ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶದಲ್ಲಿ ಬಿಜೆಪಿ ಶಕ್ತಿ ಕುಗ್ಗಿಸುವುದೇ ನನ್ನ ಗುರಿ’

ತುಮಕೂರು: ನಾಮಪತ್ರ ಸಲ್ಲಿಸಿ ಜೆಡಿಎಸ್‌ ವರಿಷ್ಠ ಎಚ್. ಡಿ.ದೇವೇಗೌಡರ ಹೇಳಿಕೆ
Last Updated 25 ಮಾರ್ಚ್ 2019, 20:33 IST
ಅಕ್ಷರ ಗಾತ್ರ

ತುಮಕೂರು: ‘ದೇಶದಲ್ಲಿ ಬಿಜೆಪಿ ಶಕ್ತಿ ಕುಗ್ಗಿಸುವುದೇ ನನ್ನ ಗುರಿ. ಅದಕ್ಕಾಗಿ ನನ್ನೆಲ್ಲ ಶಕ್ತಿಯನ್ನು ಈ ಚುನಾವಣೆಯಲ್ಲಿ ಬಳಸುತ್ತೇನೆ’ ಎಂದು ತುಮಕೂರು ಲೋಕಸಭಾ ಕ್ಷೇತ್ರ ಮೈತ್ರಿ ಅಭ್ಯರ್ಥಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇವಲ ತುಮಕೂರು ಕ್ಷೇತ್ರದಲ್ಲಿ ಗೆಲ್ಲುವುದಷ್ಟೇ ನನಗೆ ಮುಖ್ಯವಲ್ಲ. ಎಲ್ಲ ಕಡೆಗೂ ನಾನು ಪ್ರವಾಸ ಮಾಡುತ್ತೇನೆ’ ಎಂದರು.

‘ತುಮಕೂರು ಕ್ಷೇತ್ರ ಅಷ್ಟೇ ಅಲ್ಲ. ರಾಜ್ಯದ ಇತರ ಜಿಲ್ಲೆಗಳಲ್ಲೂ ಕಾಂಗ್ರೆಸ್ ಮುಖಂಡರೊಂದಿಗೆ ಪ್ರವಾಸ ಮಾಡುತ್ತೇನೆ. ಅಲ್ಲದೇ ಬೇರೆ ರಾಜ್ಯಗಳಿಗೂ ಹೋಗಿ ಬಿಜೆಪಿ ವಿರುದ್ಧ ಮತ್ತು ಜಾತ್ಯತೀತ ಪಕ್ಷಗಳ ಪರ ಪ್ರಚಾರ ಮಾಡುತ್ತೇನೆ’ ಎಂದು ಹೇಳಿದರು.

‘ಜಾತ್ಯತೀತ ವ್ಯವಸ್ಥೆಗೆ ಬದ್ಧವಾಗಿರುವ ಬೇರೆ ರಾಜ್ಯಗಳಲ್ಲಿನ ಪ್ರಾದೇಶಿಕ ಪಕ್ಷಗಳು ಆಹ್ವಾನಿಸಿವೆ. ಅಲ್ಲಿಗೂ ಹೋಗಿ ಪ್ರಚಾರ ಮಾಡುತ್ತೇನೆ’ ಎಂದರು.

ಕಾಂಗ್ರೆಸ್ ವರಿಷ್ಠರೇ ಬಿಟ್ಟುಕೊಟ್ಟಿದ್ದು: ‘ದೇಶದಲ್ಲಿ ಬಿಜೆಪಿ ಶಕ್ತಿ ಕುಗ್ಗಿಸಲು ಜತೆಗೂಡಿಯೇ ಲೋಕಸಭೆ ಚುನಾವಣೆ ಎದುರಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿ ತೀರ್ಮಾನ ಮಾಡಲಾಗಿತ್ತು. ಬಿಜೆಪಿ ಹಾಲಿ ಸಂಸದರು ಇರುವ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಮಗೆ ಸ್ಥಾನ ಕೊಡಿ ಎಂದು ಕೇಳಿದ್ದೆ. ಆದರೆ, ಮೈತ್ರಿ ಮಾತಿನ ಪ್ರಕಾರ ಕಾಂಗ್ರೆಸ್ ಬಿಟ್ಟುಕೊಟ್ಟ 8 ಕ್ಷೇತ್ರಗಳಲ್ಲಿ ತುಮಕೂರು ಕ್ಷೇತ್ರವೂ ಒಂದಾಗಿದೆ. ಹೀಗಾಗಿ, ನಾನು ಇಲ್ಲಿ ಸ್ಪರ್ಧಿಸಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

‘ಹೇಮಾವತಿ ನದಿ ನೀರಿನ ವಿಷಯ ಇಟ್ಟುಕೊಂಡು ನನ್ನನ್ನು ಬಿಜೆಪಿಯವರು ಈ ಕ್ಷೇತ್ರದಲ್ಲಿ ಸೋಲಿಸಲು ಆಗಲ್ಲ. ರಾಜ್ಯದ ನೀರಾವರಿ ಯೋಜನೆ ಅನುಷ್ಠಾನಕ್ಕೆ, ರೈತರಿಗೆ ಏನು ಮಾಡಿದ್ದೇನೆ ಎಂಬುದು ದೇಶಕ್ಕೆ ಗೊತ್ತಿದೆ’ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾತನಾಡಿ,‘ ಪಕ್ಷದ ಹೈಕಮಾಂಡ್ ಮತ್ತು ಜೆಡಿಎಸ್ ವರಿಷ್ಠರು ಮಾತುಕತೆ ನಡೆಸಿ ಕೈಗೊಂಡ ತೀರ್ಮಾನ ಮೈತ್ರಿ. ಈ ಮೈತ್ರಿ ಮಾತುಕತೆ ಪ್ರಕಾರ ಲೋಕಸಭಾ ಸ್ಥಾನ ಹಂಚಿಕೆಯಾಗಿದ್ದು, ಜೆಡಿಎಸ್‌ಗೆ ಸೇರಿದ ತುಮಕೂರು ಕ್ಷೇತ್ರಕ್ಕೆ ದೇವೇಗೌಡರು ಸ್ಪರ್ಧಿಸಿದ್ದಾರೆ. ಅವರನ್ನು ಖಂಡಿತ ಗೆಲ್ಲಿಸಲು ಶ್ರಮಿಸುತ್ತೇವೆ’ ಎಂದರು.

’ದೇವೇಗೌಡರು, ಜಿಲ್ಲೆಗೆ, ರಾಜ್ಯಕ್ಕೆ ಸೀಮಿತರಾದ ನಾಯಕರಲ್ಲ. ರಾಷ್ಟ್ರ ಮಟ್ಟದ ನಾಯಕರಾಗಿದ್ದು, ದೇಶದಲ್ಲಿ ಬಿಜೆಪಿ ಕೋಮುವಾದಿ ಶಕ್ತಿ ಅಧಿಕಾರದಿಂದ ದೂರ ಇಡುವ ಕಾಂಗ್ರೆಸ್ ಮತ್ತು ಇತರ ಪ್ರಾದೇಶಿಕ ಪಕ್ಷಗಳ ಪ್ರಯತ್ನಕ್ಕೆ ದೇವೇಗೌಡರಂತಹ ನಾಯಕರ ಕೊಡುಗೆಯೂ ಅವಶ್ಯ. ಹೀಗಾಗಿ, ಅವರನ್ನು ಗೆಲುವಿಗೆ ಶ್ರಮಿಸುವುದು ಮೈತ್ರಿ ಪಕ್ಷಗಳ ಹೊಣೆಯಾಗಿದೆ’ ಎಂದರು.

ನಾಮಪತ್ರ ಹಿಂದಕ್ಕೆ ತೆಗೆಸುವೆ: ‘ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕ ಕೆ.ಎನ್.ರಾಜಣ್ಣ ನಾಮಪತ್ರ ಸಲ್ಲಿಸಿದ್ದಾರೆ. ಅವರೊಂದಿಗೆ ಮಾತುಕತೆ ನಡೆಸಿ ನಾಮಪತ್ರ ಹಿಂದಕ್ಕೆ ತೆಗೆಸುತ್ತೇನೆ. ನನ್ನ ಮನವಿಗೆ ಅವರು ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಡಾ.ಪರಮೇಶ್ವರ ನುಡಿದರು.

‘ಮುದ್ದಹನುಮೇಗೌಡರೇ ವಿನಂತಿಸಿದ್ದರು’

ಹೊಳೆನರಸೀಪುರ: ‘ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದುಕೊಂಡಿದ್ದೆ. ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಸಂಸದ ಮುದ್ದಹನುಮೇಗೌಡ ಬಂದು ತುಮಕೂರಿನಿಂದ ಸ್ಪರ್ಧಿಸಲು ವಿನಂತಿಸಿದ್ದರು. ಅವರ ಮನವಿ ಗೌರವಿಸಿದೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT