ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣು ಕುಸಿದು ಇಬ್ಬರು ಕಾರ್ಮಿಕರ ದುರ್ಮರಣ

ಪವಾಡ ಸದೃಶ ರೀತಿಯಲ್ಲಿ ನಾಲ್ವರು ಪಾರು
Last Updated 7 ನವೆಂಬರ್ 2018, 11:53 IST
ಅಕ್ಷರ ಗಾತ್ರ

ಮಡಿಕೇರಿ: ಪ್ರಕೃತಿ ವಿಕೋಪದ ದುರಂತ ಮರೆಯುವೇ ಮುನ್ನವೇ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ನಗರದ ಗೌಳಿಬೀದಿಯಲ್ಲಿ ಮಂಗಳವಾರ ಸಂಜೆ ನಿರ್ಮಾಣ ಹಂತದ ಕಟ್ಟಡದ ಬಳಿ ತಡೆಗೋಡೆ ನಿರ್ಮಿಸಲು ಮಣ್ಣು ತೆಗೆಯುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಹಾಸನ ಜಿಲ್ಲೆ, ಬೇಲೂರು ತಾಲ್ಲೂಕು ಯಲಹಂಕದ ನಿವಾಸಿ ಗೌರಮ್ಮ (45), ಚಿಕ್ಕಮಗಳೂರು ತಾಲ್ಲೂಕು ಮಾದೇರಹಳ್ಳಿಯ ಯಶೋದಾ (20) ಅವರು ಸ್ಥಳದಲ್ಲೇ ಭೂಸಮಾಧಿಯಾದರೆ, ಗೌರಮ್ಮ ಅವರ ಪತಿ ಮಾಷ ಬೋವಿ ಹಾಗೂ ನಂಜುಂಡ ಅವರನ್ನು ರಕ್ಷಣೆ ಮಾಡಲಾಗಿದೆ.

ಪವಾಡ ಸದೃಶ ರೀತಿಯಲ್ಲಿ ಪಾರು: ಪಿ. ರಮೇಶ್‌ ಅವರಿಗೆ ಸೇರಿದ್ದ ಕಟ್ಟಡದ ಬಳಿ ತಡೆಗೋಡೆ ನಿರ್ಮಿಸಲು ಆರು ಮಂದಿ ಕಾರ್ಮಿಕರು ಮಣ್ಣು ತೆರವು ಮಾಡುತ್ತಿದ್ದರು. ಮಳೆಯ ಹೊಡೆತಕ್ಕೆ ಸಡಿಲಗೊಂಡಿದ್ದ ಮಣ್ಣು 20 ಅಡಿ ಎತ್ತರದಿಂದ ಏಕಾಏಕಿ ಕುಸಿದು ಬಿದ್ದಿದೆ. ಆಗ ನಾಲ್ವರು ಮಣ್ಣಿನ ಅಡಿ ಸಿಲುಕಿಕೊಂಡಿದ್ದರು. ಮಾಷ ಬೋವಿ ಹಾಗೂ ನಂಜುಂಡ ಅವರ ಮೇಲೆ ಅಪಾರ ಪ್ರಮಾಣದ ಮಣ್ಣು ಬಿದ್ದಿತ್ತು. ಸ್ಥಳದಲ್ಲೇ ಅವರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಆಮ್ಲಜನಕ ಪೂರೈಸಿ ಅರ್ಧ ಗಂಟೆಯ ಕಾರ್ಯಾಚರಣೆ ಬಳಿಕ ಅಗ್ನಿಶಾಮಕ ದಳ ಹಾಗೂ ಪೊಲೀಸರು ಅವರನ್ನು ರಕ್ಷಿಸಿದರು. ವೇಗವಾಗಿ ಕಾರ್ಯಾಚರಣೆ ನಡೆಸಿದರೂ ಮತ್ತಿಬ್ಬರು ಕಾರ್ಮಿಕರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಅದಕ್ಕೂ ಮೊದಲು ಸವಿತಾ ಹಾಗೂ ಹೊನ್ನ ಬೋವಿ ಅವರು ಅಪಾಯಕಂಡು ಪವಾಡ ಸದೃಶ ರೀತಿಯಲ್ಲಿ ಪ್ರಾಣ ಉಳಿಸಿಕೊಂಡಿದ್ದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರಿದ ಬೆಳಕು: ಮಣ್ಣು ಕೆಲಸಕ್ಕಾಗಿ ದೂರದ ಊರುಗಳಿಂದ ಕಾರ್ಮಿಕರು ಮಡಿಕೇರಿಗೆ ಆಗಮಿಸುತ್ತಾರೆ. ಆದರೆ, ಈ ಬಾರಿ ಮಳೆ ಹೊಡೆತಕ್ಕೆ ಮಣ್ಣು ಸಂಪೂರ್ಣ ಸಡಿಲವಾಗಿದೆ. ಕಾರ್ಮಿಕರು ತಳಬದಿಯಲ್ಲಿ ನಿಂತು ಕೆಲಸ ಮಾಡುವುದು ಅತ್ಯಂತ ಅಪಾಯಕಾರಿ ಸ್ಥಿತಿಯಿದೆ. ಮಾಲೀಕರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಕೆಲಸ ಮಾಡಿಸುತ್ತಿದ್ದರು. ಅದೇ ದುರಂತಕ್ಕೆ ಕಾರಣ ಎಂದು ಕಾರ್ಮಿಕ ಸಂಘಟನೆಗಳು ದೂರಿವೆ.

‘ದೀಪಾವಳಿ ಹಬ್ಬಕ್ಕೆಂದು ಬುಧವಾರ ಊರಿಗೆ ತೆರಳುವ ಸಿದ್ಧತೆಯಲ್ಲಿದ್ದೆವು. ಹೀಗಾಗಿ, ವೇಗವಾಗಿ ಕೆಲಸ ಮಾಡುತ್ತಿದ್ದೆವು. ಅಷ್ಟರಲ್ಲಿ ಜೊತೆಯಲ್ಲಿದ್ದವರ ಪ್ರಾಣವೇ ಹೋಯಿತು’ ಎಂದು ಗಾಯಾಳು ನಂಜುಂಡ ಕಣ್ಣೀರು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT