ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಪ್ರೀಂ’ ಆದೇಶದಂತೆ ಅತೃಪ್ತರಿಗೆ ಖಾಕಿ ರಕ್ಷಣೆ| ‘ಸೌಧ’ದ ಸುತ್ತ ಸರ್ಪಗಾವಲು

1500 ಪೊಲೀಸರ ನಿಯೋಜನೆ l ಓಡೋಡಿ ಬಂದ ಶಾಸಕರು
Last Updated 11 ಜುಲೈ 2019, 19:34 IST
ಅಕ್ಷರ ಗಾತ್ರ

ಬೆಂಗಳೂರು: ‘ಸುಪ್ರೀಂ’ ಆದೇಶದಂತೆ ವಿಧಾನಸಭಾಧ್ಯಕ್ಷರ (ಸ್ಪೀಕರ್‌) ಭೇಟಿಗೆ ಮುಂಬೈಯಿಂದ ಹೊರಟ ಅತೃಪ್ತ ಶಾಸಕರಿಗೆ ರಾಜ್ಯ ಪೊಲೀಸರು ವಿಶೇಷ ರಕ್ಷಣೆ ನೀಡಿದರು. ಎಚ್ಎಎಲ್‌ ವಿಮಾನ ನಿಲ್ದಾಣದಲ್ಲಿ ಶಾಸಕರು ಬಂದಿಳಿಯುತ್ತಿದ್ದಂತೆ ಪೊಲೀಸರು ಅವರೆಲ್ಲರನ್ನೂ ಸುತ್ತುವರಿದರು.

ಗುರುವಾರ ಸಂಜೆ 6 ಗಂಟೆ ಒಳಗೆ ಸಭಾಧ್ಯಕ್ಷ ರಮೇಶ್ ಕುಮಾರ್‌ ಅವರನ್ನು ಭೇಟಿ ಮಾಡುವಂತೆ ಅತೃಪ್ತರಿಗೆ ಸುಪ್ರೀಂ ಕೋರ್ಟ್‌ ಬೆಳಿಗ್ಗೆ ನಿರ್ದೇಶನ ನೀಡಿತ್ತು. ಭೇಟಿಗೆ ತೆರಳುವ ಶಾಸಕರಿಗೆ ಬಿಗಿ ಭದ್ರತೆ ಒದಗಿಸುವಂತೆಯೂ ರಾಜ್ಯ ಗೃಹ ಇಲಾಖೆಗೆ ಸೂಚನೆ ಕೊಟ್ಟಿತ್ತು.

ಭದ್ರತೆ ಒದಗಿಸುವ ಉಸ್ತುವಾರಿಯನ್ನು ಡಿಸಿಪಿ ಗಿರೀಶ್ ಅವರಿಗೆ ವಹಿಸಲಾಗಿತ್ತು. ಸಭಾಧ್ಯಕ್ಷರ ಭೇಟಿ ಬಳಿಕ ಈ ಶಾಸಕರು ಸೂಚಿಸಿರುವ ಸ್ಥಳಕ್ಕೆ ಮತ್ತೆ ಸುರಕ್ಷಿತವಾಗಿ ತಲುಪಿಸುವ ಹೊಣೆಯನ್ನೂ ನೀಡಲಾಗಿತ್ತು. ಹೀಗಾಗಿ, ಸ್ಪೀಕರ್‌ ಅವರನ್ನು ಮಧ್ಯಾಹ್ನ ಭೇಟಿ ಮಾಡಲು ಗಿರೀಶ್‌ ಅವರು ವಿಧಾನಸೌಧಕ್ಕೆ ಬಂದಿದ್ದರು. ಶಾಸಕರ ರಸ್ತೆ ಪ್ರಯಾಣದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಎಲ್ಲ ತಯಾರಿ ನಡೆಸಿದ್ದರು. ಅಷ್ಟೇ ಅಲ್ಲ, ಕೇವಲ 15–20 ನಿಮಿಷದಲ್ಲಿ ಎಲ್ಲರನ್ನು ವಿಧಾನಸೌಧಕ್ಕೆ ತಲುಪಿಸುವ ಬಗ್ಗೆಯೂ ಯೋಜನೆ ರೂಪಿಸಲಾಗಿತ್ತು.

ಮುಂಬೈ ಪೊಲೀಸರ ಭದ್ರತೆಯಲ್ಲಿ ರಿನೈಜಾನ್ಸ್‌ ಹೋಟೆಲ್‌ನಿಂದ ಅಲ್ಲಿನ ವಿಮಾನ ನಿಲ್ದಾಣಕ್ಕೆ ತೆರಳಿದ ಅತೃಪ್ತ ಶಾಸಕರು, ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಬಂದರು. ಎಚ್ಎಎಲ್‌ ವಿಮಾನ ನಿಲ್ದಾಣದಿಂದ ವಿಧಾನಸೌಧದವರೆಗೆ ರಸ್ತೆಯುದ್ದಕ್ಕೂ ಅಲ್ಲಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿತ್ತು. ಆ ಮೂಲಕ, ಗಣ್ಯಾತೀತ ಗಣ್ಯರಿಗೆ ನೀಡುವ ಭದ್ರತೆಗೂ ಮಿಗಿಲಾದ ಚಕ್ರವ್ಯೂಹವನ್ನು ಪೊಲೀಸ್‌ ಸಿಬ್ಬಂದಿ ಏರ್ಪಡಿಸಿದ್ದರು.

ಎಚ್‌ಎಎಲ್‌ನಿಂದ ವಿಧಾನಸೌಧಕ್ಕೆ ಬರಲು ಅತೃಪ್ತರಿಗೆ ವಿಶೇಷ ಬಸ್ ಮತ್ತು ಸಿಗ್ನಲ್‌ ಫ್ರೀ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಬಸ್ಸಿನ ಮುಂಭಾಗ ಮತ್ತು ಹಿಂದೆ ಬೆಂಗಾವಲು ವಾಹನಗಳಿದ್ದವು. ರಸ್ತೆಯುದ್ದಕ್ಕೂ ಪೊಲೀಸರು ವಿಡಿಯೊ ಚಿತ್ರೀಕರಣ ಕೂಡಾ ಮಾಡಿದ್ದರು.

ಆದರೆ, ವಿಧಾನಸೌಧಕ್ಕೆ ಬಸ್‌ ತಲುಪುವಷ್ಟರಲ್ಲಿ ಸಮಯ ಮೀರಿತ್ತು (6:03). ಹೀಗಾಗಿ, ಶಾಸಕರು ಓಡೋಡಿ ಸಭಾಧ್ಯಕ್ಷರ ಕಚೇರಿ ತಲುಪಿದರು. ಬಿಗಿ ಭದ್ರತೆ ವ್ಯವಸ್ಥೆ ಮಾಡುತ್ತಿದ್ದ ಪೊಲೀಸರು ವಿಧಾನಸೌಧದ ಆವರಣವನ್ನೂ ಸಂಪೂರ್ಣ ವಿಡಿಯೊ ಕಣ್ಗಾವಲಿಗೆ ಒಳಪಡಿಸಿದ್ದರು.

ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ರಾಜು, ನಗರ ಪೊಲೀಸ್ ಕಮಿಷನರ್‌ ಅಲೋಕ್ ಕುಮಾರ್, ಏಳೂ ವಿಭಾಗಗಳ ಡಿಸಿಪಿ ಹಾಗೂ ಎಸಿಪಿಗಳು ಸೇರಿದಂತೆ 1,500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

‘ಮುಂಬೈ ಟು ವಿಧಾನಸೌಧ’
* ಬೆಳಿಗ್ಗೆ 11–
ಸುಪ್ರೀಂ ಕೋರ್ಟ್‌ನಲ್ಲಿ ಅತೃಪ್ತ ಶಾಸಕರ ಅರ್ಜಿ ವಿಚಾರಣೆ
* 11.15– ಸಂಜೆ 6 ಗಂಟೆಯೊಳಗೆ ಸ್ಪೀಕರ್‌ ಭೇಟಿಗೆ ಕೋರ್ಟ್‌ ಆದೇಶ
* ಮಧ್ಯಾಹ್ನ 1.40– ರಿನೈಜಾನ್ಸ್‌ ಹೋಟೆಲ್‌ನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಹೊರಟ ಅತೃಪ್ತರು
* ಮ. 2.45– ಅತೃಪ್ತ ಶಾಸಕರನ್ನು ಹೊತ್ತು ಮುಂಬೈಯಿಂದಬೆಂಗಳೂರಿಗೆ ವಿಶೇಷ ವಿಮಾನ
* ಸಂಜೆ 4.50– ಬೆಂಗಳೂರು ಎಚ್ಎಎಲ್‌ನಲ್ಲಿ ವಿಶೇಷ ವಿಮಾನಭೂ ಸ್ಪರ್ಶ
* ಸಂಜೆ 5– ಎಚ್ಎಎಲ್‌ನಲ್ಲಿ ವಿಮಾನ ನಿಲ್ದಾಣದಿಂದ ವಿಶೇಷ ಬಸ್‌ನಲ್ಲಿ ವಿಧಾನಸೌಧಕ್ಕೆ ಅತೃಪ್ತರ ಪ್ರಯಾಣ
* ಸಂಜೆ 6.03– ವಿಧಾನಸೌಧ ತಲುಪಿದ ಅತೃಪ್ತ ಶಾಸಕರಿದ್ದ ಬಸ್‌
* ಸಂಜೆ 6.50– ಸ್ಪೀಕರ್‌ ಭೇಟಿ ಮಾಡಿ ವಿಧಾನಸೌಧದಿಂದ ಹೊರಟ ಅತೃಪ್ತ ಶಾಸಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT