ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋನ್‌ ಇನ್ | ಜನವರಿಗೆ ಪ್ರವಾಸೋದ್ಯಮ ‘ಮಾಸ್ಟರ್‌ ಪ್ಲ್ಯಾನ್‌’

ಹೂಡಿಕೆದಾರರ ಸಮಾವೇಶಕ್ಕೆ ಸಿದ್ಧತೆ:ಸಿ.ಟಿ ರವಿ
Last Updated 13 ನವೆಂಬರ್ 2019, 2:41 IST
ಅಕ್ಷರ ಗಾತ್ರ

ಬೆಂಗಳೂರು: ಪ್ರವಾಸೋದ್ಯಮಕ್ಕೆ ಕಾಯಕಲ್ಪ ನೀಡುವ ಉದ್ದೇಶದಿಂದ ಜನವರಿಯಲ್ಲಿ ವಿಸ್ತೃತ ಯೋಜನೆಗಳನ್ನು ಒಳಗೊಂಡ ‘ಮಾಸ್ಟರ್‌ ಪ್ಲ್ಯಾನ್‌’ ಪ್ರಕಟಿಸುವುದರ ಜತೆಗೆ, ಖಾಸಗಿ ಹೂಡಿಕೆದಾರರ ಸಮಾವೇಶವನ್ನೂ ನಡೆಸುವುದಾಗಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು.

‘ಪ್ರಜಾವಾಣಿ’ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಸ್ಟರ್‌ ಪ್ಲ್ಯಾನ್‌ ರೂಪಿಸಲು ಸಾಕಷ್ಟು ಅಧ್ಯಯನ ನಡೆಸಲಾಗಿದೆ. ಪ್ರವಾಸೋದ್ಯಮಕ್ಕೆ ಇರುವ ಅವಕಾಶಗಳ ಅಗಾಧತೆಯೂ ಪರಿಚಯ ಆಗಿದೆ ಎಂದು ವಿವರಿಸಿದರು.

ಮಾಸ್ಟರ್‌ ಪ್ಲ್ಯಾನ್‌ಮುಖ್ಯವಾಗಿ ಟ್ರಾವೆಲ್ ಏಜೆಂಟ್‌ ಸರ್ಕ್ಯೂಟ್‌ ಸೃಷ್ಟಿಸುವುದು, ತರಬೇತಿ ಕಾರ್ಯಕ್ರಮ, ಸಂಪರ್ಕ ಮತ್ತು ಸಂವಹನಕ್ಕೆ ಆದ್ಯತೆ, ಪ್ರವಾಸಿಗರ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಮಾಸ್ಟರ್‌ ಪ್ಲ್ಯಾನ್‌ ಜಾರಿ ಬಳಿಕ ಪ್ರವಾಸೋದ್ಯಮದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಲು ಸಾಧ್ಯವಿದೆ. ಈ ಸಂಬಂಧ ತಜ್ಞರ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ರವಿ ಹೇಳಿದರು.

ಜನವರಿ ಅಥವಾ ಫೆಬ್ರುವರಿಯಲ್ಲಿ ನಡೆಯಲಿರುವ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶದಲ್ಲಿ ಉದ್ಯಮಿಗಳು, ಸಂಬಂಧಿತ ವ್ಯಕ್ತಿಗಳು, ಟ್ರಾವೆಲ್‌ ಏಜೆಂಟರುಗಳನ್ನು ಆಹ್ವಾನಿಸಲಾಗುವುದು. ಈ ಮೂಲಕ ಪ್ರವಾಸೋದ್ಯಮ ಕ್ಷೇತ್ರಕ್ಕೆ ಖಾಸಗಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲಾಗುವುದು ಎಂದು ಅವರು ತಿಳಿಸಿದರು.

ದಸರಾಕ್ಕೆ ಅಂತರರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲು ವಿಶೇಷ ಪ್ರಯತ್ನ ನಡೆಸಲಾಗುವುದು. ಇದಕ್ಕಾಗಿ ದಸರಾ ನಡೆಯುವುದಕ್ಕೂ ಐದು ತಿಂಗಳಿಗೂ ಮೊದಲೇ ಯೋಜನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ವಿದೇಶಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಪಶ್ಚಿಮ ಘಟ್ಟದ ಸೌಂದರ್ಯವನ್ನು ವೀಕ್ಷಿಸುವ ಪ್ರವಾಸಿ ವರ್ಗವೇ ಇದೆ. ಪರಿಸರಕ್ಕೆ ಧಕ್ಕೆ ಆಗದಂತೆ, ಯಾವುದೇ ರೀತಿಯ ಕಟ್ಟಡ ಅಥವಾ ರಚನೆಗಳನ್ನು ನಿರ್ಮಿಸದೇ ಈ ರೀತಿಯ ಪ್ರವಾಸಕ್ಕೆ ಒತ್ತು ನೀಡಲಾಗುವುದು ಎಂದರು.

ಪಶ್ಚಿಮ ಘಟ್ಟದಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ನೀಡಿದರೆ, ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕು, ಪಂಚತಾರಾ ಹೋಟೆಲ್‌ನಿರ್ಮಿಸಬೇಕು ಎಂಬೆಲ್ಲ ಒತ್ತಾಯಗಳು ಕೇಳಿ ಬರುತ್ತವೆ. ಆದರೆ ಇದಕ್ಕೆಲ್ಲ ಅವಕಾಶ ನೀಡಲು ಬಿಲ್‌ಕುಲ್‌ ಸಾಧ್ಯವಿಲ್ಲ ಎಂದು ರವಿ ಸ್ಪಷ್ಟಪಡಿಸಿದರು.

‘ಅಧ್ಯಾತ್ಮದಲ್ಲಿ ಆಸಕ್ತಿ ಹೊಂದಿರುವವರು ವಿವಿಧ ದೇಶಗಳಿಂದ ಭಾರತಕ್ಕೆ ಬರುತ್ತಾರೆ. ನಮ್ಮ ರಾಜ್ಯಕ್ಕೂ ಈ ಉದ್ದೇಶದಿಂದ ಪ್ರವಾಸಕ್ಕೆ ಬರುವವರ ಸಂಖ್ಯೆ ಸಾಕಷ್ಟಿದೆ. ಇದನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಪ್ರವಾಸ ಪ್ಯಾಕೇಜ್‌ ರೂಪಿಸಲಾಗುವುದು. ಅದೇ ರೀತಿಯಲ್ಲಿ ರಾಜ್ಯದಲ್ಲಿರುವ ಜೈನ, ಬೌದ್ಧ, ಶೈವ ಕ್ಷೇತ್ರಗಳಿಗೆ ಪ್ರವಾಸದ ಪ್ಯಾಕೇಜ್‌ಗಳನ್ನೂ ರೂಪಿಸಲಾಗುವುದು’ ಎಂದರು.

‘ಮಹಾಭಾರತ ಮತ್ತು ರಾಮಾಯಣದಲ್ಲಿ ಉಲ್ಲೇಖಿತವಾಗಿರುವ ತಾಣಗಳನ್ನು ಪತ್ತೆ ಮಾಡಿ ಆ ಉದ್ದೇಶದ ಪ್ರವಾಸವನ್ನೂ ರೂಪಿಸಬಹುದು. ರಾಮಾಯಣದಲ್ಲಿ ಉಲ್ಲೇಖವಾಗಿರುವ ಕಿಷ್ಕಿಂದೆ ಮತ್ತು ಹನುಮನ ಜನ್ಮಸ್ಥಳ ಕರ್ನಾಟಕದಲ್ಲೇ ಇವೆ’ ಎಂದು ರವಿ ತಿಳಿಸಿದರು.

