ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಶಾಲೆಗೆ ಮರಗಳೇ ಕಾಂಪೌಂಡ್!

ಹಿರೇಕುಂಬಿ ಜನತಾ ಕಾಲೊನಿಯಲ್ಲಿ ನಿತ್ಯವೂ ಪರಿಸರ ದಿನಾಚರಣೆ
Last Updated 4 ಜೂನ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕು ಹಿರೇಕುಂಬಿ ಗ್ರಾಮದ ಜನತಾ ಕಾಲೊನಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿತ್ಯವೂ ಪರಿಸರ ದಿನ ಆಚರಿಸಲಾಗುತ್ತಿದೆ. ಗಿಡ–ಮರಗಳನ್ನು ಕಾಪಾಡಿಕೊಳ್ಳುವ ಬಗ್ಗೆ ಶಿಕ್ಷಕರು ಪ್ರಾಯೋಗಿಕವಾಗಿ ತಿಳಿಸುವ ಮೂಲಕ ‘ಬೆಳೆಯುವ ಸಿರಿ’ಗಳಾದ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸುತ್ತಿದ್ದಾರೆ.

ಈ ಶಾಲೆಗೆ ಕಾಂಪೌಂಡ್ ಇಲ್ಲ. ಆದರೆ, ಅಲ್ಲಿನ ಶಿಕ್ಷಕರು ಸುತ್ತಲೂ 100ಕ್ಕೂ ಹೆಚ್ಚು ಮರಗಳನ್ನು ಬೆಳೆಸುವ ಮೂಲಕ ಮರಗಳನ್ನೇ ಕಾಂಪೌಂಡ್ ಆಗಿ ಪರಿವರ್ತನೆ ಮಾಡಿಕೊಂಡಿದ್ದಾರೆ. ಕೆಲವೊಮ್ಮೆ ಪಾಠ–ಪ್ರವಚನಕ್ಕೂ ಈ ಮರಗಳು ‘ನೆರಳು’ ನೀಡುತ್ತಿವೆ. ನಿಸರ್ಗದ ಮಡಿಲಲ್ಲಿ ಸ್ವಚ್ಛಂದದ ಕಲಿಕೆಯ ವಾತಾವರಣವನ್ನು ಅವು ನಿರ್ಮಿಸಿಕೊಟ್ಟಿವೆ. ಅಲ್ಲಿನ ತಂಪಾದ ವಾತಾವರಣದಲ್ಲಿ ಮಕ್ಕಳು ಆಟವನ್ನೂ ಆಡುತ್ತಾರೆ; ಮಧ್ಯಾಹ್ನದ ಬಿಸಿಯೂಟವನ್ನು ಸೇವಿಸುತ್ತಾರೆ.

ಇಲ್ಲಿ ಬಹುತೇಕ ನೆರಳು ನೀಡುವ ಮರಗಳನ್ನೇ ನೆಟ್ಟು ಬೆಳೆಸಲಾಗಿದೆ. ಬೇವು, ಹೊಂಗೆ, ಸಾಗವಾನಿ, ಅರಳಿ, ನೇರಳೆ, ಅಕೇಶಿಯಾ ಮೊದಲಾದ ಮರಗಳಿವೆ. 1ರಿಂದ 5ನೇ ತರಗತಿವರೆಗೆ 181 ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಆದರೆ, ಇರುವುದು ಎರಡೇ ಕೊಠಡಿಗಳು. ಇಲ್ಲಿ ಕೊಠಡಿಗಳ ಕೊರತೆ ಇರುವುದನ್ನು ಮರಗಳು ನೀಗಿಸಿವೆ. ಏಕೆಂದರೆ, ಅಲ್ಲಿರುವ ಶಿಕ್ಷಕರು ಮರಗಳ ನೆರಳಿನ ತಂಪಾದ ವಾತಾವರಣದಲ್ಲಿಯೇ ತೆಗೆದು ಕೆಲವು ತರಗತಿಗಳನ್ನು ತೆಗೆದುಕೊಳ್ಳುತ್ತಾರೆ! ಅಲ್ಲಿನ ಆಹ್ಲಾದಕರ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ.

ಜತನದಿಂದ

2007ರಲ್ಲಿ ಇಲ್ಲಿ ಶಾಲೆ ಆರಂಭವಾದಾಗ ಸುತ್ತಲೂ ಬಂಜರು ಭೂಮಿ ಇತ್ತು. ಆಗ ಶಿಕ್ಷಕರಾಗಿ ಬಂದಿದ್ದ ಮೋಹನ ರಾಠೋಡ (ಈಗ ಮುಖ್ಯಶಿಕ್ಷಕರು), ಬಳಿಕ ಸಹಶಿಕ್ಷಕಿ ಎಲ್‌.ವೈ. ಮಾಳಗಿ ಸೇರಿದರು. 2016ರಲ್ಲಿ ಬಂದ ಶಿಕ್ಷಕರಾದ ಡಿ.ಎ. ಮುಲ್ಲಾ, ಎಚ್‌.ಬಿ. ಪಾಟೀಲ, ಎಚ್. ಮಲ್ಲೇಶಪ್ಪ, ಆರ್‌.ಬಿ. ಪೂಜೇರಿ ಮರಗಳನ್ನು ಬೆಳೆಸುವ ಕಾರ್ಯಕ್ಕೆ ಕೈಗೂಡಿಸಿದ್ದಾರೆ. ಮಾದರಿಯಾದ ಕಾರ್ಯವನ್ನು ಇಲ್ಲಿನ ಶಿಕ್ಷಕರು ಮಾಡುತ್ತಿದ್ದಾರೆ.

2008ರಲ್ಲಿ ಆಗಿನ ಶಿಕ್ಷಕರು ಇಲ್ಲಿ 12 ಸಸಿಗಳನ್ನು ನೆಟ್ಟಿದ್ದರು. ನೀರಿನ ಕೊರತೆ ಮತ್ತಿತರ ಕಾರಣದಿಂದಾಗಿ 2 ಸಸಿಗಳು ಉಳಿದಿರಲಿಲ್ಲ. 2009ರಲ್ಲಿ ಗ್ರಾಮ ಪಂಚಾಯ್ತಿ, ಎಸ್‌ಡಿಎಂಸಿಯವರ ಸಹಕಾರದೊಂದಿಗೆ 120 ಸಸಿಗಳನ್ನು ನೆಟ್ಟಿದ್ದರು. ರಾಠೋಡ ಸ್ವಂತ ಖರ್ಚಿನಲ್ಲಿ ಸಸಿಗಳ್ಳಿಗೆ ಮುಳ್ಳಿನ ಬೇಲಿ ಹಾಕಿಸಿ ಕಾಪಾಡಿದರು. ಪಕ್ಕದ ಜಮೀನಿನಲ್ಲಿ ಲಭ್ಯವಿದ್ದ ಬೋರ್‌ವೆಲ್‌ನಿಂದ ನೀರು ತರಿಸಿ ಹಾಕಿಸಿ, ಗಿಡಗಳನ್ನು ಬೆಳೆಸಿ ಮರಗಳನ್ನಾಗಿ ಮಾಡಿದ್ದಾರೆ. 2014ರಲ್ಲಿ ಪಂಚಾಯ್ತಿಯಿಂದ ಪೈಪ್‌ಲೈನ್ ಮಾಡಿಕೊಟ್ಟ ನಂತರ ನೀರಿಗಾಗಿ ಪರದಾಡುವ ಪ್ರಮೇಯ ದೂರಾಗಿದೆ.

ಕಾಳಜಿ ಬೆಳೆಸಲು

‘ಪರಿಸರ ರಕ್ಷಣೆಯ ಕುರಿತು ಮಕ್ಕಳ ಮನಸ್ಸಿನಲ್ಲಿ ಕಾಳಜಿ ಬೆಳೆಸಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಹೀಗಾಗಿ, ಆರಂಭದಲ್ಲಿ (2008) ನೀರಿನ ಕೊರತೆಗಳ ನಡುವೆಯೂ ಗಿಡಗಳನ್ನು ಬೆಳೆಸಿದ್ದಕ್ಕೆ ಹೆಮ್ಮೆಯಾಗುತ್ತವೆ. ಸಸಿಗಳು ಈಗ ಮರಗಳಾಗಿ ಬೆಳೆದು ಮುದ ನೀಡುತ್ತಿವೆ. ಎಲ್ಲರ ಗಮನವನ್ನೂ ಸೆಳೆಯುತ್ತಿವೆ. ಕಾಂಪೌಂಡ್ ಇಲ್ಲ ಎನ್ನುವ ಕೊರತೆಯನ್ನು ಇವು ನೀಗಿಸಿವೆ. ಸವದತ್ತಿ ತಾಲ್ಲೂಕು ವ್ಯಾಪ್ತಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಹೆಚ್ಚಿನ ಮಕ್ಕಳು ದಾಖಲಾತಿ ಹೊಂದಿರುವ ಶಾಲೆ ಎಂಬ ಖ್ಯಾತಿ ನಮ್ಮದು. ಆದರೆ, ಹೆಚ್ಚುವರಿ ಕೊಠಡಿ ಇಲ್ಲ. ಮರಗಳೇ ಆಶ್ರಯ ಒದಗಿಸುತ್ತಿವೆ’ ಎನ್ನುತ್ತಾರೆ ಮುಖ್ಯಶಿಕ್ಷಕ ರಾಠೋಡ್. ಸಂಪರ್ಕಕ್ಕೆ: 99453 05152.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT