ಸೋಮವಾರ, ಮಾರ್ಚ್ 8, 2021
22 °C
5 ಪಟ್ಟು ದಂಡ ಹೆಚ್ಚಳಕ್ಕೆ ಪ್ರಸ್ತಾವ

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ | ‘ಸಂಚಾರ ಮಾದರಿ’ ದಂಡಾಸ್ತ್ರ

ವರುಣ್ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಭಾರಿ ದಂಡ ವಿಧಿಸಿದ ಮಾದರಿಯಲ್ಲಿಯೇ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ವಿರುದ್ಧ ದಂಡಾಸ್ತ್ರ ಪ್ರಯೋಗಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ಧತೆ ನಡೆಸುತ್ತಿದೆ. 

ರಸ್ತೆ ಸುರಕ್ಷತೆ ದೃಷ್ಟಿಯಿಂದ ಸಂಚಾರಿ ನಿಯಮ ಉಲ್ಲಂಘನೆಗೆ ರಾಜ್ಯ ಸರ್ಕಾರ ಏಕಾಏಕಿ ದಂಡದ ಪ್ರಮಾಣವನ್ನು ಹೆಚ್ಚಿಸುವ ಮೂಲಕ ವಾಹನ ಸವಾರರಿಗೆ ಬಿಸಿ ಮುಟ್ಟಿಸಿತ್ತು. ಇದೇ ಭಯ ಜನರಲ್ಲಿ ಜಾಗೃತಿ ಮೂಡಿಸಲು ಕೂಡಾ ಕೆಲಮಟ್ಟಿಗೆ ಸಹಾಯಕವಾಗಿತ್ತು. ಹಾಗಾಗಿ ಧೂಮಪಾನದ ವಿಚಾರವಾಗಿ ಸಹ ದಂಡ ಹೆಚ್ಚಿಸಲು ಇಲಾಖೆಯ ಆಯುಕ್ತರ ಸೂಚನೆ ಅನುಸಾರ ಐದು ಮಂದಿ ತಜ್ಞರ ಸಮಿತಿ ರಚನೆ ಮಾಡಲಾಗಿದೆ.

ಸದ್ಯ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದವರಿಗೆ ಕೋಟ್ಪಾ ಕಾಯಿದೆ ಅನುಸಾರ ₹ 200 ವರೆಗೆ ದಂಡ ವಿಧಿಸಬಹುದು. ಆದರೆ, ಹೊಸ ಪ್ರಸ್ತಾವದಲ್ಲಿ ದಂಡದ ಪ್ರಮಾಣವನ್ನು ₹ 1 ಸಾವಿರಕ್ಕೆ ಏರಿಕೆ ಮಾಡುವಂತೆ ಇಬ್ಬರು ಸುಪ್ರೀಂಕೋರ್ಟ್ ವಕೀಲರು, ಇಲಾಖೆಯ ಅಧಿಕಾರಿಗಳು ಹಾಗೂ ಬ್ಲೂಮ್‌ ಬರ್ಗ್‌ ಸಂಸ್ಥೆಯ ಒಬ್ಬರು ಸದಸ್ಯರನ್ನು ಒಳಗೊಂಡ ಸಮಿತಿ ಸೂಚಿಸಿದೆ.

ತಿದ್ದುಪಡಿ ತರಲು ಅವಕಾಶವಿದೆ: ‘ದಂಡ ಹೆಚ್ಚಿಸಿದರೆ ಜನರಲ್ಲಿ ಭಯ ಹುಟ್ಟಲಿದೆ ಎಂಬ ನಿರ್ಣಯಕ್ಕೆ ಸಮಿತಿಯು ಬಂದಿದೆ. ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತಂದಲ್ಲಿ ದಂಡ ಹೆಚ್ಚಳ ಸಾಧ್ಯ. ಗುಜರಾತ್ ಸೇರಿದಂತೆ ಕೆಲ ರಾಜ್ಯಗಳು ತಮಗೆ ಬೇಕಾದಂತೆ ತಿದ್ದುಪಡಿ ಮಾಡಿಕೊಂಡಿವೆ. ಆದರೆ, ದಂಡ ಹೆಚ್ಚಳದ ವಿಚಾರ
ವಾಗಿ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತಿರುವ ಮೊದಲ ರಾಜ್ಯ ಕರ್ನಾಟಕ
ವಾಗಲಿದೆ’ ಎಂದು ಸಮಿತಿ ಸದಸ್ಯ ಹಾಗೂ ಇಲಾಖೆಯ ಜಂಟಿ ನಿರ್ದೇಶಕ ಡಾ. ಸೆಲ್ವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಕೇಂದ್ರ ಸರ್ಕಾರದ ಅನುಮೋದನೆ ಸಿಕ್ಕ ಬಳಿಕ ದಂಡದ ಹೊಸ ನಿಯಮವನ್ನು ರಾಜ್ಯದಾದ್ಯಂತ ಜಾರಿ ಮಾಡಲಾಗುತ್ತದೆ. ಈ ವಿಚಾರವಾಗಿ ಜಾಗೃತಿ ಅಭಿಯಾನವನ್ನೂ ನಡೆಸಲಾಗುವುದು. ಇನ್ನು ಬಿಡಿಯಾಗಿ ಸಿಗರೇಟ್‌ ಮಾರಾಟ ಮಾಡಲು ಕೂಡಾ ಅವಕಾಶವಿಲ್ಲ. ಕುಟುಂಬಗಳು ಬೀದಿ ಪಾಲಾಗುತ್ತವೆ ಎಂದು ಕೆಲ ಮಾರಾಟಗಾರರು ಅಳಲು ತೋಡಿಕೊಂಡಿದ್ದಾರೆ. ಹಾಗಂತ ಅವಕಾಶ ನೀಡಿದರೂ ಜನರು ಕ್ಯಾನ್ಸರ್‌ ಕಾಯಿಲೆಗೆ ಒಳಗಾಗಿ ಸಾಯುತ್ತಾರೆ’ ಎಂದರು. 

* ಅ.15ರೊಳಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಬಳಿಕ ಕೋಟ್ಪಾ ಕಾಯ್ದೆಯಡಿ ನಿಯಮಾವಳಿ ರೂಪಿಸಲು ಅವಕಾಶ ಕೋರಿ ಪ್ರಸ್ತಾವ ಸಲ್ಲಿಸಲಾಗುವುದು

ಡಾ. ಸೆಲ್ವರಾಜ್, ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು