ದೇವೇಗೌಡರ ಸ್ಪರ್ಧೆ: ಮುಂದುವರಿದ ಅನಿಶ್ಚಿತತೆ

ಗುರುವಾರ , ಏಪ್ರಿಲ್ 25, 2019
29 °C

ದೇವೇಗೌಡರ ಸ್ಪರ್ಧೆ: ಮುಂದುವರಿದ ಅನಿಶ್ಚಿತತೆ

Published:
Updated:
Prajavani

ಬೆಂಗಳೂರು: ತುಮಕೂರು ಅಥವಾ ಬೆಂಗಳೂರು ಉತ್ತರ – ಈ ಎರಡು ಕ್ಷೇತ್ರಗಳ ಪೈಕಿ ಯಾವುದು ‘ಸೂಕ್ತ’ ಎಂಬ ಗೊಂದಲದಲ್ಲಿದ್ದಾರೆ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ.

ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧಿಸಿದಂತೆ ಸಚಿವ ಕೃಷ್ಣ ಬೈರೇಗೌಡ ಜೊತೆ ಗುರುವಾರ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ದೇವೇಗೌಡರು, ‘ತುಮಕೂರಿನಿಂದಲೇ ಸ್ಪರ್ಧಿಸುವಂತೆ ಅಲ್ಲಿನವರು ಹಿಂಸೆ ಮಾಡುತ್ತಿದ್ದಾರೆ. ಬೆಂಗಳೂರು ಉತ್ತರದಿಂದ ಸ್ಪರ್ಧೆ ಮಾಡುವಂತೆಯೂ ಒತ್ತಡ ಇದೆ. ಈ ಬಗ್ಗೆ ಕೃಷ್ಣ ಬೈರೇಗೌಡರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದೇನೆ. ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಕೃಷ್ಣ ಬೈರೇಗೌಡ ಮಾತನಾಡಿ, ‘ಬೆಂಗಳೂರು ಉತ್ತರ ಕ್ಷೇತ್ರದಿಂದ ದೇವೇಗೌಡರು ಕಣಕ್ಕಿಳಿಯಬೇಕು ಎಂದು ಕ್ಷೇತ್ರ ವ್ಯಾಪ್ತಿಯ ಎಲ್ಲ ಕಾಂಗ್ರೆಸ್‌ ಶಾಸಕರು ಮತ್ತು ನಾಯಕರು ಮನವಿ ಮಾಡಿದ್ದೆವು. ಈ ಒಮ್ಮತದ ಅಭಿಪ್ರಾಯವನ್ನು ಅವರಿಗೆ ತಿಳಿಸಿದಾಗ, ಯೋಚಿಸಿ ಹೇಳುತ್ತೇನೆ ಎಂದಿದ್ದ ಅವರು ತಾವೇ ಬಂದು ಮಾತನಾಡಿದ್ದಾರೆ’ ಎಂದರು.

‘ದೇವೇಗೌಡರ ಜೊತೆ ಮತ್ತೊಮ್ಮೆ ಮಾತನಾಡುತ್ತೇವೆ. ನಾವು ಯಾವುದೇ ಬೇರೆ ಆಯ್ಕೆ ಇಟ್ಟುಕೊಂಡಿಲ್ಲ. ನೀವೇ ಕಣಕ್ಕಿಳಿಯಬೇಕೆಂದು ಅವರನ್ನು ಒತ್ತಾಯಿಸುತ್ತೇವೆ’ ಎಂದರು.

ಕೃಷ್ಣ ಬೈರೇಗೌಡ ಅಥವಾ ಬಿ.ಎಲ್‌. ಶಂಕರ್‌ ಅವರನ್ನು ಬೆಂಗಳೂರು ಉತ್ತರದಿಂದ ಕಣಕ್ಕಿಳಿಸಲು ದೇವೇಗೌಡರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕೃಷ್ಣ ಬೈರೇಗೌಡ, ‘ಒಡಂಬಡಿಕೆ ಪ್ರಕಾರ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಕೊಟ್ಟಿದ್ದೇವೆ. ಮತ್ತೆ ಕಾಂಗ್ರೆಸ್ ಪಡೆದುಕೊಳ್ಳುವ ಪ್ರಸ್ತಾಪ ಇಲ್ಲ. ನಾನಂತೂ ಸ್ಪರ್ಧಿಸಲು ಸಿದ್ಧನಿಲ್ಲ. ಈ ವಿಷಯವನ್ನು ಈಗಾಗಲೇ ಪಕ್ಷದ ನಾಯಕರ ಗಮನಕ್ಕೂ ತಂದಿದ್ದೇನೆ’ ಎಂದರು.

* ಚುನಾವಣೆಗೆ ನಿಲ್ಲುವ ಬಗ್ಗೆ ದೇವೇಗೌಡರು ಇನ್ನೂ ತೀರ್ಮಾನ ಮಾಡಿಲ್ಲ. ನಿಲ್ಲುವುದಾದರೆ ತುಮಕೂರು ಅಥವಾ ಬೆಂಗಳೂರು ಉತ್ತರದಿಂದ ಸ್ಪರ್ಧೆ ಮಾಡಲಿದ್ದಾರೆ
-ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !