ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಲ್ ಶುಲ್ಕ ನಿಗದಿ; ಅಸಮಾಧಾನ ಆಸ್ಫೋಟ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಅಧಿಸೂಚನೆ ಪ್ರಕಟ
Last Updated 28 ನವೆಂಬರ್ 2019, 15:36 IST
ಅಕ್ಷರ ಗಾತ್ರ

ಮೈಸೂರು: ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳದಿದ್ದರೂ; ಕೊಳ್ಳೇಗಾಲ– ಕಲ್ಲಿಕೋಟೆ ನಡುವಿನ ರಾಷ್ಟ್ರೀಯ ಹೆದ್ದಾರಿ 212 (ಹೊಸ ಸಂಖ್ಯೆ 766)ರ ರಸ್ತೆ ಬಳಕೆಗೆ ಶುಲ್ಕ ನಿಗದಿಗೊಳಿಸಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಧಿಸೂಚನೆ ಹೊರಡಿಸಿರುವುದಕ್ಕೆ ಈ ಭಾಗದ ಜನರಲ್ಲಿ ಅಸಮಾಧಾನ ಆಸ್ಫೋಟಗೊಂಡಿದೆ.

268.5 ಕಿ.ಮೀ. ದೂರದ ಈ ರಾಷ್ಟ್ರೀಯ ಹೆದ್ದಾರಿ ರಾಜ್ಯದಲ್ಲಿ 150 ಕಿ.ಮೀ. ಹಾದು ಹೋಗಿದೆ. ಉಳಿದದ್ದು ಕೇರಳದಲ್ಲಿದೆ.

ಗುಂಡ್ಲುಪೇಟೆಯಿಂದ ಕಳಲೆಯವರೆಗೆ ಚತುಷ್ಪಥ ರಸ್ತೆ ನಿರ್ಮಾಣಗೊಂಡಿಲ್ಲ. ಕಳಲೆಯಿಂದ ನಂಜನಗೂಡು ಮಾರ್ಗದಲ್ಲಿ ಮೈಸೂರಿನ ತನಕವೂ ನಾಲ್ಕುಪಥದ ರಸ್ತೆ ನಿರ್ಮಾಣಗೊಂಡಿದೆ. ಆದರೆ ಈ ರಸ್ತೆ ಕಳಪೆ ಗುಣಮಟ್ಟದ್ದು. ಗುತ್ತಿಗೆದಾರ ಸಮರ್ಪಕವಾಗಿ ನಿರ್ವಹಣೆಯನ್ನೇ ಮಾಡಿಲ್ಲ ಎಂಬ ದೂರು ನಂಜನಗೂಡು ಶಾಸಕ ಬಿ.ಹರ್ಷವರ್ಧನ ಅವರದ್ದು.

ಮೈಸೂರಿನಿಂದ ತಿ.ನರಸೀಪುರ ಮಾರ್ಗವಾಗಿ ಕೊಳ್ಳೇಗಾಲದ ತನಕವೂ ಈ ರಸ್ತೆಯಲ್ಲಿ ಸಂಚರಿಸಿದರೆ ಎಲ್ಲಿಯೂ ಚತುಷ್ಪಥವಿಲ್ಲ. ಇದ್ದ ರಸ್ತೆಯನ್ನೇ ದ್ವಿಪಥವನ್ನಾಗಿ ಅಭಿವೃದ್ಧಿ ಪಡಿಸಿದ್ದಾರೆ. ರಸ್ತೆ ನಡುವೆ ಡಿವೈಡರ್ ಸಹ ಇಲ್ಲ. ರಾಷ್ಟ್ರೀಯ ಹೆದ್ದಾರಿ ಇದೇನಾ? ಎಂಬ ಅನುಮಾನ ಕಾಡಲಿದೆ ಎನ್ನುತ್ತಾರೆ ತಿ.ನರಸೀಪುರದ ಕಾರು ಚಾಲಕ ಗುರುಸಿದ್ದ.

ಶುಲ್ಕ ಕಟ್ಟಲ್ಲ: ‘ರಸ್ತೆಯೇ ನಿರ್ಮಾಣಗೊಳ್ಳದಿರುವಾಗ, ಯಾವುದಕ್ಕಾಗಿ ಶುಲ್ಕ ಕಟ್ಟಬೇಕು. ಪೂರ್ಣ ಪ್ರಮಾಣದಲ್ಲಿ ಜನರ ಬಳಕೆಗೆ ರಸ್ತೆ ದೊರೆಯುವ ತನಕವೂ ಶುಲ್ಕವನ್ನೇ ಕಟ್ಟಲ್ಲ. ಒಮ್ಮೆ ಶುಲ್ಕ ಕಟ್ಟಿದೆವು ಎಂದರೇ, ಇಡೀ ರಸ್ತೆಯೇ ಪೂರ್ಣಗೊಂಡಂತೆ. ಆ ನಂತರ ನಾವು ಯಾರನ್ನು ಕೇಳಬೇಕು’ ಎಂದು ಶಾಸಕ ಬಿ.ಹರ್ಷವರ್ಧನ್ ಆಕ್ರೋಶ ವ್ಯಕ್ತಪಡಿಸಿದರು.

‘ಗುತ್ತಿಗೆದಾರ ದಿಲೀಪ್ ಬಿಲ್ಡ್‌ಕಾನ್ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸ್ಪಂದಿಸಲ್ಲ. ಮೈಸೂರಿನ ಎಪಿಎಂಸಿ ಬಳಿ, ಜೆಎಸ್‌ಎಸ್‌ ಮಠಕ್ಕೆ ತೆರಳುವ ಬಳಿ ಯಾವ ರೀತಿ ರಸ್ತೆಯಿದೆ ಎಂಬುದನ್ನೊಮ್ಮೆ ಗಮನಿಸಿ. ನಿರ್ವಹಣೆಗಾಗಿ ಕೋಟಿ ಕೋಟಿ ದುಡ್ಡು ಪಡೆದರೂರಸ್ತೆಯ ನಿರ್ವಹಣೆಯನ್ನೇ ಮಾಡ್ತಿಲ್ಲ. ಐದಾರು ವರ್ಷವಾದರೂ ಕಾಮಗಾರಿಯೇ ಪೂರ್ಣಗೊಂಡಿಲ್ಲ. ಹೆದ್ದಾರಿಯುದ್ದಕ್ಕೂ ಬೀದಿದೀಪಗಳೇ ಗೋಚರಿಸಲ್ಲ. ಸರ್ವೀಸ್ ರಸ್ತೆ ನಿರ್ಮಿಸಿಲ್ಲ. ಈ ಲೋಪದಿಂದ ಜನರ ಪ್ರಾಣ ಹೋಗುವುದು ಇಂದಿಗೂ ತಪ್ಪದಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೂರದ ಮಾತಾದ ಫಾಸ್ಟ್ಯಾಗ್

ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದರೂ, ನಿಗದಿತ ಮಾನದಂಡದಡಿ ಅಭಿವೃದ್ಧಿ ಹೊಂದದಿರುವುದರಿಂದ ಎಲ್ಲಿಯೂ ಟೋಲ್‌ ಶುಲ್ಕ ಸಂಗ್ರಹ ಕೇಂದ್ರಗಳಿಲ್ಲ. ಕೊಳ್ಳೇಗಾಲ–ಕಲ್ಲಿಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕೇಂದ್ರಗಳಿದ್ದರೂ, ಶುಲ್ಕ ಸಂಗ್ರಹ ಇನ್ನೂ ಆರಂಭವಾಗಬೇಕಿದೆಯಷ್ಟೇ.

ಕೇಂದ್ರ ಸರ್ಕಾರ ಡಿ.1ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ‘ಫಾಸ್ಟ್ಯಾಗ್’ ಮೂಲಕವೇ ವಾಹನಗಳಿಂದ ಶುಲ್ಕ ಸಂಗ್ರಹಿಸಬೇಕು ಎಂದು ಹೊರಡಿಸಿರುವ ಆದೇಶ ಜಿಲ್ಲೆಯ ವ್ಯಾಪ್ತಿಯಲ್ಲಿ ಸದ್ಯದ ಮಟ್ಟಿಗೆ ಯಾವುದೇ ಪರಿಣಾಮ ಬೀರಲ್ಲ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT