ತೀರಕ್ಕೆ ಬಂದ ವಿಷಕಾರಿ ಜೆಲ್ಲಿ ಫಿಶ್!

7
ಅರಬ್ಬಿ ಸಮುದ್ರದಲ್ಲಿ ಪದೇಪದೇ ಏಳುತ್ತಿರುವ ಚಂಡಮಾರುತ: ಜಲಚರಗಳಿಗೂ ಸಂಕಷ್ಟ

ತೀರಕ್ಕೆ ಬಂದ ವಿಷಕಾರಿ ಜೆಲ್ಲಿ ಫಿಶ್!

Published:
Updated:
Deccan Herald

ಕಾರವಾರ: ಅರಬ್ಬಿ ಸಮುದ್ರದಲ್ಲಿ ಕೆಲವು ದಿನಗಳಿಂದ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣವು ಜಲಚರಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಶುಕ್ರವಾರ ಬೆಳಿಗ್ಗೆ ಸಾವಿರಾರು ಸಂಖ್ಯೆಯಲ್ಲಿ ವಿಷಕಾರಿ ಜೆಲ್ಲಿ ಫಿಶ್‌ಗಳು ಕೊಚ್ಚಿಕೊಂಡು ಬಂದಿವೆ.

ಸಾಗರ ದರ್ಶನ ಸಭಾಂಗಣದ ಹಿಂಭಾಗದ ಕಡಲತೀರದಲ್ಲಿ ಬೆಳಿಗ್ಗೆ ವಾಯು ವಿಹಾರಕ್ಕೆ ಹೋದವರು ಅವುಗಳನ್ನು ಕಂಡು ಅಚ್ಚರಿ ಪಟ್ಟರು. ನುಣ್ಣನೆಯ ಮರಳಿನ ಮೇಲೆ ರಾಶಿ ರಾಶಿಯಾಗಿ ಬಿದ್ದು ನರಳಾಡುತ್ತಿದ್ದ, ಮೀನುಗಳನ್ನು ಕಂಡು ಮರುಕ ವ್ಯಕ್ತಪಡಿಸಿದರು. ಆದರೆ, ಅವುಗಳನ್ನು ಮುಟ್ಟಿದರೆ ನವೆ ಉಂಟಾಗುವ ಭೀತಿಯಿಂದ ಹಾಗೂ ಬೃಹತ್ ಸಂಖ್ಯೆಯಲ್ಲಿದ್ದ ಕಾರಣ ಸಮುದ್ರಕ್ಕೆ ವಾಪಸ್ ಬಿಡಲಾಗದೆ ಅಸಹಾಯಕತೆ ವ್ಯಕ್ತಪಡಿಸಿದರು.

ಸುಮಾರು ಹೊತ್ತು ದಡದಲ್ಲೇ ಇದ್ದ ಮೀನುಗಳು ನಂತರ ನಿಧಾನವಾಗಿ ತೆವಳಿಕೊಂಡು ಸಮುದ್ರ ಸೇರಿದವು. ಈ ಮೀನುಗಳು ವಿಷಕಾರಿ ಆಗಿರುವುದರಿಂದ ಕಾಗೆ, ಹದ್ದು ಹಾಗೂ ನಾಯಿಗಳು ಸಹ ತಿನ್ನುವುದಿಲ್ಲ.

ಏನು ಕಾರಣವಿರಬಹುದು?:  ‘ಸಮುದ್ರದ ತಳದಲ್ಲಿರುವ ರಾಡಿ ಮಣ್ಣು ಸಮುದ್ರದಲ್ಲಿ ಪದೇಪದೇ ಏಳುತ್ತಿರುವ ಚಂಡಮಾರುತದಿಂದಾಗಿ ಮೇಲೆ ಬಂದಿರುವ ಸಾಧ್ಯತೆಯಿದೆ. ಇದರಿಂದ ಆಮ್ಲಜನಕದ ಕೊರತೆಯಾಗಿ ಅವು ಸಮುದ್ರದ ಮೇಲ್ಮೈಗೆ ಬಂದಿರಬಹುದು. ಬಳಿಕ ಬೃಹತ್ ಅಲೆಗಳ ಹೊಡೆತಕ್ಕೆ ಸಿಲುಕಿ ದಡಕ್ಕೆ ಬಂದಿರುವ ಸಾಧ್ಯತೆಯಿದೆ’ ಎನ್ನುತ್ತಾರೆ ಕಡಲ ಜೀವಿಗಳ ತಜ್ಞರೂ ಆಗಿರುವ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥ ಜಗನ್ನಾಥ ರಾಥೋಡ.

