದೆ’ ಎಂದರು. 

‘ಕಲೆ ಮತ್ತು ಸಂಸ್ಕೃತಿಯು ಪ್ರಜಾಪ್ರಭುತ್ವದ ಸಂವಾದ ಮತ್ತು ಜಾತ್ಯತೀತ ಮೌಲ್ಯಗಳೊಂದಿಗೆ ತೆರೆದುಕೊಂಡಾಗ ಮಾತ್ರ ಉಳಿದು ಬೆಳೆಯಲು ಸಾಧ್ಯ. ವೈರುಧ್ಯತೆ ಇದ್ದಾಗಲೇ ಸೌಂದರ್ಯ ಇರಲು ಸಾಧ್ಯ. ಏಕರೂಪತೆ ಬೇಸರ ಉಂಟು ಮಾಡುತ್ತದೆ. ಸಮಾಜದಲ್ಲಿ ವೈರುಧ್ಯ, ವೈವಿಧ್ಯತೆ ಸಹಜ. ಸಾಮರಸ್ಯದ ಸಂವಾದ ಇರಬೇಕು’ ಎಂದರು.

‘ಕರ್ನಾಟಕ ಮತ್ತು ಹಿಂದೂಸ್ತಾನಿ ಗಾಯನಗಳೆರಡರಲ್ಲೂ ಬ್ರಾಹ್ಮಣ್ಯ ಇದೆ. ಒಂದು ಧಾರ್ಮಿಕ, ಇನ್ನೊಂದು ಅಧ್ಯಾತ್ಮಿಕ’ ಎಂದು ಪ್ರತಿಪಾದಿಸಿದರು.

‘ಮೇಲ್ವರ್ಗದ ಕಲೆಗಳು ಶಾಸ್ತ್ರೀಯ ಎನಿಸಲ್ಪಟ್ಟರೆ, ತಳವರ್ಗಗಳ ಕಲೆಗಳು, ‘ಕಲೆ’ ಎಂಬ ಮಾನ್ಯತೆಯನ್ನೂ ಪಡೆಯಲಿಲ್ಲ. ಸೌಂದರ್ಯ, ಪರಿಶುದ್ಧತೆ, ಆಸ್ವಾದನೆ ಮತ್ತು ನೋಟದಲ್ಲೂ ಬ್ರಾಹ್ಮಣ್ಯ ಹಾಗೂ ತಾರತಮ್ಯವಿದೆ. ಕಲೆಯಲ್ಲಿ ದೈಹಿಕ ಶ್ರಮವೂ ಜ್ಞಾನವೇ. ಅದನ್ನು ನಿರಾಕರಿಸುವುದೂ ಮೇಲ್ವರ್ಗದ ಹುನ್ನಾರ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನೈರ್ಮಲ್ಯ ಪೌರ ಕಾರ್ಮಿಕರ ಬಗ್ಗೆ ಮಠದಲ್ಲಿ ಹಾಡಬಹುದೇ?’ ಎಂದು ನನ್ನ ಮನಸ್ಸು ಪ್ರಶ್ನಿಸಿತ್ತು. ಬ್ರಾಹ್ಮಣ್ಯವು ಅರಿವಿದ್ದೋ, ಇಲ್ಲದೆಯೋ ನಮ್ಮಲ್ಲೂ ವ್ಯಾಪಿಸಿದೆ. ಆದರೆ, ಅದನ್ನು ಪ್ರಜ್ಞಾಪೂರ್ವಕವಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.

‘ಸಮಾಜವನ್ನು ಆರ್ಥಿಕತೆಗಿಂತ ಹೆಚ್ಚಾಗಿ ಸಾಮಾಜಿಕ, ಸಾಂಸ್ಕೃತಿಕ ವಿಚಾರಗಳು ನಿರ್ದೇಶಿಸುತ್ತವೆ. ಜಾತಿ ಮತ್ತು ಕಲೆಯು ಸಮಾನತೆಗಾಗಿ ಹೋರಾಡುವ ಯುದ್ಧಭೂಮಿಯಾಗಿವೆ’ ಎಂದು ಹೇಳಿದರು.

‘ಜಾತೀಯತೆ ವಿರುದ್ಧದ ಹೋರಾಟಕ್ಕೆ ಕಲೆ ಉತ್ತಮ ಸಾಧನ. ನಮ್ಮ ಬಣ್ಣ, ಭಾಷೆ, ಬಳಸುವ ಬಣ್ಣದಲ್ಲೂ ಜಾತಿಯನ್ನು ಗುರುತಿಸುತ್ತಾರೆ. ಇದರ ಮೇಲೆ ನಿಮಗೆ ನಿಯಂತ್ರಣ ಇಲ್ಲದೇ ಇರಬಹುದು. ಆದರೆ, ಬೆಳೆದು ಬಂದಿದೆ’ ಎಂದರು.

Post Comments (+)