ಸೋಮವಾರ, ಅಕ್ಟೋಬರ್ 21, 2019
22 °C
ತಂದೆಯನ್ನು ಹುಡುಕಿ ಬಂದ ಮಗನ ಪ್ರಕರಣಕ್ಕೆ ಮತ್ತೊಂದು ತಿರುವು

‘ನಾನೇ ನಿಜವಾದ ಮಗ, ಡಿ.ಎನ್‌.ಎ ಪರೀಕ್ಷೆಗೂ ಸಿದ್ಧ’

Published:
Updated:
Prajavani

ಅಂಕೋಲಾ: ತಾನು ಕಿರಿಯ ಮಗ ಎಂದು ತಾಲ್ಲೂಕಿನ ಕೇಣಿಗೆ 30 ವರ್ಷಗಳ ಬಳಿಕ ವ್ಯಕ್ತಿಯೊಬ್ಬರು ಹುಡುಕಿಕೊಂಡು ಬಂದ ಪ್ರಕರಣ ಮಂಗಳವಾರ ಮತ್ತೊಂದು ತಿರುವು ಪಡೆಯಿತು. ಈಗಾಗಲೇ ಮನೆಯಲ್ಲೇ ಇರುವ ವ್ಯಕ್ತಿಯು ತಾನೇ ನಿಜವಾದ ಕಿರಿಯ ಮಗ ಎಂದು ಜನನ ಪ್ರಮಾಣ ಪತ್ರದೊಂದಿಗೆ ಹೇಳಿಕೆ ನೀಡಿದ್ದಾರೆ.

ಕೇಣಿಯ ವೆಂಕಟ್ರಮಣ ನಾಯ್ಕ ಅವರ ಕಿರಿಯ ಮಗ ಮಂಜು ಎಂದು  ಪರಿಚಯಿಸಿಕೊಂಡ  ವ್ಯಕ್ತಿಯೊಬ್ಬರು ಭಾನುವಾರ ಅವರ ಮನೆಗೆ ಬಂದಿದ್ದರು. ಹಾಗಿದ್ದರೆ ಈಗಾಗಲೇ 17 ವರ್ಷಗಳಿಂದ ಮಗ ಎಂದುಕೊಂಡು ತನ್ನ ಜೊತೆಗಿರುವ ವ್ಯಕ್ತಿ ಯಾರು ಎಂದು ವೆಂಕಟ್ರಮಣ ನಾಯ್ಕ ಗೊಂದಲಕ್ಕೀಡಾಗಿದ್ದರು. ಅಲ್ಲದೇ ಕಲಘಟಗಿಯಿಂದ ಬಂದವನೇ ತನ್ನ ನಿಜವಾದ ಕಿರಿಯ ಮಗ ಎಂದು ಅಪ್ಪಿಕೊಂಡು ಸಂಭ್ರಮಿಸಿದ್ದರು.

ಆ ಸಂದರ್ಭದಲ್ಲಿ, ಇಷ್ಟು ವರ್ಷ ಜೊತೆಗಿದ್ದ ವ್ಯಕ್ತಿ ಮೀನುಗಾರಿಕೆಗೆ ಹೋಗಿದ್ದ ಕಾರಣ ಅವರ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಮಂಗಳವಾರ ಸುದ್ದಿಗಾರರ ಮುಂದೆ ಕಾಣಿಸಿಕೊಂಡ ಅವರು, ತಾನೇ ಕಿರಿಯ ಮಗ ಎಂದು ಹೇಳಿದರು.

ಇದನ್ನೂ ಓದಿ... ಕಿರಿಯ ಮಗ ಸಿಕ್ಕಿದ; ಹಾಗಿದ್ದರೆ ಇಷ್ಟು ಸಮಯ ಜೊತೆಗಿದ್ದವನು ಯಾರು!

‘ಕಿರಿಯ ಮಗ ಮಂಜು ಎಂದು ಬಂದಿರುವ ವ್ಯಕ್ತಿ ಯಾರೆಂದು ಗೊತ್ತಿಲ್ಲ. ನಾನು ಚಿಕ್ಕವನಿದ್ದಾಗ ತಾಯಿಯೊಂದಿಗೆ ಕಲಘಟಗಿಯಲ್ಲೇ ಇದ್ದೆ. ಅಲ್ಲಿಂದ ಲಾರಿಯಲ್ಲಿ ಯಾರೋ ಕರೆದುಕೊಂಡು ಬಂದರು. ನಂತರ ಅಲ್ಲಿ, ಇಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದೆ’ ಎಂದು ತಿಳಿಸಿದರು.

‘ನಿನ್ನ ಮಗ ಅವರ್ಸಾದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು 13 ವರ್ಷಗಳ ಹಿಂದೆ ಯಾರೋ ನನ್ನ ತಂದೆಗೆ ತಿಳಿಸಿದರಂತೆ. ಆಗ ತಂದೆ ನನ್ನನ್ನು ಮನೆಗೆ ಕರೆದುಕೊಂಡು ಬಂದರು. ಅಂದಿನಿಂದ ಅಣ್ಣ ಸುರೇಶನ ಜೊತೆ ಇಬ್ಬರೂ ತಂದೆಯನ್ನು ನೋಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಾಲ್ಕೈದು ದಿನಗಳ ಹಿಂದೆ ಬಂದಿರುವ ವ್ಯಕ್ತಿ ಯಾರೆಂದು ತಂದೆಯೇ ತಿಳಿಸಬೇಕು’ ಎಂದು ಹೇಳಿದರು.

‘ಡಿ.ಎನ್.ಎ ಅಥವಾ ಇನ್ಯಾವುದೇ ಪರೀಕ್ಷೆಗೂ ನಾನು ಸಿದ್ಧನಿದ್ದೇನೆ. ಇಲ್ಲವೇ ಕಿರಿಯ ಮಗ ಯಾರು ಎಂದು ಊರ ಜನರೇ ಗುರುತಿಸಲಿ. ಅಪ್ಪ 15 ವರ್ಷಗಳಿಂದ ನನ್ನ ಜೊತೆಗೆ ಇದ್ದಾರೆ. ನನಗೆ ಅಪ್ಪ, ನನ್ನ ಮಕ್ಕಳಿಗೆ ಅಜ್ಜ ಬೇಕು’ ಎಂದು ತಂದೆಯ ಜೊತೆಗೆ ಇರುವ ಮಂಜು ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)