‘ಆಳ ಸಮುದ್ರದ ತಿಳಿ ನೀರಿನಲ್ಲಿ ಕೆಸರು ಮಿಶ್ರಣವಾದ ಕಾರಣ ಸೂರ್ಯನ ಕಿರಣ ಅಗತ್ಯ ಪ್ರಮಾಣದಲ್ಲಿ ತಲುಪುವುದಿಲ್ಲ. ಅಲ್ಲದೇ ಆಮ್ಲಜನಕದ ಕೊರತೆಯೂ ಆಗುತ್ತದೆ. ಸಮುದ್ರ ಜೀವಿಗಳು ಬದುಕಲು ಪ್ರತಿ ಲೀಟರ್ ನೀರಿನಲ್ಲಿ ನಾಲ್ಕು ಮಿಲಿ ಗ್ರಾಂ ಆಮ್ಲಜನಕ ಇರಬೇಕು. ಇದರ ಪ್ರಮಾಣ ಕಡಿಮೆಯಾಗಿದ್ದರಿಂದಲೂ ಅವು ಉಸಿರು ಗಟ್ಟಿ  ದಡಕ್ಕೆ ಬಂದಿರಬಹುದು’ ಎಂದು ವಿವರಿಸಿದರು.

ಸುಂದರವಾದರೂ ಅಪಾಯಕಾರಿ!

ಜೆಲ್ಲಿ ಫಿಶ್‌ಗಳು ಸುಂದರವಾಗಿ ಕಂಡರೂ ಅವು ತುಸು ವಿಷಕಾರಿಯೂ ಹೌದು ಎನ್ನುತ್ತಾರೆ ಕಡಲಜೀವಿ ತಜ್ಞರು.

‘ಅವುಗಳನ್ನು ಯಾರಾದರೂ ಮುಟ್ಟಲು ಬಂದಾಗ ಸ್ವರಕ್ಷಣೆಗೆ ಒಂದು ರೀತಿಯ ರಾಸಾಯನಿಕವನ್ನು ಬಿಡುಗಡೆ ಮಾಡುತ್ತವೆ. ಅವುಗಳ ಹೊರಕವಚದಲ್ಲಿ ಸಣ್ಣ ಮುಳ್ಳಿನ ಮಾದರಿಯ ರಚನೆಗಳಿವೆ. ಅವುಗಳನ್ನು ಚುಚ್ಚುವ ಮೂಲಕ ನಮ್ಮ ಚರ್ಮಕ್ಕೆ ವಿಷ ಸೇರಿಸುತ್ತವೆ. ಆಗ ಚರ್ಮದಲ್ಲಿ ತುರಿಕೆ ಉಂಟಾಗುತ್ತದೆ. ಒಂದುವೇಳೆ ವಿಷದ ಪ್ರಮಾಣ ಜಾಸ್ತಿಯಿದ್ದರೆ ಪ್ರಜ್ಞೆ ತಪ್ಪುವ ಅಪಾಯವೂ ಇದೆ. ಐರೋಪ್ಯ ದೇಶಗಳಲ್ಲಿ ಕಾಣಸಿಗುವ ಜೆಲ್ಲಿ ಫಿಶ್‌ಗಳ ವಿಷದಿಂದ ಮನುಷ್ಯ ಮೃತಪಟ್ಟ ಉದಾಹರಣೆಗಳೂ ಇವೆ’ ಎನ್ನುತ್ತಾರೆ ಜಗನ್ನಾಥ ರಾಥೋಡ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !