ಮಂಗಳವಾರ, ಸೆಪ್ಟೆಂಬರ್ 17, 2019
24 °C

ತುಂಗಭದ್ರಾ ಒಳಹರಿವು, ಹೊರಹರಿವು ಹೆಚ್ಚಳ

Published:
Updated:
Prajavani

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು, ಹೊರಹರಿವು ಶನಿವಾರ ಮತ್ತಷ್ಟು ಹೆಚ್ಚಾಗಿದೆ.

95,714 ಕ್ಯುಸೆಕ್‌ ಒಳಹರಿವು ದಾಖಲಾಗಿದ್ದು, 1,10,000 ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ. 33 ಕ್ರಸ್ಟ್‌ಗೇಟ್‌ಗಳ ಪೈಕಿ 28 ಗೇಟ್‌ಗಳಿಂದ ನೀರು ಹರಿ ಬಿಡಲಾಗುತ್ತಿದೆ. ಎಡದಂಡೆ, ಬಲದಂಡೆ ಹಾಗೂ ವಿಜಯನಗರದ ಉಪಕಾಲುವೆಗಳಿಗೆ ಒಟ್ಟು 11,200 ಕ್ಯುಸೆಕ್‌ ನೀರು ಬಿಡಲಾಗುತ್ತಿದೆ.

ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವ ಕಾರಣ ತಾಲ್ಲೂಕಿನ ಹಂಪಿ ಪುರಂದರ ಮಂಟಪ, ಚಕ್ರತೀರ್ಥ, ವಿಜಯನಗರ ಕಾಲದ ಕಾಲು ಸೇತುವೆ ಬಹುತೇಕ ಮುಳುಗಡೆಯಾಗಿದೆ. ತಾಲ್ಲೂಕಿನ ಹಂಪಿ, ವೆಂಕಟಾಪುರ, ಬುಕ್ಕಸಾಗರದಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಅಲ್ಲಿನ ಜನರಿಗೆ ತಿಳಿಸಲಾಗಿದೆ. ಯಾಂತ್ರೀಕೃತ ದೋಣಿ, ಹರಿಗೋಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಹಂಪಿ–ವಿರೂಪಾಪುರ ಗಡ್ಡಿ ನಡುವೆ ಸಂಪರ್ಕ ಕಡಿತಗೊಂಡಿದೆ.

ಒಟ್ಟು 133 ಟಿ.ಎಂ.ಸಿ. ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 100.855 ಟಿ.ಎಂ.ಸಿ. ಅಡಿ ನೀರು ಸಂಗ್ರಹವಾಗಿದ್ದು, 32 ಟಿ.ಎಂ.ಸಿ. ಅಡಿಗೂ ಹೆಚ್ಚು ಹೂಳು ತುಂಬಿಕೊಂಡಿದೆ. ‘ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಶಿವಮೊಗ್ಗದ ತುಂಗಾ, ಭದ್ರಾ ಅಣೆಕಟ್ಟೆಯಿಂದ ನೀರು ಹರಿಸುತ್ತಿರುವುದರಿಂದ ಒಳಹರಿವು ಇನ್ನೂ ಕೆಲವು ದಿನ ಇದೇ ರೀತಿ ಇರುವ ಸಾಧ್ಯತೆ ಇದೆ’ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ತಿಳಿಸಿದೆ.

Post Comments (+)