ಭಾನುವಾರ, ಏಪ್ರಿಲ್ 5, 2020
19 °C
ನಾಲ್ಕು ಗಂಟೆಯಲ್ಲಿ 4ಸಾವಿರಕ್ಕೂ ಅಧಿಕ ಮಂದಿಯಿಂದ ಟ್ವೀಟ್‌

ತುಳು ಅಧಿಕೃತ ಭಾಷೆ: ಟ್ವಿಟರ್‌ನಲ್ಲಿ ಮೊಳಗಿದ ಕೂಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಹಾಗೂ ಕೇರಳದಲ್ಲಿ ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಗೆ ಅಧಿಕೃತ ಭಾಷೆಯ ಸ್ಥಾನ ನೀಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೂಗೆಬ್ಬಿದೆ. ‘ಬೆಂಗಳೂರು ತುಳುವಾಸ್‌ ಕೌನ್ಸಿಲ್‌’ ಈ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಟ್ವಿಟರ್‌ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ.

ಸೋಮವಾರ ಸಂಜೆ 6ರಿಂದ ರಾತ್ರಿ 10 ಗಂಟೆವರೆಗೆ ‘#TuluOfficialinKA_KL’ ಹ್ಯಾಷ್‌ಟ್ಯಾಗ್‌ನಲ್ಲಿ ನಡೆದ ಟ್ವಿಟರ್‌ ಅಭಿಯಾನವು ಕರ್ನಾಟಕದಲ್ಲಿ ಅಗ್ರಸ್ಥಾನಕ್ಕೇರಿತ್ತು. ಈ ಕುರಿತು 4 ಸಾವಿರಕ್ಕೂ ಅಧಿಕ ಟ್ವೀಟ್‌ಗಳು ಹರಿದಾಡಿದವು.

ಈ ಅಭಿಯಾನಕ್ಕೆ ತುಳುವರಷ್ಟೇ ಅಲ್ಲದೇ, ರಾಜ್ಯದಲ್ಲಿ ಕನ್ನಡ ಭಾಷೆ ಬಳಕೆಯನ್ನು ಹೆಚ್ಚಿಸುವ ಕುರಿತ ಹೋರಾಟದಲ್ಲಿ ತೊಡಗಿರುವ ಅನೇಕರು ಬೆಂಬಲ ವ್ಯಕ್ತಪಡಿಸಿದರು. ‘ಸಂಸ್ಕೃತಿ ಮತ್ತು ಪರಂಪರೆ ರಕ್ಷಣೆಯ ದೃಷ್ಟಿಯಲ್ಲಿ ಈ ಕಾರ್ಯ ತುರ್ತಾಗಿ ಜಾರಿಯಾಗಬೇಕು’ ಎಂದು ಪ್ರತಿಪಾದಿಸಿದರು.

‘ತುಳುವನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಜಾರಿಗೊಳಿಸುವ ಮುನ್ನ ಅದಕ್ಕೆ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸ್ಥಾನ ಸಿಗಬೇಕು ಎಂಬ ತಪ್ಪುಕಲ್ಪನೆ ಇತ್ತು. ಕೊಂಕಣಿ ಭಾಷೆಯು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರುವುದಕ್ಕೆ ಮುನ್ನವೇ, 1986ರಲ್ಲೇ ಅದು ಗೋವಾ ರಾಜ್ಯದಲ್ಲಿ ಅಧಿಕೃತ ಭಾಷೆಯ ಸ್ಥಾನ ಪಡೆದಿದ್ದು ಗಮನಕ್ಕೆ ಬಂತು. ಹಾಗಾಗಿ ತುಳು ನಾಡಿನ ಶಾಸಕರನ್ನು ಹಾಗೂ ರಾಜಕೀಯ ಮುಖಂಡರನ್ನು ಭೇಟಿಯಾಗಿ ಈ ಬಗ್ಗೆ ಒತ್ತಾಯಿಸಿದ್ದೆವು’ ಎಂದು ‘ಬೆಂಗಳೂರು ತುಳುವಾಸ್‌ ಕೌನ್ಸಿಲ್‌’ನ ವಿಜೇತ್‌ ವೀರಪ್ಪ ಸಾಲ್ಯಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಟ್ವಿಟರ್‌ ಅಭಿಯಾನಕ್ಕೆ ಸಿಕ್ಕ ಜನಬೆಂಬಲದಿಂದ ತುಳುವಿನ ಕುರಿತ ಕೆಲಸ ಮಾಡಲು ಇನ್ನಷ್ಟು ಹುಮ್ಮಸ್ಸು ಬಂದಿದೆ. ರಾಜ್ಯದಲ್ಲಿ  ತುಳುವಿಗೆ ಅಧಿಕೃತ ಭಾಷೆಯ ಸ್ಥಾನ ಸಿಕ್ಕರೆ, ಈ ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸುವ ಹೋರಾಟಕ್ಕೂ ಬಲ ಬರುತ್ತದೆ’ ಎಂದರು.

‘ಉಜಿರೆಯಲ್ಲಿ 2009ರಲ್ಲಿ ನಡೆದಿದ್ದ ವಿಶ್ವ ತುಳು ಸಮ್ಮೇಳನದಲ್ಲಿ ಭಾಗವಹಿಸಿದ್ದ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯದಲ್ಲಿ ತುಳುವನ್ನು ಅಧಿಕೃತ ಭಾಷೆಯನ್ನಾಗಿಸುವ ಬಗ್ಗೆ ಭರವಸೆ ನೀಡಿದ್ದರು. ಈಗ ಮತ್ತೆ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಹಾಗಾಗಿ ಈ ಬಾರಿಯ ವಿಧಾನಮಂಡಲ ಅಧಿವೇಶನದಲ್ಲಿ ಈ ಬಗ್ಗೆ  ಚರ್ಚೆಯಾಗಿ, ಸರ್ಕಾರ ಸ್ಪಷ್ಟ ತೀರ್ಮಾನಕ್ಕೆ ಬರಲಿ ಎಂಬ ಆಶಯದಿಂದ ಈ ಅಭಿಯಾನ ಹಮ್ಮಿಕೊಂಡಿದ್ದೇವೆ’ ಎಂದು ‘ಬೆಂಗಳೂರು ತುಳುವಾಸ್‌ ಕೌನ್ಸಿಲ್‌’ನ ಮಹಿ ಮೂಲ್ಕಿ ತಿಳಿಸಿದರು.

ಗಮನ ಸೆಳೆದ ಟ್ವೀಟ್‌ಗಳು...
‘ಮಹ್ಲ್’ ಭಾಷೆ ಆಡುವವರ ಸಂಖ್ಯೆ ಕೇವಲ 10,250. ಆದರೂ ಅದು ಲಕ್ಷದ್ವೀಪದ ಅಧಿಕೃತ ಭಾಷೆಯಾಗಿದೆ. ತುಳು ಭಾಷಿಕರ ಸಂಖ್ಯೆ 20 ಲಕ್ಷದಷ್ಟಿದೆ. ಆದರೂ ಮಹ್ಲ್ ಭಾಷೆಗೆ ಸಿಕ್ಕ ನ್ಯಾಯ ತುಳುವಿಗೆ ಸಿಕ್ಕಿಲ್ಲ.
–ಉದಯ ಎಂ.

*
ಒಬ್ಬ ಕನ್ನಡಿಗನಾಗಿ ತುಳುವಿಗೆ ಅಧಿಕೃತ ಭಾಷೆಯ ಸ್ಥಾನ ನೀಡಬೇಕೆಂಬ ನನ್ನ ತುಳು ಸೋದರ ಸೋದರಿಯರ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸುತ್ತೇನೆ. ರಾಜ್ಯದಲ್ಲಿ ಬೇರೆ ಭಾಷೆಗಳಿಗೆ ಉತ್ತೇಜನ ನೀಡುವ ಬದಲು ಇಲ್ಲಿನ ಆಡು ಭಾಷೆಯಾದ ತುಳುವಿಗೆ ಆದ್ಯತೆ ನೀಡಬೇಕಾಗಿದೆ.
–ಪ್ರತಾಪ್‌ ಕಣಗಾಲ್‌

*
ತುಳು ಭಾಷೆಗೆ ಬೇರೆ ಭಾಷೆಗಳಿಗೆ ಸಿಗುತ್ತಿರುವಷ್ಟು ಮಹತ್ವ ಸಿಗುತ್ತಿಲ್ಲ. ನಮ್ಮ ತಾಯಿ ನುಡಿಗೂ ಅಷ್ಟೇ ಮಹತ್ವ ಸಿಗುವಂತೆ ಮಾಡುವುದು ನಮ್ಮ ಕರ್ತವ್ಯ.
–ಶ್ರೇಯಸ್‌ ಎಸ್‌. ಶೆಟ್ಟಿ

*
ದ್ರಾವಿಡ ಭಾಷೆಗಳಲ್ಲೊಂದಾದ ತುಳು ಕೇವಲ ಭಾಷೆ ಮಾತ್ರವಲ್ಲ; ಅದೊಂದು ಭಾವನೆ
ಪ್ರಿಯಾ ಪೂಜಾರಿ

*
ಶಾಲೆಗಳಲ್ಲಿ ತುಳು ಮಾತಾಡಿದಕ್ಕೆ ಪೆಟ್ಟು ತಿಂದ ಕೈಗಳಿವು. ನಮ್ಮ ಮಕ್ಕಳಿಗೆ ಈ ಪರಿಸ್ಥಿತಿ ಬರದಿರಲಿ
–ದಿನೇಶ್‌ ಸಾಲ್ಯಾನ್‌ ಬೊಳ್ತೇರ್‌

*
ನಮ್ಮ ನಾಡಿನ ಭಾಷೆಗಳಾದ ತುಳು, ಕೊಂಕಣಿ ಕೊಡವ ಆಯಾ ಭಾಗಗಳಲ್ಲಿ ಅಧಿಕೃತವಾಗಬೇಕು. ನಮ್ಮ ಭಾಷೆಗಳು ಬಲಗೊಳ್ಳುವುದು ಕನ್ನಡದ ಬಲ.
–ಚಂದ್ರು ಕಡ್ಲಜ್ಜಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು