ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಅಲ್ಪಸಂಖ್ಯಾತರ ನೋಂದಣಿಯಲ್ಲಿ ಇಳಿಕೆ!

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಹಿಂದೇಟು
Last Updated 26 ಮಾರ್ಚ್ 2019, 19:42 IST
ಅಕ್ಷರ ಗಾತ್ರ

ಬೆಳಗಾವಿ: ವೈದ್ಯಕೀಯ ದಾಖಲೆ ಕೇಳುತ್ತಿರುವ ಅಧಿಕಾರಿಗಳ ವರ್ತನೆಯಿಂದ ಬೇಸತ್ತ ಲೈಂಗಿಕ ಅಲ್ಪಸಂಖ್ಯಾತರು, ಮತದಾರರ ಗುರುತಿನ ಚೀಟಿಯಲ್ಲಿ ತಮ್ಮ ಲಿಂಗತ್ವವನ್ನು ಬಚ್ಚಿಟ್ಟಿದ್ದಾರೆ. ಜಿಲ್ಲೆಯಲ್ಲಿ 4,800ಕ್ಕೂ ಹೆಚ್ಚು ಜನ ಲೈಂಗಿಕ ಅಲ್ಪಸಂಖ್ಯಾತರು ಇದ್ದರೂ ಕೇವಲ 122 ಜನರು ಮಾತ್ರ ನಿಜವಾದ ಲಿಂಗವನ್ನು ನಮೂದಿಸಿದ್ದಾರೆ. ಇನ್ನುಳಿದವರೆಲ್ಲ ‘ಪುರುಷ’ ಎಂದು ನಮೂದಿಸಿರುವುದು ಬೆಳಕಿಗೆ ಬಂದಿದೆ.

ಜಿಲ್ಲೆಯಲ್ಲಿ 18.87 ಲಕ್ಷ ಪುರುಷ ಹಾಗೂ 18.34 ಲಕ್ಷ ಮಹಿಳಾ ಮತದಾರರು ಇದ್ದಾರೆ. ಇವರ ಜೊತೆಗೆ 122 ಜನ ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ. ಆದರೆ, ಕಳೆದ ಲೋಕಸಭಾ ಚುನಾವಣೆ ವೇಳೆ ಇವರ ಸಂಖ್ಯೆ 273 ಇತ್ತು. ಈಗ ಆ ಸಂಖ್ಯೆ ಇನ್ನೂ ಕಡಿಮೆಯಾಗಿದೆ. ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ, ಕಳೆದ ವಿಧಾನಸಭಾ ಚುನಾವಣೆ ವೇಳೆ ಲೈಂಗಿಕ ಅಲ್ಪಸಂಖ್ಯಾತರು ಮತದಾರರ ಪಟ್ಟಿಯಲ್ಲಿ ಪ್ರತ್ಯೇಕವಾಗಿ ನೋಂದಣಿ ಮಾಡಿಸಿಕೊಂಡಿರಲಿಲ್ಲ.

ಅವಮಾನ ಎದುರಿಸಬೇಕಾಗುತ್ತದೆ ಎನ್ನುವ ಆತಂಕದಿಂದ ಹಲವರುತಮ್ಮ ಲಿಂಗತ್ವವನ್ನು ರಹಸ್ಯವಾಗಿಟ್ಟಿದ್ದಾರೆ. ಇನ್ನೊಂದೆಡೆ, ತಾವು ಲೈಂಗಿಕ ಅಲ್ಪಸಂಖ್ಯಾತ ಎನ್ನುವುದಕ್ಕೆ ವೈದ್ಯಕೀಯ ಪ್ರಮಾಣಪತ್ರ ತಂದುಕೊಡುವಂತೆ ಅಧಿಕಾರಿಗಳು ಕೇಳುತ್ತಿದ್ದಾರೆ. ಇದರಿಂದ ಬೇಸರವಾಗಿ ಲಿಂಗ ನಮೂದಿಸುವುದನ್ನೇ ಬಿಟ್ಟಿದ್ದಾಗಿ ಹೇಳುತ್ತಾರೆ ಅವರು.

‘ಯಾವ ದಾಖಲೆಗಳನ್ನೂ ಕೇಳುವ ಅವಶ್ಯಕತೆ ಇಲ್ಲ ಹಾಗೂ ಲಿಂಗತ್ವವನ್ನು ಗೋಪ್ಯವಾಗಿ ಇಡಬೇಕೆಂದು ಕಾನೂನಿನಲ್ಲಿಯೇ ಇದೆ. ಆದರೂ, ಕೆಲ ಅಧಿಕಾರಿಗಳು ಪ್ರಮಾಣ ಪತ್ರಕ್ಕಾಗಿ ಪೀಡಿಸುವುದು ಮುಂದುವರಿದಿದೆ’ ಎಂದು ಸ್ವಯಂಸೇವಾ ಸಂಸ್ಥೆ ಹ್ಯೂಮ್ಯಾನಿಟಿ ಫೌಂಡೇಷನ್‌ನ ಸದಸ್ಯ ತಾನಾಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ವಯಂ ಘೋಷಣೆ: ಲೈಂಗಿಕ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಹ್ಯೂಮಾನಿಟಿ ಫೌಂಡೇಷನ್‌ನಲ್ಲಿ 1,050 ಮಂದಿ ಸ್ವಯಂ ಪ್ರೇರಣೆಯಿಂದ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಿಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವ ಕೆಲಸವನ್ನು ಸಂಸ್ಥೆಯು ಮಾಡುತ್ತಿದೆ.

ಇವರಿಗಾಗಿ ರಾಜ್ಯ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿ ತಿಂಗಳು ₹ 600 ಪಿಂಚಣಿ, ಸ್ವಂತ ಉದ್ಯೋಗ ಕೈಗೊಳ್ಳಲು ₹ 25,000 ಸಹಾಯಧನ ಹಾಗೂ ಬಡ್ಡಿ ರಹಿತ ₹ 25,000 ಸಾಲ, ರಾಜೀವ್‌ ಗಾಂಧಿ ವಸತಿ ಯೋಜನೆಯಡಿ ಮನೆ ಸೌಲಭ್ಯ ನೀಡುತ್ತಿದೆ. ಹಲವರು ಈ ಪ್ರಯೋಜನ ಪಡೆದಿದ್ದಾರೆ. ಆದರೆ, ಇವರಲ್ಲಿ ಬಹಳಷ್ಟು ಜನರು ತಮ್ಮ ಮತದಾರರ ಚೀಟಿಯಲ್ಲಿ ಮಾತ್ರ ‘ಪುರುಷ’ ಎಂದು ನಮೂದಿಸಿದ್ದಾರೆ.

‘ನನ್ನ ಜೀವನ– ನನ್ನ ಹಕ್ಕು’: ‘ನಮ್ಮ ಬದುಕು– ನಮ್ಮ ಹಕ್ಕು ಎನ್ನುವ ತತ್ವದಂತೆ ಬದುಕಬೇಕು. ನಾನು ಮೊದಲ ಬಾರಿ ಹೇಳಿಕೊಂಡಾಗ ಸ್ವಲ್ಪ ಅವಮಾನ ಅನುಭವಿಸಿದ್ದೆ. ಆದರೆ, ಈಗ ನಿರಾಳವಾಗಿದ್ದೇನೆ. ಈಗ ನನ್ನದೇ ಆದ ಅಸ್ಮಿತೆ ಸಿಕ್ಕಿದೆ. ನಮ್ಮ ಲಿಂಗತ್ವವನ್ನು ಬಹಿರಂಗಪಡಿಸಲು ಹಿಂಜರಿಯಬಾರದು’ ಎಂದು ಮಧು ತಿಳಿಸಿದರು.

‘ಸ್ವಯಂ ಹೇಳಿಕೆಯೇ ಸಾಕು’

‘ತಮ್ಮ ಲಿಂಗತ್ವದ ಬಗ್ಗೆ ಲೈಂಗಿಕ ಅಲ್ಪಸಂಖ್ಯಾತರು ಸ್ವಯಂ ದೃಢೀಕೃತ ಹೇಳಿಕೆ ನೀಡಿದರೆ ಸಾಕು. ವೈದ್ಯಕೀಯ ಪ್ರಮಾಣ ಪತ್ರದ ಅವಶ್ಯಕತೆ ಇರುವುದಿಲ್ಲ. ಮತದಾರರ ಪಟ್ಟಿ ತಯಾರಿಸುವ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡುತ್ತೇನೆ. ಎಲ್ಲರೂ ತಮ್ಮ ನಿಜವಾದ ಲಿಂಗತ್ವವನ್ನು ನಮೂದಿಸಬೇಕು’ ಎಂದು ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT