ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋನ್‌ ಇನ್ | ದುಡ್ಡಿಲ್ಲ, ಖಾಸಗಿ ಸಹಭಾಗಿತ್ವ ಅನಿವಾರ್ಯ: ಸಚಿವ ಸಿ.ಟಿ.ರವಿ

ಹೂಡಿಕೆದಾರರ ಸಮಾವೇಶಕ್ಕೆ ಸಿದ್ಧತೆ * 319 ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಮ
Last Updated 13 ನವೆಂಬರ್ 2019, 2:32 IST
ಅಕ್ಷರ ಗಾತ್ರ

ಬೆಂಗಳೂರು:ನೆರೆ ಪರಿಹಾರ, ಕುಡಿಯುವ ನೀರು, ಶಾಲಾ ಮಕ್ಕಳಿಗೆ ಮೂಲ ಸೌಲಭ್ಯದಂತಹ ಅತಿ ಅಗತ್ಯದ ಕೆಲಸಗಳಿಗೆ ಸರ್ಕಾರ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಹೀಗಾಗಿ ಖಾಸಗಿ ಸಹಭಾಗಿತ್ವದಲ್ಲಷ್ಟೇ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಮಾಡಬೇಕಾಗುತ್ತದೆಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಮಂಗಳವಾರ ಫೋನ್‌ ಇನ್‌ ಕಾರ್ಯಕ್ರಮದಲ್ಲಿರಾಜ್ಯದ ಮೂಲೆ ಮೂಲೆಗಳಿಂದ ಬಂದ ನೂರಾರು ಕರೆಗಳಿಗೆ ಸ್ಪಂದಿಸಿದ ಅವರು, ‘ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶ ಇದೆ. ಅದಕ್ಕೆ ತಕ್ಕಂತೆ ಹಣಕಾಸಿನ ಸೌಲಭ್ಯ ಇಲ್ಲ. ನನ್ನ ಕೈಯಲ್ಲೇ ಹಣಕಾಸು ಸಚಿವಾಲಯವೂ ಇದ್ದಿದ್ದರೆ ದೊಡ್ಡ ಮಟ್ಟಿನಲ್ಲಿ ಖರ್ಚು ಮಾಡಬಹುದಿತ್ತು ಎಂದು ಯೋಚಿಸಿದ್ದೂ ಇದೆ. ಆದರೆ ವಾಸ್ತವ ಹಾಗಿಲ್ಲ, ಯಾವುದಕ್ಕೆ ಆದ್ಯತೆ ನೀಡಬೇಕೋ ಸರ್ಕಾರ ಅದನ್ನು ಮಾಡುತ್ತದೆ, ಉಳಿದ ಕ್ಷೇತ್ರಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಅನಿವಾರ್ಯವಾಗುತ್ತದೆ’ ಎಂದರು.

*ಸಚು ಗಾಂವ್ಕರ್‌, ಬೆಳಗಾವಿ, ವಿನುತಾ ಬೆಂಗಳೂರು

ಪ್ರವಾಸಿ ತಾಣಗಳ ಅಭಿವೃದ್ಧಿ ಕುರಿತು ಮಾಹಿತಿ ಕೊಡಿ

ರಾಜ್ಯದ 319 ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ವಿಷನ್‌ ಗ್ರೂಪ್‌ ಸಲಹೆ ನೀಡಿದೆ. ಸುಧಾಮೂರ್ತಿ ನೇತೃತ್ವದ ಕಾರ್ಯಪಡೆ ಮಾರ್ಗದರ್ಶನ ನೀಡುತ್ತಿದ್ದು, ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ ರಚಿಸಿ ಅಭಿವೃದ್ಧಿಗೋಳಿಸಲಾಗುವುದು.

ಮುಂದಿನ ವರ್ಷ ನೂತನ ಪ್ರವಾಸೋದ್ಯಮ ನೀತಿ ಜಾರಿಗೆ ಬರಲಿದ್ದು, ಹಿಂದಿನ ಸಚಿವರು, ಕಾರ್ಯದರ್ಶಿಗಳು, ಈ ಕ್ಷೇತ್ರದಲ್ಲಿ ಶ್ರಮಿಸಿದ ತಜ್ಞರೊಂದಿಗೆ ಚರ್ಚಿಸಿ,ಉತ್ತಮ ಅಂಶಗಳನ್ನು ನೀತಿಯಲ್ಲಿ ಅಳವಡಿಸಲಾಗುವುದು.

*ಸುನಿಲ್‌ ಹಿರೇಮಠ, ಶಿರಸಿ, ನಿರ್ಮಲಾ, ಹೆಸರಘಟ್ಟ

ಜೋಗ ಸಹಿತ ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಎಂತಹ ಕ್ರಮ ಕೈಗೊಳ್ಳುತ್ತೀರಿ?

