ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಗಳಿಗೆ ಕೊಡಲಿ: ಕಾಯ್ದೆ ಪರಿಶೀಲನೆ

ಕಾರಣ ಕೇಳಿದ ಸುಪ್ರೀಂ ಕೋರ್ಟ್
Last Updated 22 ನವೆಂಬರ್ 2018, 19:44 IST
ಅಕ್ಷರ ಗಾತ್ರ

ನವದೆಹಲಿ: ‘ಮರಗಳನ್ನು ಕತ್ತರಿಸುವುದು ಏಕೆ, ಪರಿಸರಕ್ಕೆ ಅತ್ಯುಪಯುಕ್ತವಾದ ಮರಗಳಿಗೆ ಕೊಡಲಿ ಹಾಕಲು ಕಾರಣವಾದರೂ ಏನು’ ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

‘ಒಂದು ಮರ ಕಡಿದರೆ, ಅದಕ್ಕೆ ಬದಲಾಗಿ 10 ಮರ ನೆಡಬೇಕು’ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನೀಡಿರುವ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಗುರುವಾರ ನಡೆಸಿದ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ನ್ಯಾಯಪೀಠ, ಮರಗಳ ಸಂರಕ್ಷಣೆ ಕುರಿತ ಕಾಯ್ದೆಗಳ ಪರಿಶೀಲನೆ ಅಗತ್ಯ ಎಂದು ಅಭಿಪ್ರಾಯಪಟ್ಟಿದೆ.

ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ–1976ರ ಪ್ರಕಾರ ರಾಜ್ಯದಲ್ಲಿ ಒಂದು ಮರವನ್ನು ಕಡಿದಲ್ಲಿ, ಅದಕ್ಕೆ ಬದಲಾಗಿ ಎರಡು ಮರಗಳನ್ನು ಕಡ್ಡಾಯವಾಗಿ ನೆಡಬೇಕು ಎಂಬ ನಿಯಮ ಇದೆ. ಆದರೆ, ಎನ್‌ಜಿಟಿ ತೀರ್ಪು ಈ ನಿಯಮಕ್ಕೆ ವಿರುದ್ಧವಾಗಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲರಾದ ಬಸವಪ್ರಭು ಪಾಟೀಲ ಹಾಗೂ ವಿ.ಎನ್‌. ರಘುಪತಿ ಪೀಠಕ್ಕೆ ಹೇಳಿದರು.

ಇತರ ರಾಜ್ಯಗಳಲ್ಲಿ ಜಾರಿಯಲ್ಲಿರುವ ಕಾಯ್ದೆಗಳ ಮಾನ್ಯತೆಯನ್ನು ಪರಿಶೀಲಿಸುವ ಅಗತ್ಯವಿದೆ. ಈ ಸಂಬಂಧ ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎ.ಎನ್‌. ವೇಣುಗೋಪಾಲ ಗೌಡ ಅವರನ್ನು ನ್ಯಾಯಾಲಯದ ಮಿತ್ರ (ಅಮೆಕಸ್‌ ಕ್ಯೂರಿ)ರನ್ನಾಗಿ ನೇಮಿಸಲಾಗುವುದು ಎಂದು ನ್ಯಾಯಮೂರ್ತಿ ಎಸ್‌.ಅಬ್ದುಲ್‌ ನಜೀರ್‌ ಅವರನ್ನು ಒಳಗೊಂಡ ಪೀಠ ತಿಳಿಸಿತು.

ಎನ್‌ಜಿಟಿ ನೀಡಿರುವ ಆದೇಶವು ಕಾನೂನಿಗೆ ವಿರುದ್ಧವಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಈ ಆದೇಶವನ್ನು ಪಾಲಿಸುವುದು ಪ್ರಾಯೋಗಿಕವಾಗಿ ಕಷ್ಟಸಾಧ್ಯ ಎಂದು ರಾಜ್ಯ ಸರ್ಕಾರ ಈ ಹಿಂದೆ ವಾದ ಮಂಡಿಸಿತ್ತು.

ಮಡಿಕೇರಿಯ ಕಾವೇರಿ ಸೇನೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಎನ್‌ಜಿಟಿ, ‘ಅರಣ್ಯ ಭೂಮಿ ಹಾಗೂ ಖಾಸಗಿ ಒಡೆತನದ ಜಮೀನಿನಲ್ಲಿನ ಒಂದು ಮರವನ್ನು ಕಡಿದಲ್ಲಿ ಅದಕ್ಕೆ ಬದಲಾಗಿ 10 ಮರ ಬೆಳೆಸಬೇಕು’ ಎಂದು ನೀಡಿದ್ದ ಆದೇಶಕ್ಕೆ ನ್ಯಾಯಪೀಠ ಕಳೆದ ಜನವರಿ 10ರಂದು ತಡೆ ನೀಡಿತ್ತು.

ಅರಣ್ಯ ಭೂಮಿ ಅಥವಾ ಖಾಸಗಿ ಜಮೀನಿನಲ್ಲಿನ ಮರ ಕತ್ತರಿಸುವುದು ನಿಷಿದ್ಧ. ಒಂದೊಮ್ಮೆ ಮರಗಳನ್ನು ಕತ್ತರಿಸಿದಲ್ಲಿ ಒಂದು ಮರಕ್ಕೆ ಬದಲಾಗಿ 10 ಮರಗಳನ್ನು ಬೆಳೆಸುವುದು ಕಡ್ಡಾಯ. ಸಸಿ ನೆಡುವುದಕ್ಕೆ ಅರಣ್ಯ ಇಲಾಖೆಗೆ ಸಮರ್ಪಕ ಶುಲ್ಕ ಭರಿಸಬೇಕು. ಕನಿಷ್ಠ 5 ವರ್ಷಗಳ ಕಾಲ ಆ ಸಸಿಗಳ ಪಾಲನೆ ಮಾಡಬೇಕು ಎಂದು ನ್ಯಾಯಮೂರ್ತಿ ಸ್ವತಂತ್ರಕುಮಾರ್‌ ನೇತೃತ್ವದ ಹಸಿರುಪೀಠ 2017ರ ಮಾರ್ಚ್‌ನಲ್ಲಿ ಆದೇಶ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT