ಗಮನ ಸೆಳೆದ ಸಂಚಾರಿ ಸುರಂಗ ಅಕ್ವೇರಿಯಂ

7
ಮತ್ಸ್ಯ ಮೇಳಕ್ಕೆ ಚಾಲನೆ; ದೇಶದಲ್ಲೇ ಮೊದಲ ಅಕ್ವೇರಿಯಂ, 160 ವಿಧದ ಅಲಂಕಾರಿಕ ಮೀನುಗಳ ಪ್ರದರ್ಶನ

ಗಮನ ಸೆಳೆದ ಸಂಚಾರಿ ಸುರಂಗ ಅಕ್ವೇರಿಯಂ

Published:
Updated:

ಮೈಸೂರು: ದಸರಾ ಮಹೋತ್ಸವದ ಪ್ರಯುಕ್ತ ನಗರದ ಜೆ.ಕೆ.ಮೈದಾನದಲ್ಲಿ ಮೀನುಗಾರಿಕೆ ಇಲಾಖೆ ಆಯೋಜಿಸಿರುವ ಮತ್ಸ್ಯ ಮೇಳದಲ್ಲಿ ಸುರಂಗ ಅಕ್ವೇರಿಯಂ (ಟನಲ್‌ ಅಕ್ವೇರಿಯಂ) ಗಮನ ಸೆಳೆಯುತ್ತಿದೆ. ಇದು ದೇಶದ ಮೊದಲ ಸಂಚಾರಿ ಸುರಂಗ ಅಕ್ವೇರಿಯಂ ಎಂದು ತಯಾರಕರು ಹೇಳುತ್ತಿದ್ದಾರೆ.

18 ಸಾವಿರ ಲೀಟರ್‌ ನೀರಿನ ಸಾಮರ್ಥ್ಯ ಹೊಂದಿದ್ದು, ವಿವಿಧ ತಳಿಯ ಅಲಂಕಾರಿಕ ಮೀನುಗಳನ್ನು ಇದರೊಳಗೆ ಬಿಡಲಾಗಿದೆ. ಮತ್ಸ್ಯ ಮೇಳದ
ಪ್ರವೇಶ ದ್ವಾರದ ಬಳಿ ಅಕ್ವೇರಿಯಂ ಇಡಲಾಗಿದೆ. ಒಳ ಪ್ರವೇಶಿಸುವ ಜನರಿಗೆ ಇದು ವಿಶಿಷ್ಟ ಅನುಭವ ನೀಡುತ್ತಿದೆ.

‘ವಿದೇಶಗಳಲ್ಲಿ ನಿರ್ದಿಷ್ಟ ಜಾಗದಲ್ಲಿ ಇಡುವಂತಹ ಟನಲ್‌ ಅಕ್ವೇರಿಯಂಗಳು ಇವೆ. ಆದರೆ, ಸಂಚಾರಿ ಟನಲ್‌ ಅಕ್ವೇರಿಯಂಗಳು ಕಡಿಮೆ. ಭಾರತದಲ್ಲಿ ಎಲ್ಲೂ ಸಿಗುವುದಿಲ್ಲ. 15 ವರ್ಷಗಳ ನಿರಂತರ ಸಂಶೋಧನೆ ಬಳಿಕ ಇದನ್ನು ರೂಪಿಸಲಾಗಿದೆ. ಇದನ್ನು ಕೇವಲ 20 ದಿನಗಳಲ್ಲಿ ತಯಾರಿಸಿದ್ದೇವೆ’ ಎಂದು ಮರ್‌ಮೇಡ್‌ ಅಕ್ವೇರಿಯಂ ಸಂಸ್ಥೆಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಸಮೀರ್‌ ಅಹಮದ್‌ ‘ಪ್ರಜಾವಾಣಿ’ಗೆ
ತಿಳಿಸಿದರು.

‘ಸಾಮಾನ್ಯ ಟನಲ್‌ ಅಕ್ವೇರಿಯಂಗಳಿಗೆ ಆಕ್ರಲಿಕ್‌ ಶೀಟ್‌ ಬಳಸುವುದರಿಂದ ಅವುಗಳನ್ನು ಬೇರೆಡೆ ಕೊಂಡೊಯ್ಯಲು ಆಗುವುದಿಲ್ಲ. ಆದರೆ, ಇದನ್ನು ಲ್ಯಾಮಿನೇಟೆಡ್‌ ಸೇಫ್ಟಿ ಗಾಜು ಬಳಸಿ ತಯಾರಿಸಲಾಗಿದೆ. ಇದಕ್ಕೆ 18 ಸಾವಿರ ಲೀಟರ್‌ ನೀರನ್ನು ತಡೆಯುವ ಸಾಮರ್ಥ್ಯ ಇದೆ. ಒಂದೆಡೆಯಿಂದ ಮತ್ತೊಂದೆಡೆ ಸುಲಭವಾಗಿ ಸಾಗಿಸಬಹುದು’ ಎಂದು ವಿವರಿಸಿದರು.

ಜಾಯಿಂಟ್‌ ಗೊರಾಮಿ, ಹಾವಿನ ಹೆಡೆ ಮೀನು, ಹೈಪಿನ್‌ ಶಾರ್ಕ್‌, ವಾಸ್ತು ಮೀನು, ಬ್ಲ್ಯಾಕ್‌ ಡೈಮಂಡ್‌ ಸ್ಟಿಂಗ್‌ ರೇ, ಆರೋವನ, ಪ್ಯಾರೆಟ್‌ ಫಿಶ್‌ಗಳನ್ನು ಈ ಅಕ್ವೇರಿಯಂಗೆ ಬಿಡಲಾಗಿದೆ.ಉಳಿದಂತೆ, ಸಣ್ಣ ಗಾತ್ರದ ಅಕ್ವೇರಿಯಂಗಳಲ್ಲಿ ಒಟ್ಟು 160 ವಿಧದ ಅಲಂಕಾರಿಕ ಮೀನುಗಳನ್ನು
ಕಣ್ತುಂಬಿಕೊಳ್ಳಬಹುದು.

ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ ರೆಡ್ಡಿ ಮತ್ಸ್ಯ ಮೇಳಕ್ಕೆ ಚಾಲನೆ ನೀಡಿದರು. ಇದು ಸೆ. 16ರ ವರೆಗೆ ಇರುತ್ತದೆ.

ಪಾರಂಪರಿಕ ಕಟ್ಟಡ ಅಪ್ಪಿಕೊಂಡರು

ಮೈಸೂರು: ನಾಡಹಬ್ಬ ದಸರೆ 3ನೇ ದಿನವಾದ ಶುಕ್ರವಾರ ಮತ್ತಷ್ಟು ಕಳೆಗಟ್ಟಲಾರಂಭಿಸಿದೆ. ಜೆ.ಕೆ.ಮೈದಾನದಲ್ಲಿ ಆರಂಭವಾದ ರೈತ ದಸರೆ ಗ್ರಾಮೀಣ ಪ್ರದೇಶದವರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಹಳ್ಳೀಕಾರ್‌ ಎತ್ತುಗಳು, ಮುರ‍್ರಾ ತಳಿಯ ಎಮ್ಮೆಗಳು, ಎಮು ಪಕ್ಷಿಗಳು, ₹ 1 ಲಕ್ಷ ಮೌಲ್ಯದ ಟಗರು, ₹ 30 ಸಾವಿರ ಮೌಲ್ಯದ ಮೇಕೆಗಳು ಗಮನ ಸೆಳೆದವು.

ಪಾರಂಪರಿಕ ಸೈಕಲ್ ಸವಾರಿಯಲ್ಲಿ ಸೈಕಲ್‌ ಏರಿದ ಯುವಕ, ಯುವತಿಯರು ನಗರದಲ್ಲಿರುವ 16 ಪಾರಂಪರಿಕ ಸ್ಥಳಗಳಿಗೆ ಭೇಟಿ ನೀಡಿದರು. ಪಾರಂಪರಿಕ ಕಟ್ಟಡ ಅಪ್ಪಿಕೊಂಡರು. ಚಿಗುರು ಕವಿಗೋಷ್ಠಿಯಲ್ಲಿ 30 ವಿದ್ಯಾರ್ಥಿಗಳು ಕವನ ವಾಚಿಸಿ
ದರು. ಮಕ್ಕಳ ದಸರಾದಲ್ಲಿ ‘ಡಾನ್ಸ್‌ ಕರ್ನಾಟಕ ಡಾನ್ಸ್‌’ ಖ್ಯಾತಿಯ ಐಶ್ವರ್ಯ ಹಾಗೂ ಸೃಜನ್‌ ಪಟೇಲ್‌ ‘ಓ ಬೇಬಿ ಒನ್ಸ್‌ ಅಗೇನ್‌... ಹಾಡಿಗೆ ಹೆಜ್ಜೆ ಹಾಕಿದ್ದು ಸಭಾಂಗಣದಲ್ಲಿ ಸಂಚಲನ ಮೂಡಿಸಿತು.

ಕೃಷಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ಅವರನ್ನು ಸಂಘಟಕರು ಸ್ವಾಗತಿಸಲಿಲ್ಲ. ಇದರಿಂದ ಸಿಡಿಮಿಡಿಗೊಂಡ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ನಿರೂಪಕರ ವಿರುದ್ಧ ಹರಿಹಾಯ್ದರು. 
ಕೃಷಿ ಸಚಿವರು ಯಾರು ಎಂಬುದು ನಮಗೆ ಗೊತ್ತಿಲ್ಲದೆ ಸ್ವಾಗತಿಸಿಲ್ಲ ಎಂದು ಸಂಘಟಕರು ನಂತರ ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !