ವರ್ಗಾವಣೆ ದಂಧೆಗೆ ಹೈಕೋರ್ಟ್ ಕೆಂಡಾಮಂಡಲ – ಕ್ರಮಕ್ಕೆ ರಾಷ್ಟ್ರಪತಿಗೆ ವರದಿ

7

ವರ್ಗಾವಣೆ ದಂಧೆಗೆ ಹೈಕೋರ್ಟ್ ಕೆಂಡಾಮಂಡಲ – ಕ್ರಮಕ್ಕೆ ರಾಷ್ಟ್ರಪತಿಗೆ ವರದಿ

Published:
Updated:

ಬೆಂಗಳೂರು: ‘ರಾಜ್ಯ ಸರ್ಕಾರ ಅಧಿಕಾರಿಗಳ ವರ್ಗಾವಣೆಯನ್ನು ದೊಡ್ಡ ದಂಧೆಯನ್ನಾಗಿ ಮಾಡಿಕೊಂಡಿದೆ’ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹೈಕೋರ್ಟ್, ‘ಈ ವಿಷಯವನ್ನು ನಾವು ರಾಜ್ಯಪಾಲರ ಗಮನಕ್ಕೆ ತರುತ್ತೇವೆ. ಇದರ ಅನುಸಾರ ರಾಜ್ಯಪಾಲರು, ವರ್ಗಾವಣೆ ಕುರಿತ ಸಮಗ್ರ ವರದಿ ಕಲೆ ಹಾಕಿ ರಾಷ್ಟ್ರಪತಿಗಳಿಗೆ ಕಳುಹಿಸಬೇಕು ಮತ್ತು ರಾಷ್ಟ್ರಪತಿ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಬೇಕು’ ಎಂಬ ಇಂಗಿತ ವ್ಯಕ್ತಪಡಿಸಿದೆ.

2018-19ನೇ ಸಾಲಿನ ವಲಯ ಅರಣ್ಯಾಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದ ಅರ್ಜಿಯೊಂದನ್ನು ನ್ಯಾಯಮೂರ್ತಿ ಎಚ್.ಜಿ. ರಮೇಶ್ ಹಾಗೂ ನ್ಯಾಯಮೂರ್ತಿ ಅಶೋಕ್ ಜಿ. ನಿಜಗಣ್ಣವರ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಕೆ.ನಾಗೇಂದ್ರ ಕುಮಾರ್, ‘ಅರ್ಜಿದಾರ ಈರಣ್ಣ ಯಾದಗಿರಿಯ ವಲಯ ಅರಣ್ಯಾಧಿಕಾರಿಯಾಗಿದ್ದು, ಇವರ ಸ್ಥಾನಕ್ಕೆ ಮತ್ತೊಬ್ಬರನ್ನು ವರ್ಗಾವಣೆ ಮಾಡಲಾಗಿದೆ. ಆದರೆ, ಈರಣ್ಣ ಅವರಿಗೆ ಬೇರೊಂದು ಜಾಗವನ್ನೇ ತೋರಿಸಿಲ್ಲ’ ಎಂದು ಆಕ್ಷೇಪಿಸಿದರು.

ಈ ಮಾತಿಗೆ ಕುದ್ದು ಹೋದ ನ್ಯಾಯಮೂರ್ತಿ ರಮೇಶ್‌, ‘ರಾಜ್ಯ ಸರ್ಕಾರದಲ್ಲಿ ಯಡ್ಡಾದಿಡ್ಡಿ ಹಾಗೂ ಕಾನೂನು ಬಾಹಿರ ವರ್ಗಾವಣೆ ಸುಗ್ಗಿಯಾಗಿ ಪರಿಣಮಿಸಿದೆ. ಈ ಸರ್ಕಾರಕ್ಕೆ ಹೇಳೋರು ಕೇಳೋರೇ ಇಲ್ಲದಂತಾಗಿದೆ’ ಎಂದು ಸರ್ಕಾರಿ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

‘ಸರ್ಕಾರದ ಕಾರ್ಯದರ್ಶಿಗಳು ವರ್ಗಾವಣೆಯನ್ನೇ ಒಂದು ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ನಿಯಂತ್ರಣವಿಲ್ಲದ ಇಂತಹ ವ್ಯವಹಾರಗಳಿಂದ ಸರ್ಕಾರಿ ಅಧಿಕಾರಿಗಳು, ಮಂತ್ರಿಗಳು ಹುದ್ದೆಗಳನ್ನು ಹರಾಜಿಗಿಟ್ಟಿದ್ದಾರೆ’ ಎಂದು ಕಿಡಿ ಕಾರಿದರು.

‘ಹೈಕೋರ್ಟ್‌ಗಂತೂ ಈ ವಿಷಯವಾಗಿ ಎಚ್ಚರಿಸಿ, ಎಚ್ಚರಿಸಿ ಸುಸ್ತಾಗಿ ಹೋಗಿದೆ. ಇನ್ನು ಮುಂದೆ ಇದನ್ನು ಸಹಿಸಲು ಸಾಧ್ಯವಿಲ್ಲ. ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲ ಇರುವ ನಿಯಮಾವಳಿಗಳನ್ನು ಪರಿಶೀಲಿಸಲು ರಾಜ್ಯಪಾಲರಿಗೆ ನಿರ್ದೇಶಿಸಲಾಗುವುದು’ ಎಂದರು.

‘ವರ್ಗಾವಣೆ ದಂಧೆಯ ಬಗ್ಗೆ ರಾಜ್ಯಪಾಲರು ಸಮಗ್ರ ಪರಿಶೀಲನೆ ನಡೆಸಿ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಬೇಕು ಮತ್ತು ರಾಷ್ಟ್ರಪತಿಗಳು ಸರ್ಕಾರದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಅನಿವಾರ್ಯತೆಯನ್ನು ಮನದಟ್ಟು ಮಾಡಿಕೊಡಬೇಕು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರತಿವಾದಿಗಳಾದ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಈರಣ್ಣ ಅವರ ಜಾಗಕ್ಕೆ ವರ್ಗಾವಣೆಗೊಂಡಿರುವ ಹುಮನಾಬಾದ್ ಅರಣ್ಯ ವಲಯಾಧಿಕಾರಿ ಬಸವರಾಜ ಎಸ್‌.ಡಾಂಗೆ ಅವರಿಗೆ ನೋಟಿಸ್ ಜಾರಿಗೊಳಿಸುವಂತೆ ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ಬರಹ ಇಷ್ಟವಾಯಿತೆ?

 • 34

  Happy
 • 0

  Amused
 • 2

  Sad
 • 0

  Frustrated
 • 2

  Angry

Comments:

0 comments

Write the first review for this !