‘ಯೋಗ ಕಲಿಯುವ ಉದ್ದೇಶದಿಂದ ವಿವಿಧ ದೇಶಗಳ ಜನ ಭಾರತಕ್ಕೆ ಬರುತ್ತಿದ್ದಾರೆ. ನಮ್ಮ ರಾಜ್ಯದಲ್ಲೂ ಯೋಗ ತರಬೇತಿ ಪಡೆದವರಿಗೆ ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ ಪ್ರೋತ್ಸಾಹ ನೀಡಲು ಉದ್ದೇಶಿಸಲಾಗಿದೆ’ ಎಂದರು.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ ಪುಷ್ಕರ್‌, ಜಂಗಲ್‌ ಲಾಡ್ಜಸ್‌ ಆ್ಯಂಡ್‌ ರೆಸಾರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ವಿಜಯ ಶರ್ಮಾ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಕೆ.ಎನ್‌.ರಮೇಶ್ ಇದ್ದರು.

ನಾಟಿ ಕೋಳಿ ಸಾರು, ಮುದ್ದೆ ಊಟ
‘ಪ್ರವಾಸಿಗರಿಗೆ ನಮ್ಮ ರಾಜ್ಯದ ವಿವಿಧ ಪ್ರದೇಶಗಳ ವೈವಿಧ್ಯ ಆಹಾರ ಸಂಸ್ಕೃತಿಯನ್ನು ಪರಿಚಯಿಸಲಾಗುವುದು. ನಾಟಿ ಕೋಳಿ ಸಾರು, ಮುದ್ದೆ ಊಟ ಇತ್ಯಾದಿ ವಿಶಿಷ್ಟ ಅನುಭವ ನೀಡುತ್ತದೆ’ ಎಂದು ರವಿ ಹೇಳಿದರು.

‘ಕೇರಳದಲ್ಲಿ ಹಳ್ಳಿ ಪ್ರವಾಸೋದ್ಯಮ ಖ್ಯಾತಿ ಪಡೆದಿದೆ. ಪ್ರವಾಸಿಗರು ಹಳ್ಳಿ ಜನರ ಜತೆಯಲ್ಲೇ ಇದ್ದು, ಅವರು ತಯಾರಿಸುವ ಆಹಾರವನ್ನು ಸೇವಿಸುತ್ತಾರೆ. ಕೃಷಿ ಕಾರ್ಯದಲ್ಲಿ ಮತ್ತು ಮೀನು ಹಿಡಿಯಲು ಹೋಗುವ ಚಟುವಟಿಕೆಗಳಲ್ಲೂ ಭಾಗಿಯಾಗುತ್ತಾರೆ. ಪ್ರವಾಸಿಗರಿಗೆ ವಿಶಿಷ್ಟ ಅನುಭವ ಸಿಗುತ್ತದೆ. ನಮ್ಮ ರಾಜ್ಯದಲ್ಲೂ ಅಂತಹದ್ದೊಂದು ಪ್ರವಾಸಿ ಅನುಭವ ಕಟ್ಟಿಕೊಡುವ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.

ಜೂಜಿಗೂ ಒಂದು ಪಟ್ಟಣ?
‘ಗೋವಾದಲ್ಲಿ ಇರುವಂತೆ ಕರ್ನಾಟಕದಲ್ಲೂ ಯಾವುದಾದರೂ ಒಂದು ಕಡೆ ಜೂಜಿಗೂ ಅವಕಾಶ ನೀಡಬೇಕು ಎಂಬ ಸಲಹೆಗಳು ಬಂದಿವೆ. ಅಮೆರಿಕದ ಲಾಸ್‌ವೆಗಾಸ್ ನಗರ ಜೂಜಿಗೆ ಹೆಸರು ಮಾಡಿದೆ. ಶ್ರೀಲಂಕಾದಲ್ಲೂ ಇಂತಹ ಪಟ್ಟಣಗಳಿವೆ. ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯದ ಜೂಜಿನ ಆಸಕ್ತರು ಶ್ರೀಲಂಕಾಗೆ ಹೋಗುತ್ತಾರೆ. ಜೂಜು ಆಡುವ ಮನಸ್ಥಿತಿಯವರು ಸಾಕಷ್ಟು ಇದ್ದಾರೆ. ನಮ್ಮಲ್ಲಿ ಇದಕ್ಕೆ ಅವಕಾಶವಿಲ್ಲವೆಂದು ಗೋವಾ ಅಥವಾ ಹೊರ ರಾಜ್ಯಗಳಿಗೆ ಹೋಗುತ್ತಾರೆ. ಕೆಲವು ನಿರ್ಬಂಧ ಮತ್ತು ಷರತ್ತುಗಳನ್ನು ವಿಧಿಸಿ ಇಲ್ಲೂ ಅವಕಾಶ ನೀಡಬೇಕುಎಂಬ ಸಲಹೆಯೂ ಬಂದಿದೆ. ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ’ ಎಂದರು.

ನಂದಿ ಬೆಟ್ಟಕ್ಕೆ ರೋಪ್‌ವೇ ಸದ್ಯಕ್ಕಿಲ್ಲ
‘ನಂದಿ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸುವುದು ಬಹಳ ಹಿಂದಿನ ಯೋಜನೆ. ನಾನು ಸಚಿವನಾದ ಮೇಲೆ ಈ ವಿಚಾರ ಪ್ರಸ್ತಾವ ಆಗಿಲ್ಲ. ಆದರೆ ಈ ಹಿಂದೆ ಖಾಸಗಿ ಹೂಡಿಕೆದಾರರು ಇದಕ್ಕೆ ಆಸಕ್ತಿ ತೋರಿಸಿದ್ದರು. ಇಂತಹ ಯೋಜನೆಗಳ ಹಿನ್ನೆಲೆಯಲ್ಲೇ ಜನವರಿ ಅಥವಾ ಫೆಬ್ರುವರಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗಾಗಿ ಹೂಡಿಕೆದಾರರ ಸಮಾವೇಶ ಮಾಡುವ ಚಿಂತನೆ ಮಾಡಲಾಗಿದೆ’ ಎಂದರು.

ಕಂಬಳ, ಬಂಡಿ ಓಟಕ್ಕೆ ‘ವಿಶ್ವ ಸ್ಪರ್ಶ’
ರಾಜ್ಯದ ಹೆಮ್ಮೆಯ ಕಂಬಳ, ಬಂಡಿ ಓಟ ಮತ್ತು ಇತರ ಸಾಂಪ್ರದಾಯಿಕ ಸಾಹಸ ಕ್ರೀಡೆಗಳಿಗೆ ‘ಹೈಟೆಕ್‌’ ಸ್ಪರ್ಶ ನೀಡಿ, ವಿಶ್ವದೆಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸಲು ಉದ್ದೇಶಿಸಲಾಗಿದೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.

ಸ್ಪೈನ್‌ ದೇಶದಲ್ಲಿ ಪರಸ್ಪರ ಟೊಮೆಟೊ ಎಸೆದು ಅದರಲ್ಲಿ ಬಿದ್ದು ಒದ್ದಾಡುವುದನ್ನು ನೋಡುವುದಕ್ಕೇ ಜಗತ್ತಿನ ವಿವಿಧೆಡೆಯಿಂದ ಜನ ಹೋಗುತ್ತಾರೆ. ಅದಕ್ಕಿಂತಲೂ ರೋಚಕವಾದ ಕಂಬಳ, ಬಂಡಿ ಓಟ ವಿದೇಶಿಯರನ್ನು ಆಕರ್ಷಿಸುವುದರಲ್ಲಿ ಸಂದೇಹವೇ ಇಲ್ಲ. ಈ ಕ್ರೀಡೆಗಳನ್ನು ಅಂತರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಮಾರ್ಪಾಡುಗಳನ್ನು ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದರು.

ವಿಶೇಷ ಆದ್ಯತೆಗಳೇನು:

* ಹೊಸ ಪ್ರವಾಸಿ ತಾಣಗಳನ್ನು ಗುರುತಿಸುವುದು * ಸಂಪರ್ಕ ಮತ್ತು ಸಂವಹನಕ್ಕೆ ಒತ್ತು * ಆತಿಥ್ಯ ಮತ್ತು ಚಟುವಟಿಕೆಗೆ ಆದ್ಯತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT