ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3,212 ಪ್ರಾಥಮಿಕ ಶಿಕ್ಷಕರ ಕಡ್ಡಾಯ ವರ್ಗಾವಣೆ;ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಇಂದು

Last Updated 10 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ ಕಡ್ಡಾಯ ವರ್ಗಾವಣೆ ಪ್ರಕ್ರಿಯೆ ಕೊನೆಗೊಂಡಿದ್ದು, ಒಟ್ಟು 3,212 ಮಂದಿ ವರ್ಗಾವಣೆಗೊಂಡಿದ್ದಾರೆ.ಬುಧವಾರ ವಿವಿಧ ವಿಭಾಗಗಳಲ್ಲಿ ಪ್ರೌಢಶಾಲಾ ಶಿಕ್ಷಕರ ಕಡ್ಡಾಯ ವರ್ಗಾವಣೆ ನಡೆಯಲಿದೆ.

ಪ್ರಾಥಮಿಕ ಶಾಲೆ ವಿಭಾಗದಲ್ಲಿ ಕಡ್ಡಾಯ ವರ್ಗಾವಣೆಗಾಗಿ 12,622 ಮಂದಿಯನ್ನು ಗುರುತಿಸಲಾಗಿತ್ತು. ಆದರೆ, ವಿವಿಧ ಕಾರಣಗಳಿಗಾಗಿ 6,832 ಮಂದಿ ವಿನಾಯಿತಿ ಪಡೆದಿದ್ದಾರೆ. ಶೇಕಡ 4ರಷ್ಟು ಮಿತಿಗೆ ಒಳಪಟ್ಟು ಕಡ್ಡಾಯ ವರ್ಗಾವಣೆಗೆ 4,084 ಮಂದಿ ಅರ್ಹತೆ ಹೊಂದಿದ್ದರು. ಹುದ್ದೆ ಇಲ್ಲ ಎಂಬ ಕಾರಣಕ್ಕೆ 713 ಮಂದಿಯ ಕಡ್ಡಾಯ ವರ್ಗಾವಣೆ ರದ್ದಾಗಿದೆ.

ಪ್ರೌಢಶಾಲಾ ವಿಭಾಗದಲ್ಲಿ 3,692 ಮಂದಿಯನ್ನು ಕಡ್ಡಾಯ ವರ್ಗಾವಣೆಗೆ ಗುರುತಿಸಲಾಗಿದೆ. ಈ ಪೈಕಿ 2,100 ಮಂದಿ ವಿವಿಧ ಕಾರಣಗಳಿಗಾಗಿ ವಿನಾಯಿತಿ ಪಡೆದಿದ್ದು, ಶೇ 4ರಷ್ಟು ಮಿತಿಗೆ ಒಳಪಟ್ಟು ಕಡ್ಡಾಯ ವರ್ಗಾವಣೆಗೆ ಅರ್ಹರಾದವರು 1,592 ಮಂದಿ. ಈ ಪೈಕಿ ಹುದ್ದೆ ಇಲ್ಲ ಎಂಬ ಕಾರಣಕ್ಕೆ345 ಮಂದಿಯ ವರ್ಗಾವಣೆ ರದ್ದಾಗಿದೆ. ಹೀಗಾಗಿ 1,243 ಮಂದಿ ಮಾತ್ರ ಕಡ್ಡಾಯ ವರ್ಗಾವಣೆಗೆ ಒಳಗಾಗಲಿದ್ದಾರೆ.

ಇಂದು ಸಭೆ: ಕಡ್ಡಾಯ ವರ್ಗಾವಣೆಯಲ್ಲಿನ ಲೋಪದೋಷ ನಿವಾರಣೆ ಜೊತೆಗೆ ಶಿಕ್ಷಕರ ವರ್ಗಾವಣೆಯನ್ನು ಶಿಕ್ಷಕ ಸ್ನೇಹಿಯಾಗಿ ಮಾಡುವುದು ಸೇರಿದಂತೆ ಸುಧಾರಣೆಯ ಮಾರ್ಗಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್ ಅವರು ಬುಧವಾರ ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಶಿಕ್ಷಣ ಮತ್ತು ಪದವೀಧರ ಕ್ಷೇತ್ರಗಳಿಂದ ಆಯ್ಕೆಯಾದ 14 ಮಂದಿ ವಿಧಾನ ಪರಿಷತ್‌ ಸದಸ್ಯರ ಜತೆಗೆ ಸಭೆ ನಡೆಸಲಿದ್ದಾರೆ.

ಕ್ಯಾನ್ಸರ್‌: ಶಿಕ್ಷಕಿಗೆ ದೊರೆತ ನ್ಯಾಯ

ಬೆಂಗಳೂರು ನಗರದ ದಕ್ಷಿಣ ವಲಯ 3ಕ್ಕೆ ಸೇರಿದ ಎಳ್ಕುಂಟೆಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಮಹೇಶ್ವರಿ‌ ಅವರು ಕ್ಯಾನ್ಸರ್‌ಪೀಡಿತರಾಗಿದ್ದು, ಅವರು ಕೆಲಸ ನಿರ್ವಹಿಸುತ್ತಿದ್ದ ಸ್ಥಳದಲ್ಲೇ ಮುಂದುವರಿಯಲು ಪ್ರಾಥಮಿಕ ಶಿಕ್ಷಣ ಸಚಿವ ಎಸ್. ಸುರೇಶ್‌ ಕುಮಾರ್‌ ಅವಕಾಶ ಮಾಡಿಕೊಟ್ಟಿದ್ದಾರೆ.

ಗಂಭೀರ ಕಾಯಿಲೆಯ ಪ್ರಕರಣಗಳನ್ನೂ ಮಾನವೀಯ ದೃಷ್ಟಿಯಿಂದ ನೋಡಲಾಗದ ಅಮಾನವೀಯ ಕಾನೂನನ್ನು ಕೂಡಲೇ ಬದಲಾಯಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇಷ್ಟರಲ್ಲಿಯೇ ಅಗತ್ಯ ಕಾನೂನು ತಿದ್ದುಪಡಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಇದುವರೆಗೆ ಶಿಕ್ಷಕರ ವರ್ಗಾವಣೆ ವಿವರ

ವರ್ಗಾವಣೆ ವಿಧ; ಒಟ್ಟು

ಪ್ರಾಥಮಿಕ ಕೋರಿಕೆ; 7,639

ಪ್ರೌಢಶಾಲೆ ಕೋರಿಕೆ; 1,670

ಪ್ರಾಥಮಿಕ ಕಡ್ಡಾಯ; 3,212

ಇದುವರೆಗಿನ ಒಟ್ಟು ವರ್ಗಾವಣೆ; 12,541

ಒಟ್ಟು ಅರ್ಜಿಗಳು; 1,09,782

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT