ಆನೆ ಹತ್ಯೆಗೆ ಹೊಂಚು; ಬಂಧನ

ಭಾನುವಾರ, ಮಾರ್ಚ್ 24, 2019
27 °C
ಇಬ್ಬರು ಪರಾರಿ; ಪರಾರಿಯಾಗುವಾಗ ಒಬ್ಬನಿಗೆ ಕಾಲು ಮುರಿತ

ಆನೆ ಹತ್ಯೆಗೆ ಹೊಂಚು; ಬಂಧನ

Published:
Updated:
Prajavani

ಹನೂರು: ಮಲೆ ಮಹದೇಶ್ವರ ವನ್ಯಧಾಮದಲ್ಲಿ ಆನೆ ಹತ್ಯೆ ಮಾಡಲು ಹೊಂಚು ಹಾಕುತ್ತಿದ್ದ ಗಂಗನದೊಡ್ಡಿ ಗ್ರಾಮದ ಮುತ್ತಪ್ಪ ಎಂಬುವವನ್ನು ಅರಣ್ಯಾಧಿಕಾರಿ ಸೋಮವಾರ ಬಂಧಿಸಿದ್ದಾರೆ.

ಹನೂರು ಬಫರ್ ವಲಯದ ಎಲ್ಲೇಮಾಳ ಬೀಟ್ ನಲ್ಲಿ ಮುತ್ತರಾಜು ತನ್ನ ಇಬ್ಬರು ಸ್ನೇಹಿತರೊಂದಿಗೆ ನಾಡಬಂದೂಕಿನ ಮೂಲಕ ಆನೆ ಹತ್ಯೆ ಮಾಡಲು ಯತ್ನಿಸುತ್ತಿದ್ದಾಗ ಅವರನ್ನು ವಶಪಡಿಸಿಕೊಳ್ಳಲು ಸಿಬ್ಬಂದಿ ಮುಂದಾದರು. ಆಗ ಇಬ್ಬರು ಪರಾರಿಯಾಗಿ ಮುತ್ತುರಾಜು ಸಿಕ್ಕಿ ಬಿದ್ದಿದ್ದಾನೆ. ಬಂಧಿತನಿಂದ ಮದ್ದಿನ ಪೌಡರ್, ನಾಡಬಮದೂಕಿನ ಗುಂಡುಗಳು, ಕತ್ತಿ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತನಾಗಿರುವ ಮುತ್ತುರಾಜು ಈ ಹಿಂದೆ ಮಲೆಮಹದೇಶ್ವರ ವನ್ಯಧಾಮದ ಹನೂರು ಬಫರ್ ವಲಯದ ಜರ್ಸಿಗುಡ್ಡ ಹಾಗೂ ಉಡುತೊರೆ ಕಳ್ಳಬೇಟೆ ತಡೆ ಶಿಬಿರದಲ್ಲಿ ಗುತ್ತಿಗೆ ಆಧಾರದ ಮೇಲೆ ವಾಚರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಒಂದು ವರ್ಷದ ಹಿಂದೆ ಕೆಲಸ ಬಿಟ್ಟಿದ್ದ. ಈತನೇ ತನ್ನ ಸಂಗಡಿಗರೊಂದಿಗೆ ಬೇಟೆಗೆ ತೆರಳಿದ್ದ ಎನ್ನುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ.

ಸಿಬ್ಬಂದಿ ದಾಳಿ ನಡೆಸಿದ ಸಂದರ್ಭದಲ್ಲಿ ಪರಾರಿಯಾಗಿರುವ ಇಬ್ಬರ ಪೈಕಿ ಒಬ್ಬನಿಗೆ ಕಾಲು ಮುರಿದಿದೆ. ಕಾಡಿನಿಂದ ಹೊರ ಬಂದ ಮೇಲೆ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದಾನೆ. ಆದರೆ, ಅಲ್ಲಿ ಚಿಕಿತ್ಸೆ ದೊರೆಯದ ಕಾರಣ ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದಾನೆ. ಇತ್ತ ತನ್ನ ಸಂಗಡಿಗ ಮುತ್ತುರಾಜು ಅರಣ್ಯಾಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾನೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಆಸ್ಪತ್ರೆಯಲ್ಲಿದ್ದ ಇಬ್ಬರೂ ಪರಾರಿಯಾಗಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ದಾಳಿ ವೇಳೆ ಪರಾರಿಯಾಗಿರುವ ಜಡೇಸ್ವಾಮಿ ವೃತ್ತಿನಿರತ ಬೇಟೆಗಾರ ಎಂಬುದಾಗಿ ಅರಣ್ಯಾಧಿಕಾರಿಗಳು ಶಂಕಿಸಿದ್ದು, ದಾಳಿ ನಡೆಸಿದ ವೇಳೆ ನಾಡಬಂದೂಕಿನ ಸಮೇತ ಪರಾರಿಯಾಗಿದ್ದಾನೆ.

ವಿಶೇಷ ದಿನಗಳಲ್ಲೇ ಬೇಟೆ: ಬೇಟೆಗಾರರು ಬೇಟೆಯಾಡಲು ಹಬ್ಬ ಹಾಗೂ ವಿಶೇಷ ದಿನಗಳಿಗಾಗಿ ಕಾಯುತ್ತಿರುತ್ತಾರೆ. ಶಿವರಾತ್ರಿ ಜಾತ್ರೆಗೆ ಮೂರು ದಿನಗಳ ಕಾಲ ರಜೆ ಇರುವುದರಿಂದ ಸಿಬ್ಬಂದಿ ಅರಣ್ಯದೊಳಗೆ ಬರುವುದಿಲ್ಲ. ಅಲ್ಲದೆ, ಜನಸಂದಣಿ ಅಧಿಕವಾಗಿರುವುದರಿಂದ ಬೇಟೆಯಾಡಿದ ಪ್ರಾಣಿಗಳ ಅಂಗ ಹಾಗೂ ಮಾಂಸವನ್ನು ಸಾಗಿಸುವುದು ಸುಲಭ ಎನ್ನುವುದು ಬೇಟೆಗಾರರ ಯೋಜನೆ. ಹೀಗಾಗಿ ಶಿವರಾತ್ರಿ ಜಾತ್ರೆಯ ಒಂದು ವಾರಕ್ಕೂ ಮುಂಚೆಯಿಂದಲೇ ಆನೆ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ವಿಚಾರಣೆ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.

ತಿಂಗಳ ಹಿಂದೆ ಕಾವೇರಿ ವನ್ಯಧಾಮದ ಕೊತ್ತನೂರು ವನ್ಯಜೀವಿ ವಲಯದಲ್ಲಿ ಆನೆಯನ್ನು ಹತ್ಯೆಗೈದು ಆಸೀಡ್ ಬಳಸಿ ಎರಡು ದಂತಗಳನ್ನು ಕಳವು ಮಾಡಲಾಗಿತ್ತು. ಇದು ಸಂಭವಿಸಿದ್ದುದು ಚಿಕ್ಕಲ್ಲೂರು ಜಾತ್ರೆ ಸಂದರ್ಭದಲ್ಲಿ ಎಂಬುದು ಗಮನಾರ್ಹ. ಬಂಧಿತ ಮುತ್ತಪ್ಪನ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು, ವಲಯ ಅರಣ್ಯಾಧಿಕಾರಿ ಎ.ರುಕಿಯಾ ಪರ್ವಿನ್, ಉಪ ವಲಯ ಅರಣ್ಯಾಧಿಕಾರಿಗಳಾದ ಪ್ರಸಾದ್, ಸಾಲಾನ್, ಅರಣ್ಯ ರಕ್ಷಕ ತೀರ್ಥಪ್ರಸಾದ್ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !