ಶನಿವಾರ, ಏಪ್ರಿಲ್ 4, 2020
19 °C
ಎನ್‌ಎಚ್‌-206 ವಿಸ್ತರಣೆ; ಕಡೂರು–ತರೀಕೆರೆ ಮಾರ್ಗ

ರಾಷ್ಟ್ರೀಯ ಹೆದ್ದಾರಿಗಾಗಿ 2 ಸಾವಿರ ಮರಕ್ಕೆ ಕೊಡಲಿ

ಬಿ.ಜೆ. ಧನ್ಯಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿ-206 (ತುಮಕೂರು–ಶಿವಮೊಗ್ಗ) ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಜಿಲ್ಲೆಯ ತರೀಕೆರೆ ಮತ್ತು ಕಡೂರು ತಾಲ್ಲೂಕಿನಲ್ಲಿ ಹಾದುಹೋಗಿರುವ ಈ ರಸ್ತೆ ಬದಿಯ 1,968 ವೃಕ್ಷಗಳ ಹನನಕ್ಕೆ ತಯಾರಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು (ಎನ್‌ಎಚ್‌ಎಐ) ಚತುಷ್ಪಥ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದೆ. ಪ್ಯಾಕೇಜ್‌–3ನಲ್ಲಿ ಬಾಣಾವರದಿಂದ ಬೆಟ್ಟ
ದಹಳ್ಳಿವರೆಗೆ 49 ಕಿ.ಮೀ. ವಿಸ್ತರಣೆ ನಿಗದಿಯಾಗಿದೆ. ಕಾಮಗಾರಿ ಆರಂಭಿಸಲಾಗಿದೆ.

ಸೇತುವೆಗಳು, ಎರಡು ಬೈಪಾಸ್‌ ನಿರ್ಮಾಣವನ್ನು ಈ ಪ್ಯಾಕೇಜ್‌ ಒಳಗೊಂಡಿದೆ. ಮಾರ್ಗ ವಿಸ್ತರಣೆಗೆ ಅಡಚಣೆಯಾಗಿರುವ ಮರಗಳನ್ನು ಕಡಿಯಲು ಉದ್ದೇಶಿಸಲಾಗಿದೆ.

‘ಬಾಣಾವರದಿಂದ ಬೆಟ್ಟದಹಳ್ಳಿವರೆಗಿನ ರಸ್ತೆ ಬದಿಯ 1,968 ಮರಗಳನ್ನು ಕಡಿಯಲು ಉದ್ದೇಶಿಸಲಾಗಿದೆ. ಕಡೂರಿನ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಇದೇ 31ರಂದು ಸಭೆ ಏರ್ಪಡಿಸಲಾಗಿದೆ. ಅಹವಾಲು, ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ಸಲ್ಲಿಸಬಹುದು’ ಎಂದು ಚಿಕ್ಕಮಗಳೂರು ವಿಭಾಗದ ಎನ್‌.ಎಚ್‌. ಜಗನ್ನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಸ್ತೆ ವಿಸ್ತರಣೆ ಬಳಿಕ ಮಾರ್ಗದ ಇಕ್ಕೆಲಗಳಲ್ಲಿ ಗಿಡಗಳನ್ನು ನೆಡಲಾಗುವುದು. ಹಲಸು, ಹೊನ್ನೆ, ಬೇವು, ಅರಳಿ ಮೊದಲಾದ ಸಸಿಗಳನ್ನು ನೆಟ್ಟು ಪೋಷಿಸಲು ಉದ್ದೇಶಿಸಲಾಗಿದೆ’ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಎನ್‌ಎಚ್‌–173 (ಕಡೂರು–ಮೂಡಿಗೆರೆ) ವಿಸ್ತರಣೆಗೆ ಒಟ್ಟು 3,455 ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಈಗಾ
ಗಲೇ ಅನುಮೋದನೆ ನೀಡಿದೆ. ಎನ್‌ಎಚ್‌–206 ವಿಸ್ತರಣೆಗೆ 1,968 ವೃಕ್ಷಗಳಿಗೆ ಅನುಮತಿ ನೀಡುವ ಪ್ರಕ್ರಿಯೆ ಶುರುವಾಗಿದೆ. ಒಟ್ಟಾರೆ 5,423 ಮರಗಳು ಬಲಿ ‘ಪಟ್ಟಿ’ಯಲ್ಲಿವೆ.

ಈ ಮಾರ್ಗದ ಬದಿಯಲ್ಲಿ ಸಾಲುಮರಗಳು ದಟ್ಟವಾಗಿರುವ ಕಡೆಗಳಲ್ಲಿ ಸಾಗುವಾಗ ಹವಾನಿಯಂತ್ರಿತ ರಸ್ತೆಯಲ್ಲಿ ಸಂಚರಿಸಿದ ಅನುಭವವಾಗುತ್ತದೆ. ಈಗ ಮರಗಳನ್ನು ಕಡಿಯುವುದರಿಂದ ಬಟಾಬಯಲಾಗುತ್ತದೆ. ರಸ್ತೆ ವಿಸ್ತರಣೆಯು ಮರಗಳಿಗೆ ಕುತ್ತಾಗಿ ಪರಿಣಮಿಸಿದೆ ಎಂದು ಪರಿಸರಾಸಕ್ತರು ದೂರಿದ್ದಾರೆ.

‘ಪ್ಯಾಕೇಜ್‌–3 ಮೊತ್ತ ₹ 900 ಕೋಟಿ. ಟೆಂಡರ್‌ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಜೂನ್‌ ವೇಳೆಗೆ ಕಾಮಗಾರಿ ಶುರುವಾಗುವ ನಿರೀಕ್ಷೆ ಇದೆ. ಭೂಸ್ವಾಧೀನ ಮೊದಲಾದ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಕಾಮಗಾರಿ ಮುಗಿದನಂತರ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂದು ಟೆಂಡರ್‌ನಲ್ಲಿ ಷರತ್ತು ಇದೆ. ಗುತ್ತಿಗೆದಾರರು ಗಿಡ ನೆಟ್ಟು ಪೋಷಿಸುತ್ತಾರೆ’ ಎಂದು ಎನ್‌ಎಚ್‌ಎಐನಎಂಜಿನಿಯರ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು