ಭಾನುವಾರ, ಸೆಪ್ಟೆಂಬರ್ 15, 2019
27 °C
ಪೊಲೀಸರಿಗೆ ದುಪ್ಪಟ್ಟು ದಂಡ ವಿಧಿಸಲು ಅವಕಾಶ

ಸಂಚಾರ ಇನ್‌ಸ್ಪೆಕ್ಟರ್‌ಗೆ ₹ 2,000 ದಂಡ

Published:
Updated:

ಬೆಂಗಳೂರು: ವಾಹನ ನಿಲುಗಡೆ ನಿರ್ಬಂಧ ಸ್ಥಳದಲ್ಲೇ ತಮ್ಮ ಜೀಪು ನಿಲ್ಲಿಸಿದ್ದ ಸದಾಶಿವನಗರ ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ಶಿವಕುಮಾರ್‌ ಅವರಿಗೆ ₹ 2,000 ದಂಡ ವಿಧಿಸಲಾಗಿದೆ.

ಇನ್‌ಸ್ಪೆಕ್ಟರ್ ಅವರ ಓಡಾಟಕ್ಕೆ ಸರ್ಕಾರಿ ಜೀಪು (ಕೆಎ 02, ಜಿ 1577) ನೀಡಲಾಗಿದೆ. ಸದಾಶಿವನಗರ ಜಂಕ್ಷನ್‌ನ ವಾಹನ ನಿಲುಗಡೆ ನಿರ್ಬಂಧಿಸಿದ್ದ ಜಾಗದಲ್ಲೇ ಗುರುವಾರ ಜೀಪು ನಿಲ್ಲಿಸಲಾಗಿತ್ತು. ಅದರಿಂದ ಸಾರ್ವಜನಿಕರ ವಾಹನಗಳ ಓಡಾಟಕ್ಕೆ ತೊಂದರೆ ಉಂಟಾಗಿತ್ತು.

ಅದೇ ರಸ್ತೆಯಲ್ಲೇ ಹೊರಟಿದ್ದ ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್‌.ರವಿಕಾಂತೇಗೌಡ, ಜೀಪು ಗಮನಿಸಿದ್ದರು. ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಇನ್‌ಸ್ಪೆಕ್ಟರ್‌ಗೆ ದಂಡ ವಿಧಿಸುವಂತೆ ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದರು.

ಪೊಲೀಸರಿಗೆ ದುಪ್ಪಟ್ಟು ದಂಡ: ‘ಸಂಚಾರ ನಿಯಮಗಳನ್ನು ಜಾರಿಗೆ ತರುವ ಪೊಲೀಸರು, ಕಡ್ಡಾಯವಾಗಿ ನಿಯಮ ಪಾಲಿಸಬೇಕು. ನಿಯಮ ಉಲ್ಲಂಘಿಸಿದರೆ, ಸಾರ್ವಜನಿಕರಿಗೆ ವಿಧಿಸುವ ದಂಡಕ್ಕಿಂತ ದುಪ್ಪಟ್ಟು ದಂಡ ವಿಧಿಸಲು ಅವಕಾಶವಿದೆ’ ಎಂದು ಜಂಟಿ ಕಮಿಷನರ್ ರವಿಕಾಂತೇಗೌಡ ಹೇಳಿದರು.

‘ಇನ್‌ಸ್ಪೆಕ್ಟರ್ ಶಿವಕುಮಾರ್ ಅವರಿಗೆ ದುಪ್ಪಟ್ಟು ದಂಡ ವಿಧಿಸಲಾಗಿದೆ. ಅವರ ಹಾಗೂ ಚಾಲಕ ಡಿ.ಎಸ್. ನಾಗೇಂದ್ರ ವಿರುದ್ಧ ಇಲಾಖಾ ಶಿಸ್ತು ಕ್ರಮ ಸಹ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಸಂಚಾರ ನಿಯಮ ಪಾಲಿಸುವಂತೆ ಹಾಗೂ ಉಲ್ಲಂಘನೆ ಮಾಡದಂತೆ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸಬೇಕು. ಸಮವಸ್ತ್ರ ಧರಿಸಿರುವ ಪೊಲೀಸರೇ ನಿಯಮ ಉಲ್ಲಂಘನೆ ಮಾಡಿದರೆ ದುಪ್ಪಟ್ಟು ದಂಡ ತೆರಬೇಕಾಗುತ್ತದೆ’ ಎಂದು ಎಚ್ಚರಿಸಿದರು. 

Post Comments (+)