ಜೋಗ ಅಭಿವೃದ್ಧಿಗೆ ಪ್ರಾಧಿಕಾರದ ರಚನೆ ಆಗಿದೆ. ಸಮಗ್ರ ಯೋಜನೆ ರೂಪಿಸಲು ತಿಳಿಸಿದ್ದೇನೆ.ಹಣಕ್ಕಾಗಿ ಯೋಜನೆ ಮಾಡಬೇಡಿ, ಯೋಜನೆ ಮಾಡಿ ಅದಕ್ಕೆ ಹಣ ಖರ್ಚು ಮಾಡೋಣ ಎಂದು ಹೇಳಿದ್ದೇನೆ. ಕಾಡು, ಪರಿಸರ ಸೂಕ್ಷ್ಮ ಪ್ರವಾಸಿ ತಾಣಗಳನ್ನು ಹೇಗಿದೆಯೋ ಹಾಗೆಯೇ ಉಳಿಸಿಕೊಳ್ಳಬೇಕಿದ್ದು, ಅಭಿವೃದ್ಧಿ ಹೆಸರಲ್ಲಿ ಪರಿಸರ ನಾಶ ಮಾಡುವುದಕ್ಕೆ, ಸೌಲಭ್ಯದ ಹೆಸರಲ್ಲಿ ಕಾಂಕ್ರೀಟ್ ಕಾಡುಗಳನ್ನು ನಿರ್ಮಿಸುವುದು ಸೂಕ್ತವಲ್ಲ.

*ಅಕ್ಷಯ್‌, ಚಿತ್ರದುರ್ಗ, ಮಂಜುನಾಥ ಪರಶುರಾಮಪುರ ಮಠದ

ಚಿತ್ರದುರ್ಗದ ಮೂಲಸೌಲಭ್ಯ ಅಭಿವೃದ್ಧಿಗೆ ಎಂತಹ ಕ್ರಮ ಕೈಗೊಳ್ಳುತ್ತೀರಿ?

ಧ್ವನಿ, ಬೆಳಕಿನ ವ್ಯವಸ್ಥೆ ಅಳವಡಿಸುವ ಯೋಜನೆ ಇದೆ, ಹೊಸ ಶೌಚಾಲಯಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಮೂಲಸೌಲಭ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಓಬವ್ವ ಸ್ಮಾರಕದ ಅಭಿವೃದ್ಧಿ ವಿಷಯವನ್ನು ಕೇಂದ್ರ ಪುರಾತತ್ವ ಇಲಾಖೆಯ ಗಮನಕ್ಕೆ ತರಲಾಗುವುದು.

* ಹರೀಶ್‌, ರಾಮನಗರ

ರಾಮನಗರ ಪ್ರವಾಸೋದ್ಯಮಕ್ಕೆ ಇದುವರೆಗೆ ಉತ್ತೇಜನವೇ ಸಿಕ್ಕಿಲ್ಲವಲ್ಲ?

ಬೆಂಗಳೂರು ಹೊರವಲಯದ ರಾಮನಗರದಂತಹ ಸ್ಥಳಗಳು ವಾರಾಂತ್ಯದ ಪ್ರವಾಸಿ ತಾಣಗಳಾಗಿ ಅಭಿವೃದ್ಧಿ ಹೊಂದಬೇಕಾಗಿದೆ. ಪರಿಸರ ಇಲಾಖೆಯ ಅನುಮತಿ ದೊರೆತರೆ ರಾಮನಗರದ ಬಂಡೆಗಳ ನಡುವೆ ರೋಪ್‌ವೇ ನಿರ್ಮಿಸುವ ಚಿಂತನೆ ಇದೆ.

*ಪವಿತ್ರಾ, ಮಹಾಲಕ್ಷ್ಮಿ ಲೇಔಟ್‌

ಪ್ರವಾಸೋದ್ಯಮ ಸ್ಥಳಗಳು ತುಂಬಾ ಇವೆ. ಆದರೆ ಸರಿಯಾದ ಮಾಹಿತಿಯೇ ಇಲ್ಲವಲ್ಲ?

ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಗೆ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳನ್ನು ಹೆಚ್ಚು ಹೆಚ್ಚು ಬಳಸಿಕೊಳ್ಳುವ ಯೋಜನೆಗೆ ನಾನು ಈಗಾಗಲೇ ಚಾಲನೆ ನೀಡಿದ್ದೇನೆ. ಜನರು ತಮ್ಮ ಸುತ್ತಮುತ್ತಲಿನ, ಇದುವರೆಗೆ ಬೆಳಕಿಗೆ ಬಾರದ ತಾಣಗಳ ಮಾಹಿತಿಯನ್ನು ಅಪ್‌ಲೋಡ್‌ ಮಾಡಬೇಕು. ಒಟ್ಟು 41 ಪ್ರವಾಸಿ ವೃತ್ತಗಳ ಅಭಿವೃದ್ಧಿಯ ಯೋಜನೆ ಇದೆ.

*ಶಶಿ ಆಲ್ದೂರು, ಚಿಕ್ಕಮಗಳೂರು

ಚಿಕ್ಕಮಗಳೂರು ಹೃದಯಭಾಗದ ಬಸವನಹಳ್ಳಿ ದಂಟರಮಕ್ಕಿ ಕೆರೆಯ ಅಭಿವೃದ್ಧಿ ಮಾಡುತ್ತೀರೋ?

₹ 10 ಕೋಟಿಯಲ್ಲಿ ಕೆರೆ ಅಭಿವೃದ್ಧಿ, ತೂಗುಸೇತುವೆ, ಪ್ರತಿಮೆ ನಿರ್ಮಾಣ ಮಾಡಲಾಗುವುದು. ನನ್ನ ಕ್ಷೇತ್ರದಲ್ಲೊಂದು ಪ್ರವಾಸಿ ಹೆಗ್ಗುರುತು ನಿರ್ಮಾಣವಾಗುವುದು ನಿಶ್ಚಿತ.

*ರಾಜು ರಾಠೋಡ್‌

ಇಲಾಖೆಗೆ ನೇಮಕಾತಿ ಮಾಡುವುದು ಯಾವಾಗ?

ಸದ್ಯ ಶೇ 81ರಷ್ಟು ಹುದ್ದೆಗಳು ಖಾಲಿ ಇವೆ. ನನ್ನ ರಾಜ್ಯ ಪ್ರವಾಸ ಇನ್ನೊಂದು ವಾರದಲ್ಲಿ ಕೊನೆಗೊಳ್ಳಲಿದ್ದು, ಬಳಿಕ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು.

*ವೆಂಕಟೇಶ್‌ ನಾಯಕ್‌, ಧಾರವಾಡ

ಎಂಟಿಎ ಶಿಕ್ಷಣ ಪಡೆದಿದ್ದರೂಇಲಾಖೆಯಲ್ಲಿ ಉದ್ಯೋಗದಲ್ಲಿದ್ದ ನಮ್ಮನ್ನು ತೆಗೆದುಹಾಕಿದ್ದಾರೆ. ನ್ಯಾಯ ಕೊಡಿಸಿ.

ಯಾಕಾಗಿ ಕೆಲಸದಿಂದ ತೆಗೆದುಹಾಕಿದ್ದಾರೆ ಎಂಬುದನ್ನು ಪರಿಶೀಲಿಸಲಾಗುವುದು. ಮುಂಬರುವ ಪ್ರವಾಸೋದ್ಯಮ ನೀತಿಯಲ್ಲಿ ಪ್ರವಾಸೋದ್ಯಮ ಕೋರ್ಸ್‌ ಮಾಡಿದವರಿಗೇ ಉದ್ಯೋಗದಲ್ಲಿ ಆದ್ಯತೆ ನೀಡಲಾಗುವುದು.

*ಸಂಜಯ್‌, ಕೊಟ್ಟಿಗೆಹಾರ

ಕೊಟ್ಟಿಗೆಹಾರದ ವೀಕ್ಷಣಾ ಸ್ಥಳವನ್ನು ಆಗುಂಬೆಯಂತೆ ಅಭಿವೃದ್ಧಿಪಡಿಸುವ ಯೋಜನೆ ಇದೆಯೇ?

ಕೊಟ್ಟಿಗೆಹಾರ ಅದ್ಭುತ ಅನುಭವ ನೀಡುವ ತಾಣ. ಖಂಡಿತ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಯೋಜನೆ ರೂಪಿಸಲಾಗುವುದು. ಸದ್ಯ ಶಾಸಕರ ಒತ್ತಡದಿಂದ ಯಾತ್ರಿ ನಿವಾಸ ನಿರ್ಮಾಣದಂತಹ ಕಾರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಮುಂದಿನ ವರ್ಷದಿಂದ ಇಂತಹವುಗಳ ಬದಲಿಗೆ ಗಮನ ಸೆಳೆಯುವ ದೊಡ್ಡ ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಆದ್ಯತೆ ನೀಡಲಾಗುವುದು.

*ಲಕ್ಷ್ಮಣ ಗಾಣಿಗ

ಜಾತಿಯ ಆಧಾರದಲ್ಲಿ ಮಕ್ಕಳ ಪ್ರವಾಸ ನಿಲ್ಲಿಸಿ

ಜಾತಿ ಆಧಾರದಲ್ಲಿ ಶಾಲಾ ಮಕ್ಕಳ ಪ್ರವಾಸ ಕೈಗೊಳ್ಳುವ ಯೋಜನೆ ತಪ್ಪು. ಮಕ್ಕಳಲ್ಲಿ ಜಾತಿ ಭಾವನೆ ಬಿತ್ತುವುದನ್ನು ಮಾಡಬಾರದು. ಎಲ್ಲರನ್ನೂ ಪ್ರವಾಸಕ್ಕೆ ಕರೆದೊಯ್ಯವುದು ಕಷ್ಟ ನಿಜ, ಆದರೆ ಲಾಟರಿ ಮೂಲಕ ಮಕ್ಕಳ ಆಯ್ಕೆ ಮಾಡಿ ಕರೆದೊಯ್ಯಬಹುದು.

ಪ್ರಜಾವಾಣಿ ತಂಡ: ಎಸ್‌. ರವಿಪ್ರಕಾಶ್‌, ಎಂ.ಜಿ.ಬಾಲಕೃಷ್ಣ. ಚಿತ್ರ: ಕೃಷ್ಣಕುಮಾರ್‌ ‍‍‍ಪಿ.ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT